*ಗೋಣಿಕೊಪ್ಪ, ಸೆ. ೧೫ : ಗೋಣಿಕೊಪ್ಪ ದಸರಾ ಆಚರಣೆಗೆ ೧ ಕೋಟಿ ರೂ. ಅನುದಾನ ದೊರೆಯುವ ನಿರೀಕ್ಷೆ ಇದೆ ಎಂದು ಗೋಣಿಕೊಪ್ಪ ದಸರಾ ಮಾತೃ ಸಂಸ್ಥೆಯಾಗಿರುವ ಶ್ರೀ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಹೇಳಿದರು.
ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿ, ಈಗಾಗಲೇ ಅಧ್ಯಕ್ಷರಾಗಿ ನನಗೆ ಅವಕಾಶ ನೀಡಿದ್ದು, ಅಧಿಕಾರ ಸ್ವೀಕಾರದ ನಂತರ ಶಾಸಕರಿಗೆ ವಿಶೇಷವಾಗಿ ಮನವಿ ಮಾಡಿಕೊಳ್ಳಲಾಗುವುದು. ೧ ಕೋಟಿ ಅನುದಾನ ನೀಡುವ ನಿರೀಕ್ಷೆ ಇದ್ದು, ಅಚ್ಚುಕಟ್ಟಾಗಿ ನಡೆಸಲು ಯೋಜನೆ ರೂಪಿಸಿಕೊಳ್ಳಲಾಗುವುದು. ದಸರಾ ಕೇಂದ್ರ ಬಿಂದು ಆಗಿರುವ ಮಂಟಪ ಸಮಿತಿಗಳಿಗೆ ತಲಾ ೩ ಲಕ್ಷ ರೂ. ಪ್ರೋತ್ಸಾಹ ಧನ ನೀಡುವ ಚಿಂತನೆ ಇದೆ. ಬರಗಾಲದ ಮುನ್ಸೂಚನೆ ಇರುವುದರಿಂದ ಅನುದಾನ ಕಡಿತಗೊಂಡಲ್ಲಿ ಪೂರಕವಾಗಿ ಯೋಜನೆ ರೂಪಿಸಬೇಕಾಗುತ್ತದೆ. ಸರ್ಕಾರ ಅನುದಾನದ ಮೊತ್ತದ ಮೇಲೆ ಅವಲಂಭಿತವಾಗಿದೆ ಎಂದರು.
ಸಾರ್ವಜನಿಕರ ಸಹಕಾರದಲ್ಲಿ ದಸರಾ ಆಚರಣೆ ನಡೆಯುತ್ತಿದೆ. ಸರ್ಕಾರದ ಅನುದಾನ ಆಚರಣೆಗೆ ಬೆನ್ನೆಲುಬು. ಇದರಂತೆ ವಿಭಿನ್ನ ಚಿಂತನೆಯಲ್ಲಿ ಆಚರಣೆ ಮಾಡಲಾಗುವುದು. ಸ್ಥಳೀಯ ಶಾಸಕರು, ಮುಖ್ಯಮಂತ್ರಿ ಕಾನೂನು ಸಲಹೆಗಾರರು ಆಗಿರುವ ಎ. ಎಸ್. ಪೊನ್ನಣ್ಣ ಅವರಿಂದ ಹೆಚ್ಚಿನ ಅನುದಾನದ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಅವರಲ್ಲೂ ಕೂಡ ದಸರಾ ಆಚರಣೆಗೆ ವಿಶೇಷ ಚಿಂತನೆ ಇದ್ದು, ಅವುಗಳನ್ನು ಅಳವಡಿಸಿಕೊಳ್ಳ ಲಾಗುವುದು. ಮಂಟಪ ಸಮಿತಿಗಳ ನೋವು -ನಲಿವು ಕೂಡ ನನಗೆ ಅರಿವು ಇರುವುದರಿಂದ ಉತ್ತಮ ಅನುದಾನ ನೀಡಲಾಗುವುದು. ಸ್ತಬ್ದಚಿತ್ರಗಳ ಭಾಗವಹಿಸುವಿಕೆ ಹೆಚ್ಚಿಸಲು ಪ್ರಯೋಗ ನಡೆಸಲಾಗುವುದು. ಹಳ್ಳಿಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ವೇದಿಕೆ ಕಾರ್ಯಕ್ರಮದಲ್ಲಿ ಅನವಶ್ಯಕ ಸಮಯ ಪೋಲು ಆಗುತ್ತಿರುವ ಭಾಷಣ ಕೂಡ ಕಡಿತಗೊಳಿಸುವ ಚಿಂತನೆ ಇದೆ. ಲೈಟಿಂಗ್ ಮೂಲಕ ಕಲಾಭಿಮಾನಿ ಗಳನ್ನು ಸೆಳೆಯುವಂತೆ ಯೋಜನೆ ರೂಪಿಸಲಾಗುವುದು. ಎಲ್ಲರ ಸಹಕಾರ ಮುಖ್ಯ. ಹಿರಿಯರ ಮಾರ್ಗದರ್ಶನ, ಸಲಹೆ ಪಡೆದುಕೊಂಡು ಮುಂದುವರಿಯಲಾಗುವುದು ಎಂದು ಅವರು ಹೇಳಿದರು.
ನಿಕಟಪೂರ್ವ ಅಧ್ಯಕ್ಷ ಬಿ. ಎನ್. ಪ್ರಕಾಶ್ ಮಾತನಾಡಿ, ದಸರಾ ಆಚರಣೆ ಮೂಲಕ ಗೋಣಿಕೊಪ್ಪ ಸಾಂಸ್ಕೃತಿಕ ನಗರಿ ಎಂದು ಕರೆಸಿಕೊಳ್ಳುವ ಹಂತಕ್ಕೆ ಬಂದಿದೆ. ಯುವಪೀಳಿಗೆ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಬರುವಂತೆ ಕಾರ್ಯಕ್ರಮ ನೀಡಬೇಕಿದೆ. ಅಧ್ಯಕ್ಷರ ಅಭಿರುಚಿ ಕೂಡ ಮುಖ್ಯವಾಗುತ್ತದೆ. ಸ್ತಬ್ದಚಿತ್ರ ಕಾರ್ಯಕ್ರಮದಲ್ಲಿ ಇಲಾಖೆಗಳ ಪ್ರಗತಿ, ಸಂದೇಶ, ಪೌರಾಣಿಕ, ಸಾಮಾಜಿಕ ಚಿಂತನೆಗಳ ಮೂರು ಬಗೆಯ ಚಿತ್ರಗಳು ಅವಶ್ಯವಾಗಿದೆ. ಮಂಟಪ ಸಮಿತಿಗೆ ಕಳೆದ ವರ್ಷ ತಲಾ ೧.೬೦ ಲಕ್ಷ ರೂ. ಪ್ರೋತ್ಸಾಹ ಧನ ನೀಡುವ ಮೂಲಕ ಮಡಿಕೇರಿ ದಸರಾ ಆಚರಣೆಯಲ್ಲಿ ನೀಡುವ ಮೊತ್ತಕ್ಕಿಂತ ಹೆಚ್ಚು ನೀಡಲಾಗಿದೆ. ಮಂಟಪ ಪ್ರದರ್ಶನ ಆಚರಣೆಯ ಕೇಂದ್ರಬಿAದು ಎಂದರು. ದಸರಾ ಅನುದಾನ ಜಿಲ್ಲಾಧಿಕಾರಿ ಖಾತೆ ಮೂಲಕ ಕೆ೨ ನಿಯಮದಂತೆ ನಿರ್ವಹಿಸಲಾಗುತ್ತಿದೆ. ಸಮಿತಿ ವತಿಯಿಂದ ಕಾರ್ಯಕ್ರಮಗಳ ನಡೆಸಿರುವ ವಿವರ ಜಿಲ್ಲಾಧಿಕಾರಿಗಳಿಗೆ ನೀಡಲಾಗುತ್ತದೆ. ಇದರಂತೆ ಕಲಾವಿದರಿಗೆ ಹಣ ಖಾತೆಗೆ ಹೋಗುತ್ತದೆ. ಕಾವೇರಿ ದಸರಾ ಸಮಿತಿ ಆಡಿಟ್ ಮೂಲಕ ಸಾರ್ವಜನಿಕರಿಗೆ ಲೆಕ್ಕಪತ್ರ ಮಂಡನೆ ಮಾಡುವ ಅವಶ್ಯಕತೆ ಬರುವುದಿಲ್ಲ. ಎಲ್ಲವೂ ಸರ್ಕಾರ ನಿಭಾಯಿಸುತ್ತಿದೆ ಎಂದರು.
ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮನ್ನಕಮನೆ ಸೌಮ್ಯ ಬಾಲು ಮಾತನಾಡಿ, ದಸರಾ ಆಚರಣೆಗೆ ಎಲ್ಲರ ಸಹಕಾರ ಅಗತ್ಯ. ಪಂಚಾಯಿತಿ ಕೂಡ ಸೂಕ್ತ ರೀತಿಯಲ್ಲಿ ಬೆಂಬಲ ನೀಡಲಿದೆ ಎಂದರು.
ಸAಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಪ್ರ. ಕಾರ್ಯದರ್ಶಿ ಎನ್. ಎನ್. ದಿನೇಶ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಹೆಚ್.ಕೆ. ಜಗದೀಶ್, ಸಂಘದ ಪ್ರಮುಖರಾದ ವಿ. ವಿ. ಅರುಣ್‌ಕುಮಾರ್, ಮಂಡೇಡ ಅಶೋಕ್, ದರ್ಶನ್ ದೇವಯ್ಯ, ಜಗದೀಶ್ ಜೋಡುಬೀಟಿ, ಡಿ. ನಾಗೇಶ್, ಸಿಂಗಿ ಸತೀಶ್ ಇದ್ದರು.