ಕುಶಾಲನಗರ, ಸೆ. ೧೭: ಗೌರಿ ಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಕುಶಾಲನಗರದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಸ್ಥಳೀಯ ಮುಖಂಡರೊAದಿಗೆ ಸಭೆ ನಡೆಯಿತು.
ಗೌರಿ ಗಣೇಶ ಪ್ರತಿಷ್ಠಾಪನಾ ಸಮಿತಿ ಪ್ರಮುಖರು ಹಾಗೂ ಈದ್ ಮಿಲಾದ್ ಆಚರಿಸುವ ಮಸೀದಿಗಳ ಪ್ರಮುಖರು ಅನುಸರಿಸಬೇಕಾದ ಇಲಾಖೆಯ ನಿಯಮಗಳ ಬಗ್ಗೆ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ಒದಗಿಸಿದರು.
ಈ ಸಂದರ್ಭ ಮಾತನಾಡಿದ ಡಿವೈಎಸ್ಪಿ ಆರ್.ವಿ. ಗಂಗಾಧರಪ್ಪ, ಎಲ್ಲಾ ಹಬ್ಬಗಳು ಶಾಂತಿಯುತವಾಗಿ ನಡೆಯಬೇಕು ಎಂಬುದು ಇಲಾಖೆಯ ಉದ್ದೇಶವಾಗಿದೆ.
ಉತ್ಸವದ ಸಂದರ್ಭ ಮೆರವಣಿಗೆಗೆ ನಿರ್ಬಂಧವಿಲ್ಲ. ಆದರೆ ರಾತ್ರಿ ೧೦ ಗಂಟೆ ನಂತರ ಮೈಕ್ ಬಳಕೆಗೆ ಅನುಮತಿಯಿಲ್ಲ. ಉತ್ಸವ ಸಂದರ್ಭ ಅನಾಹುತಗಳು, ಅಹಿತಕರ ಘಟನೆಗಳು ಜರುಗದಂತೆ ಎಚ್ಚರವಹಿಸಲು ಇಲಾಖೆ ಮುಂದಾಗಿದೆ. ನಿಯಮ ಪಾಲಿಸದ ಕಾರ್ಯಕ್ರಮ ಆಯೋಜಕರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭ ಗ್ರಾಮಾಂತರ ವೃತ್ತ ನಿರೀಕ್ಷಕ ರಾಜೇಶ್ ಕೋಟ್ಯಾನ್, ನಗರ ಠಾಣಾ ವೃತ್ತನಿರೀಕ್ಷಕ ಯಶವಂತ್, ಠಾಣಾಧಿಕಾರಿಗಳಾದ ಚಂದ್ರಶೇಖರ್, ಗೀತಾ, ಭಾರತಿ, ಕಾಶಿನಾಥ್ ಬಗಲಿ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಇದ್ದರು.