ಶನಿವಾರಸಂತೆ, ಸೆ. ೧೬: ಭಾರತ ದೇಶ ಸನಾತನ ಸಂಸ್ಕೃತಿಯ ಪ್ರತೀಕವಾಗಿದ್ದು ಭಗವದ್ಗೀತೆಯಲ್ಲಿ ಶ್ರೀಕೃಷ್ಣನ ಉಪದೇಶಗಳು ಇಂದಿಗೂ ಅನುಕರಣೀಯವಾಗಿವೆ. ವಿದ್ಯಾರ್ಥಿಗಳು ಭಗವದ್ಗೀತೆಯ ಶ್ಲೋಕಗಳನ್ನು ಓದುವ ಪರಿಪಾಠ ಬೆಳೆಸಿಕೊಳ್ಳಬೇಕು ಎಂದು ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಸಿ.ಎಸ್. ಸತೀಶ್ ಕರೆ ನೀಡಿದರು.
ಪಟ್ಟಣದಲ್ಲಿ ‘ಟೀಮ್ ಡ್ರೀಮ್ ಫ್ಲೆöÊಯಿಂಗ್ ಸ್ಟಾರ್ಸ್’ ನೃತ್ಯ ತರಬೇತಿ ಶಾಲೆಯನ್ನು ಹಾಗೂ ‘ರಾಧಾಕೃಷ್ಣ’ ಛದ್ಮವೇಷ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶನಿವಾರಸಂತೆಯಲ್ಲಿ ನೃತ್ಯ ತರಬೇತಿ ಶಾಲೆ ಎಲ್ಲರ ಕನಸಾಗಿತ್ತು. ಆ ಕನಸನ್ನು ಟೀಮ್ ಡ್ರೀಮ್ ಫ್ಲೆöÊಯಿಂಗ್ ಸ್ಟಾರ್ಸ್ ಶಾಲೆ ನನಸು ಮಾಡುತ್ತಿದೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ನೃತ್ಯ ಕಲಿಯುವ ಸದಾವಕಾಶ ಕಲ್ಪಿಸಿದೆ. ಆರಂಭದಲ್ಲೇ ಶುಲ್ಕವಿಲ್ಲದೇ ವಿದ್ಯಾರ್ಥಿಗಳಿಗೆ ‘ರಾಧಾಕೃಷ್ಣ’ ಛದ್ಮವೇಷ ಸ್ಪರ್ಧೆಯನ್ನು ಏರ್ಪಡಿಸಿ, ವಿಜೇತರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಿದ್ದು ಶ್ಲಾಘನೀಯ ಎಂದರು.
ನೃತ್ಯ ಸ್ಪರ್ಧೆ ಆಯೋಜಕ ಹಾಗೂ ತರಬೇತುದಾರ ಬಿ.ಆರ್. ಶರಣ್ ಕುಮಾರ್, ನೃತ್ಯ ಶಿಕ್ಷಕಿ ಎಂ.ವಿ. ನಳಿನಾಕ್ಷಿ, ಬಾಪೂಜಿ ವಿದ್ಯಾಸಂಸ್ಥೆ ಅಧ್ಯಕ್ಷ ಲಿಂಗರಾಜ್ ಉಪಸ್ಥಿತರಿದ್ದರು.
‘ರಾಧಾಕೃಷ್ಣ’ ಛದ್ಮವೇಷ ಸ್ಪರ್ಧೆ ೧ ರಿಂದ ೬ ವರ್ಷದ ವಿಭಾಗದಲ್ಲಿ ಏಕಾನ್ ಪ್ರಥಮ, ವರ್ಣಿಕಾ ದ್ವಿತೀಯ, ಎಂ.ಎಸ್. ಬೃಂದಾ ತೃತೀಯ ಬಹುಮಾನ ಗಳಿಸಿದರು. ೭ ರಿಂದ ೧೦ ವರ್ಷದ ವಿಭಾಗದಲ್ಲಿ ಎಚ್.ಕೆ. ಹನಿ ಪ್ರಥಮ, ಬಿ.ಎಸ್. ಯುಗಾನ್ ದ್ವಿತೀಯ, ಎನ್.ಆರ್. ಹನಿ ತೃತೀಯ ಬಹುಮಾನ ಪಡೆದರು.