ಸೋಮವಾರಪೇಟೆ, ಸೆ. ೧೬: ಕಚೇರಿಯಲ್ಲಿ ಕಳಿತು ಕಡತ ವಿಲೇ ವಾರಿ ಮಾಡುವ ಅಧಿಕಾರಿಗಳು.., ಕರಿ ಕೋಟು ಧರಿಸಿ ನ್ಯಾಯಾಲಯದಲ್ಲಿ ವಾದ ಮಾಡುವ ವಕೀಲರು.., ಸಾರ್ವಜನಿಕರ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಕಂದಾಯ ಇಲಾಖಾ ಸಿಬ್ಬಂದಿಗಳು.., ಅರಣ್ಯ ರಕ್ಷಣೆಯ ಜವಾಬ್ದಾರಿ ಹೊತ್ತಿರುವ ಅರಣ್ಯಾಧಿಕಾರಿಗಳು.., ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸುವ ಶಿಕ್ಷಕರು.., ಜನಸಾಮಾನ್ಯರ ಪ್ರತಿನಿಧಿಗಳು.., ಸಂಘ ಸಂಸ್ಥೆಗಳ ಮುಖಂಡರು.., ಶಾಲಾ ವಿದ್ಯಾರ್ಥಿಗಳು.., ಇಂದು ಕೆಸರು ಗದ್ದೆಯಲ್ಲಿ ನಾಟಿ ಮಾಡುವ ಮೂಲಕ ಕೃಷಿ ಜಾಗೃತಿ ಮೂಡಿ ಸಿದರು.
ಯಂಗ್ ಇಂಡಿಯನ್ ಫಾಮರ್ಸ್ ಅಸೋಸಿಯೇಷನ್ ವತಿಯಿಂದ ಸಮೀಪದ ಬೇಳೂರು ಗ್ರಾಮದ ಪ್ರಗತಿಪರ ಕೃಷಿಕ ನಿರಂಜನ್ ಅವರ ಗದ್ದೆಯಲ್ಲಿ ಆಯೋಜಿಸಿದ್ದ ೫ನೇ ವರ್ಷದ ನಾಟಿ ಕಾರ್ಯಕ್ರಮದಲ್ಲಿ ತಾಲೂಕು ತಹಶೀಲ್ದಾರ್ ಸಹಿತ ತಾಲೂಕು ಮಟ್ಟದ ವಿವಿಧ ಅಧಿಕಾರಿಗಳು, ತಾಲೂಕು ಕಚೇರಿ ಸಿಬ್ಬಂದಿಗಳು, ಕೃಷಿ ಇಲಾಖೆಯ ಅಧಿಕಾರಿಗಳು, ಸಂಘ ಸಂಸ್ಥೆಗಳ ಮುಖಂಡರು, ಶಾಲಾ ವಿದ್ಯಾರ್ಥಿಗಳು, ಶಿಕ್ಷಕರಾದಿಯಾಗಿ ಭಾಗವಹಿಸಿ ಕೆಸರಿನ ಗದ್ದೆಯಲ್ಲಿ ಭತ್ತದ ಪೈರು ನಾಟಿ ಮಾಡಿದರು.
ಯುವ ಜನಾಂಗವು ಕೇವಲ ಕಂಪೆನಿ ಉದ್ಯೋಗಗಳಿಗೆ ಮಾತ್ರ ಸೀಮಿತವಾಗದೇ ಕೃಷಿಯತ್ತಲೂ ಚಿತ್ತ ಹರಿಸಬೇಕೆಂಬ ಉದ್ದೇಶದಿಂದ ಜಾಗೃತಿಗಾಗಿ ಆಯೋಜಿಸಿದ್ದ ನಾಟಿ ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಾಗವಹಿಸಿದ್ದರು.
ಇದಕ್ಕೂ ಮುನ್ನ ಬೇಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಅವರು, ಪ್ರತಿಷ್ಠಿತ ಕಂಪೆನಿಗಳಲ್ಲಿ ಉದ್ಯೋಗದಲ್ಲಿರುವ ಶೇ. ೯೦ರಷ್ಟು ಉದ್ಯೋಗಿಗಳು ಮೂಲತಃ ರೈತರ ಮಕ್ಕಳೇ ಆಗಿದ್ದಾರೆ. ಒಮ್ಮೆ ನಗರ ಪ್ರದೇಶಗಳಿಗೆ ತೆರಳಿದವರು ಮತ್ತೆ ಗ್ರಾಮಗಳಿಗೆ ಹಿಂತಿರುಗಲು ಮನಸ್ಸು ಮಾಡುತ್ತಿಲ್ಲ. ಇದರಿಂದಾಗಿ ಕೃಷಿ ಕ್ಷೇತ್ರದಲ್ಲಿ ನಿರೀಕ್ಷಿತ ಪ್ರಗತಿ ಸಾಧ್ಯವಾಗುತ್ತಿಲ್ಲ ಎಂದರು.
ಪಟ್ಟಣಗಳಲ್ಲಿ ಹೆಚ್ಚಿನ ಸಂಪಾದನೆಯಿದ್ದರೂ ಉತ್ತಮ ಪರಿಸರ, ನೆಮ್ಮದಿಯ ಜೀವನ ಗ್ರಾಮಗಳಲ್ಲಿ ಮಾತ್ರ ಸಾಧ್ಯ. ಇಂತಹ ಗ್ರಾಮೀಣ ಪರಿಸರ ಉಳಿಯ ಬೇಕಾದರೆ ಕೃಷಿ ಜೀವಂತವಿರಬೇಕು ಎಂದರು. ಮುಖ್ಯ ಅತಿಥಿಯಾಗಿದ್ದ ತಹಶೀ ಲ್ದಾರ್ ಎಸ್.ಎನ್. ನರಗುಂದ್ ಮಾತನಾಡಿ, ಇಂದಿನ ಯುವ ಜನಾಂಗಕ್ಕೆ ಭತ್ತ ಕೃಷಿಯ ಮಹತ್ವ ಹಾಗೂ ಅನಿವಾರ್ಯತೆಯ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ನಡೆಯಬೇಕಿದೆ ಎಂದರು.
ಅರಣ್ಯ ಇಲಾಖೆಯ ಎಸಿಎಫ್ ಗೋಪಾಲ್ ಮಾತನಾಡಿ, ಗದ್ದೆ ಕೃಷಿ ಕಡಿಮೆಯಾದಂತೆ ಅಂತರ್ಜಲದ ಮಟ್ಟ ಕುಸಿಯುತ್ತದೆ. ಸಕಾಲಕ್ಕೆ ಮಳೆಯಾಗದೇ ಕೃಷಿ ಕಾರ್ಯಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಈ ನಿಟ್ಟಿನಲ್ಲಿ ಭತ್ತ ಕೃಷಿಯ ಮಹತ್ವವನ್ನು ಅರಿತುಕೊಳ್ಳಬೇಕು ಎಂದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಯಾದವ್ ಬಾಬು ಅವರು ಕೃಷಿ ಇಲಾಖೆಯ ಕಾರ್ಯ ಕ್ರಮಗಳ ಬಗ್ಗೆ ಮಾಹಿತಿ ಒದಗಿಸಿ ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಸೋಸಿಯೇಷನ್ ಅಧ್ಯಕ್ಷ ಶ್ರೀನಿಧಿ ಲಿಂಗಪ್ಪ ಅವರು ಸಂಘಟ ನೆಯ ಸೇವಾ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಬೇಳೂರು ಗ್ರಾ.ಪಂ. ಅಧ್ಯಕ್ಷೆ ಪಾರ್ವತಿ, ಮಲ್ನಾಡ್ ಯೂತ್ ಅಸೋಸಿಯೇಷನ್ ಅಧ್ಯಕ್ಷ ಯಶ್ವಂತ್ ಬೆಳ್ಳಿಗೌಡ್ರು, ವಲಯ ಅರಣ್ಯಾಧಿಕಾರಿ ಚೇತನ್, ಜನತಾ ರೈತ ಸಂಘದ ರಾಜ್ಯಾಧ್ಯಕ್ಷ ಈರೇಗೌಡ, ಉಪಾಧ್ಯಕ್ಷ ಶ್ರೀನಿವಾಸ್ ಸುಬ್ಬು, ಗೌರವಾಧ್ಯಕ್ಷ ಕಲ್ಕೆರೆ ಮಾರುತಿ, ಯುವ ಘಟಕದ ಅಧ್ಯಕ್ಷ ಸತೀಶ್ಗೌಡ, ಪ್ರಣವ್ ಫೌಂಡೇಷನ್ ಅಧ್ಯಕ್ಷ ರಾಕೇಶ್ ರೈ, ಕಾಫಿ ಮಂಡಳಿಯ ಲಕ್ಷಿö್ಮÃಕಾಂತ್, ವಕೀಲರ ಸಂಘದ ಅಧ್ಯಕ್ಷ ವಿಠಲ್, ಉದ್ಯಮಿ ಕೆ.ಡಿ. ವೀರಪ್ಪ, ಸರ್ಜನ್ ಡಾ. ಚಂದನ್ ಎ.ಈ., ಲಯನ್ಸ್ ಕ್ಲಬ್ ಅಧ್ಯಕ್ಷ ಮಹೇಶ್, ಮಾಜೀ ಸೈನಿಕರ ಸಂಘದ ಅಧ್ಯಕ್ಷ ಈರಪ್ಪ, ಗದ್ದೆ ಮಾಲೀಕ ನಿರಂಜನ್, ಯಿಫಾ ಉಪಾಧ್ಯಕ್ಷ ರಕ್ಷಿತ್ ಶಿವಪ್ಪ, ಕಾರ್ಯದರ್ಶಿ ಸಜನ್ ಮಂದಣ್ಣ ಸೇರಿದಂತೆ ಪದಾಧಿ ಕಾರಿಗಳು ಉಪಸ್ಥಿತರಿದ್ದರು.