ಸಿದ್ದಾಪುರ, ಸೆ. ೧೬: ಅಕ್ರಮ ಬೀಟೆ ಮರ ಸಾಗಾಟ ಮಾಡುತ್ತಿದ್ದ ವೇಳೆ ಅರಣ್ಯಾಧಿಕಾರಿಗಳು ಇಬ್ಬರನ್ನು ಬಂಧಿಸಿ ವಾಹನ ವಶಪಡಿಸಿಕೊಂಡಿದ್ದಾರೆ.
ವೀರಾಜಪೇಟೆ ಅರಣ್ಯ ವಲಯ ವ್ಯಾಪ್ತಿಯ ಕೊಳತ್ತೋಡು ಬೈಗೋಡು ಗ್ರಾಮದ ಸಮೀಪ ಗೋಣಿಕೊಪ್ಪ-ವೀರಾಜಪೇಟೆ ಮುಖ್ಯ ರಸ್ತೆಯಲ್ಲಿ ಅಕ್ರಮವಾಗಿ ಬೀಟೆ ಮರದ ನಾಟಗಳನ್ನು ತುಂಬಿ ಸಾಗಿಸುತ್ತಿದ್ದ ಈಚರ್ ವಾಹನ ಸಂಖ್ಯೆ (ಕೆಎ-೧೨ ಬಿ-೯೮೭೫) ದಾಳಿ ಮಾಡಿದ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿ ವಾಹನ ಹಾಗೂ ೫೦ ನಾಟಗಳು ಸೇರಿ ಅಂದಾಜು ೩೫ ಲಕ್ಷದ ಸ್ವತ್ತನ್ನು ವಶಪಡಿಸಿಕೊಂಡು ಮತ್ತು ವಾಹನದ ಮಾಲೀಕ ಹಾಗೂ ಚಾಲಕನಾದ ವೀರಾಜಪೇಟೆ ಜೈನರ್ ಬೀದಿಯ ಪ್ರದೀಪ್. ಕೆ. ಆರ್. ಹಾಗೂ ವಾಹನದಲ್ಲಿದ್ದ ಇನ್ನೊರ್ವ ಆರೋಪಿಯಾದ ಬಿಟ್ಟಂಗಾಲ ನಿವಾಸಿ ಅರ್ಜುನ್. ಪಿ. ಎಸ್. ಎಂಬವರುಗಳನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಪ್ರಕರಣದ ಇತರ ಆರೋಪಿಗಳಾದ ಮಡಿಕೇರಿ ರಾಣಿಪೇಟೆ ನಿವಾಸಿ ಸಲೀಂ, ನೆಹರುನಗರದ ನಿವಾಸಿ ಅಬ್ದುಲ್ ಜಬ್ಬಾರ್ ಯು. ವೈ. ಮತ್ತು ವೀರಾಜಪೇಟೆ ಸಿಲ್ವ ನಗರದ ನಿವಾಸಿ ಫಾರೂಕ್ ತಲೆಮರೆಸಿಕೊಂಡಿರುವುದಾಗಿ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.
ವೀರಾಜಪೇಟೆ ಅರಣ್ಯ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಶರಣಬಸಪ್ಪ ಬಿ.ಎಂ. ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೊಚ್ಚೆರ ಎ. ನೆಹರೂ ಮಾರ್ಗದರ್ಶನದಲ್ಲಿ ವಲಯ ಅರಣ್ಯ ಅಧಿಕಾರಿ ಕಳ್ಳಿರ. ಎಂ. ದೇವಯ್ಯ, ವೀರಾಜಪೇಟೆ ವಲಯದ ಉಪವಲಯ ಅರಣ್ಯಧಿಕಾರಿಗಳಾದ ದೇಯಂಡ ಸಂಜಿತ್ ಸೋಮಯ್ಯ, ಆನಂದ ಕೆ.ಆರ್, ಅನಿಲ್ ಸಿ.ಟಿ, ಮಾದಂಡ ಮೋನಿಷಾ, ಸಚಿನ್ ನಿಂಬಾಳ್ಕರ್, ಅರಣ್ಯ ರಕ್ಷಕರುಗಳಾದ ಅರುಣ್ ಸಿ, ಚಂದ್ರಶೇಖರ ಅಮರಗೋಳ, ಮಾಲತೇಶ್ ಬಡಿಗೇರ, ವಾಹನ ಚಾಲಕರಾದ ಅಶೋಕ್, ಪ್ರಕಾಶ, ಮಧು, ಅಚ್ಚಯ್ಯ ಹಾಗೂ ವೀರಾಜಪೇಟೆ ಅರಣ್ಯ ವಲಯದ ಆರ್ಆರ್ಟಿ ಸಿಬ್ಬಂದಿಗಳಾದ ವಿಕಾಸ್, ಲತೇಶ, ಅನಿಲ್, ಸುರೇಶ, ಮಹೇಶ್, ಮೊಣ್ಣಪ್ಪ, ಹರ್ಷಿತ್, ನಾಚಪ್ಪ, ವಿನೋದ್, ವಿನುಕುಮಾರ್, ಮಂಜು, ಸಚಿನ್, ಮುರುಗನ್ ಹಾಜರಿದ್ದರು.