ಮಡಿಕೇರಿ, ಸೆ. ೧೬ : ಗೌರಿ ಹಾಗೂ ಗಣೇಶ ಹಬ್ಬ ಪ್ರಯುಕ್ತ, ಗೌರಿ ಹಾಗೂ ಗಣೇಶ ವಿಗ್ರಹಗಳನ್ನು ಸಾರ್ವಜನಿಕ ಪ್ರದೇಶಗಳಲ್ಲಿ ಪ್ರತಿಷ್ಠಾಪಿಸುವ ಮೊದಲು ಉತ್ಸವ ಆಯೋಜಕರು ಗಣೇಶ ಪ್ರತಿಷ್ಠಾಪನೆಗೆ ಅಗತ್ಯವಿರುವ ಸ್ಥಳ, ಪೆಂಡಾಲ್, ವಿದ್ಯುತ್ ಸಂಪರ್ಕ ಇನ್ನು ಮುಂತಾದ ವ್ಯವಸ್ಥೆಗಳನ್ನು ಮಾಡಿಕೊಳ್ಳುವ ಮುನ್ನ ಸಂಬAಧಪಟ್ಟ ಇಲಾಖೆಗಳಿಂದ ಅನುಮತಿ ಪಡೆದು ಕಾರ್ಯಕ್ರಮ ಆಯೋಜಿಸುವಂತೆ ಪೌರಾಯುಕ್ತ ವಿಜಯ ಅವರು ಕೋರಿದ್ದಾರೆ.

ಗೌರಿ-ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡುವವರು ವಿಷಕಾರಿ ರಾಸಾಯನಿಕ ಲೋಹದ ಲೇಪದ ಪ್ಲಾಸ್ಟರ್ ಆಫ್ ಪ್ಯಾರೀಸ್, ಅಂತಹ ಪರಿಸರಕ್ಕೆ ಹಾನಿ ಮಾಡುವಂತಹ ಸಾಮಗ್ರಿಗಳಿಂದ ತಯಾರಿಸಿದ ವಿಗ್ರಹಗಳನ್ನು ಬಳಸದೆ ಪರಿಸರ ಸ್ನೇಹಿ ಸಾದಾ ಜೇಡಿ ಮಣ್ಣಿನಿಂದ ತಯಾರಿಸಿದ ವಿಗ್ರಹಗಳನ್ನು ಬಳಸಬೇಕು. ಇಲ್ಲವಾದಲ್ಲಿ ನಿಯಂತ್ರಣ ಮಂಡಳಿಯ ಜಲಮಾಲಿನ್ಯ (ತಡೆ ಮತ್ತು ನಿಯಂತ್ರಣ) ಕಾಯ್ದೆ ೧೯೭೪ರ ಪ್ರಕಾರ ಕಲಂ ೩೩(ಆ)ರ ಪ್ರಕಾರ ರೂ. ೧೦ ಸಾವಿರದವರೆಗೂ ದಂಡ ವಿಧಿಸಲಾಗುವುದು.

ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ಅಡಚಣೆಯಾಗದಂತೆ ಪ್ರತಿಷ್ಠಾಪಿಸಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ನಗರಸಭೆ ವತಿಯಿಂದ ಗಣಪತಿ ವಿಗ್ರಹಗಳ ವಿಸರ್ಜನೆಗೆ ಓಂಕಾರೇಶ್ವರ ದೇವಸ್ಥಾನದ ಬಳಿ ಇರುವ ಗೌರಿ ಕೆರೆಯನ್ನು ಗುರುತಿಸಿ, ಅವಶ್ಯ ವ್ಯವಸ್ಥೆಗಳನ್ನು ಮಾಡಿದ್ದು, ಸದರಿ ಸ್ಥಳದಲ್ಲೆ ವಿಗ್ರಹಗಳನ್ನು, ಹೂವು ಹಣ್ಣುಗಳನ್ನು ಪ್ರತ್ಯೇಕಿಸಿ ವಿಸರ್ಜಿಸಬೇಕು. ಒಂದು ವೇಳೆ ಉಲ್ಲಂಘಿಸಿದಲ್ಲಿ ಕಾನೂನಿನಂತೆ ಕ್ರಮಕೈಗೊಳ್ಳಲಾಗುವುದು ಎಂದು ನಗರಸಭೆ ಪೌರಾಯುಕ್ತ ವಿಜಯ ಅವರು ತಿಳಿಸಿದ್ದಾರೆ.