ಕೂಡಿಗೆ, ಸೆ. ೧೭: ಕೂಡ್ಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಹಸಿರು ಪಡೆ ಇಕೋ ಕ್ಲಬ್, ಎನ್.ಎಸ್.ಎಸ್. ಘಟಕದ ವತಿಯಿಂದ ಶನಿವಾರ ಗ್ರಾಮೀಣ ಪರಿಸರ ಸ್ನೇಹಿ ಗಣೇಶೋತ್ಸವ ಜಾಗೃತಿ ಅಭಿಯಾನ :೨೦೨೩ವನ್ನು ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಶಾಲಾ ಶಿಕ್ಷಣ ಇಲಾಖೆ, ಶಾಲಾ ಎಸ್.ಡಿ.ಎಂ.ಸಿ., ವಿದ್ಯಾರ್ಥಿ ಸಂಘ, ರಾಜ್ಯ ವಿಜ್ಞಾನ ಪರಿಷತ್ತು ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸಹಯೋಗದೊಂದಿಗೆ ನಮ್ಮ ನಡಿಗೆ ಹಸಿರೆಡೆಗೆ( ಗ್ರೋ ಗ್ರೀನ್ )ಅಭಿಯಾನದಡಿ "ಮಣ್ಣಿನ ಗಣೇಶ ಬಳಸಿ- ಜಲಮಾಲಿನ್ಯ ತಡೆಯಿರಿ" ಕುರಿತು ನಡೆದ ಪರಿಸರ ಜಾಗೃತಿ ಆಂದೋಲನದಲ್ಲಿ ವಿದ್ಯಾರ್ಥಿಗಳು ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಪ್ರದರ್ಶಿಸಿ ಕೂಡ್ಲೂರು ಗ್ರಾಮದ ಜನರಲ್ಲಿ ಜಾಗೃತಿ ಮೂಡಿಸಲಾಯಿತು.
ಗಣೇಶ ಚತುರ್ಥಿ ಸಂದರ್ಭದಲ್ಲಿ ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆಯ ಮಹತ್ವ ಕುರಿತು ಮಾಹಿತಿ ನೀಡಿದ ಶಾಲಾ ಮುಖ್ಯೋಪಾಧ್ಯಾಯ ರೂ ಆದ ಪರಿಸರ ಕಾರ್ಯಕ್ರಮ ಸಂಘಟಕ ಟಿ.ಜಿ. ಪ್ರೇಮಕುಮಾರ್, ಪಿ.ಓ.ಪಿ, ರಾಸಾಯನಿಕ ಬಣ್ಣದ ಗಣೇಶ ಮೂರ್ತಿಗಳಿಂದ ಜಲಮಾಲಿನ್ಯ ಉಂಟಾಗುತ್ತದೆ. ಇದರಿಂದ ನೀರಿನ ಮೂಲಗಳು ಅಶುದ್ಧವಾಗುತ್ತದೆ. ನೀರಿನ ಮೂಲಗಳನ್ನು ಸಂರಕ್ಷಣೆ ಮಾಡುವ ಮೂಲಕ ನಾವೆಲ್ಲರೂ ಪರಿಸರ ಸಂರಕ್ಷಣೆಗೆ ಪಣ ತೊಡಬೇಕು ಎಂದರು.
ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಡಾ ಸದಾಶಿವಯ್ಯ ಎಸ್. ಪಲ್ಲೇದ್ ಮಾತನಾಡಿ, ನಾಡಿನಲ್ಲಿ ಭಾವೈಕ್ಯತೆ ಬೆಳೆಸಲು ಸಹಕಾರಿಯಾಗಿರುವ ಗಣೇಶೋತ್ಸವದಲ್ಲಿ ನಾವು ಯಾವುದೇ ಕಾರಣಕ್ಕೂ ಪರಿಸರಕ್ಕೆ ಧಕ್ಕೆಯನ್ನುಂಟು ಮಾಡದೇ ಪ್ರಕೃತಿಗೆ ಪೂರಕವಾದ ಆಚರಣೆ ಮಾಡುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು.
ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಂ.ಟಿ. ದಯಾನಂದ ಪ್ರಕಾಶ್ ಮಾತನಾಡಿ, ನಾವು ಮಾಲಿನ್ಯರಹಿತ ಹಬ್ಬದ ಆಚರಣೆಗಳಿಗೆ ಒತ್ತು ನೀಡಬೇಕು ಎಂದರು.
ಇಕೋ ಕ್ಲಬ್ನ ಉಸ್ತುವಾರಿ ಶಿಕ್ಷಕಿ ಬಿ.ಡಿ.ರಮ್ಯ, ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆಯ ಮಹತ್ವ ತಿಳಿಸಿದರು.
ಶಿಕ್ಷಕರಾದ ಬಿ.ಎನ್.ಸುಜಾತ, ಬಿ.ಡಿ.ರಮ್ಯ, ಎಸ್.ಎಂ. ಗೀತಾ, ಬಿ.ಎಸ್. ಅನ್ಸಿಲಾ ರೇಖಾ, ಕಛೇರಿ ಸಿಬ್ಬಂದಿ ಎಂ. ಉಷಾ, ವಿದ್ಯಾರ್ಥಿ ಸಂಘದ ನಾಯಕಿ ಐಶ್ವರ್ಯ, ಉಪ ನಾಯಕ ಗೌತಮ್, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಸ್ಥಳೀಯರು ಇದ್ದರು.
ಪರಿಸರ ಜಾಗೃತಿ ಜಾಥಾ ನಂತರ ಇಕೋ ಕ್ಲಬ್, ಎನ್.ಎಸ್.ಎಸ್. ಘಟಕದ ಸ್ವಯಂ ಸೇವಕರು, ವಿದ್ಯಾರ್ಥಿಗಳು ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆ ಹಾಗೂ ಮಣ್ಣಿನ ಗಣೇಶ ಮೂರ್ತಿ ಬಳಕೆ ಕುರಿತಂತೆ ಕೂಡ್ಲೂರು ಗ್ರಾಮದಲ್ಲಿ ಪರಿಸರ ಜಾಗೃತಿ ಜಾಥಾ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಿದರು.
ಜಾಥಾದಲ್ಲಿ ವಿದ್ಯಾರ್ಥಿಗಳು
ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸೋಣ ಬನ್ನಿ, ಬಣ್ಣದ ಗಣೇಶ ತ್ಯಜಿಸಿ, ಪರಿಸರ ಸಂರಕ್ಷಿಸಿ, ಮಣ್ಣಿನ ಗಣಪ ಬಳಸಿ- ಜಲಮಾಲಿನ್ಯ ತಡೆಯಿರಿ, ಬೇಡ ಬೇಡ ವಿಷಕಾರಿ ರಾಸಾಯನಿಕ ಬಣ್ಣದ ಗಣೇಶ ಬಳಕೆ ಬೇಡ ಎಂಬಿತ್ಯಾದಿ ಘೋಷಣೆಗಳ ಮೂಲಕ ಜನಜಾಗೃತಿ ಮೂಡಿಸಿದರು.