ವೀರಾಜಪೇಟೆ, ಸೆ. ೧೬: ವಚನ ಸಾಹಿತ್ಯ ಕನ್ನಡ ಸಾಹಿತ್ಯದ ಮೇರು ಕಿರೀಟವಾಗಿದ್ದು ಸಮ ಸಮಾಜದ ಪರಿಕಲ್ಪನೆಗೆ ವಚನಕಾರರ ಹೋರಾಟ ಅದ್ವಿತೀಯ ಎಂದು ವೀರಾಜಪೇಟೆ ತಾಲೂಕು ತಹಶೀಲ್ದಾರರು ಹಾಗೂ ದಂಡಾಧಿಕಾರಿ ಹೆಚ್.ಎನ್. ರಾಮಚಂದ್ರ ಬಣ್ಣಿಸಿದರು.

ಕೊಡಗು ಜಿಲ್ಲಾ ವಚನ ಸಾಹಿತ್ಯ ವೇದಿಕೆ ವತಿಯಿಂದ ವೀರಾಜಪೇಟೆ ತಾಲೂಕಿನ ಬಾಳುಗೋಡು ಏಕಲವ್ಯ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ‘ಶಾಲಾ-ಕಾಲೇಜುಗಳೆಡೆಗೆ ವಚನ ಸಾಹಿತ್ಯದ ನಡಿಗೆ’ ಚಿಂತನಾಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಹನ್ನೆರಡನೇ ಶತಮಾನದ ದಿನಮಾನಗಳಲ್ಲಿ ತಾಂಡವವಾಡುತ್ತಿದ್ದ ಜಾತಿ, ವರ್ಗಬೇಧ, ಮೇಲು-ಕೀಳು, ಬಡವ-ಬಲ್ಲಿದರೆಂಬ ಅಸಮಾನತೆ ತೊಲಗಿಸಲು ಬಸವಾದಿ ಶರಣರು ನಡೆಸಿದ ವಚನ ಕ್ರಾಂತಿ ಅಂದಿನ ಜನಸಾಮಾನ್ಯರ ಬದುಕನ್ನೇ ಬದಲಿಸಿತ್ತು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ವಚನ ಸಾಹಿತ್ಯ ವೇದಿಕೆ ಅಧ್ಯಕ್ಷ ಕೆ.ಎಸ್. ಮೂರ್ತಿ, ಶರಣ ಪರಂಪರೆಯ ಮರೆತು ಹೋದ ಮೌಲ್ಯಗಳನ್ನು ಪುನಃಸ್ಮರಣೆ ಮಾಡುವ ಮೂಲಕ ಎಳೆಯ ವಯಸ್ಸಿನ ವಿದ್ಯಾರ್ಥಿಗಳ ಮನದಲ್ಲಿ ವಚನಗಳ ಮೌಲ್ಯಗಳನ್ನು ತಿಳಿಯಪಡಿಸುವುದು ಅಗತ್ಯವಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಏಕಲವ್ಯ ವಸತಿ ಶಾಲಾ ಪ್ರಾಂಶುಪಾಲ ಡಾ. ಐನಂಗಡ ದಿಲನ್, ಕನ್ನಡ ಸಾಹಿತ್ಯಕ್ಕೆ ವಿಶ್ವ ಮಟ್ಟದಲ್ಲಿ ಹೊಸ ಬೆಳಕನ್ನು ತಂದುಕೊಟ್ಟ ವಚನ ಸಾಹಿತ್ಯದ ಸಾಮಾಜಿಕ, ಸಾಹಿತ್ಯಿಕ ಹಾಗೂ ಧಾರ್ಮಿಕ ಕ್ರಾಂತಿ ಚರಿತ್ರಾರ್ಹವಾದುದು ಎಂದರು.

ವಿದ್ಯಾರ್ಥಿಗಳಿAದ ಇದೇ ಸಂದರ್ಭ ವಿವಿಧ ಶರಣರು ರಚಿಸಿದ ವಚನ ಗಾಯನ ನಡೆಯಿತು. ವಸತಿ ಶಾಲೆಯ ವಿದ್ಯಾರ್ಥಿ ನಾಯಕರಾದ ದಿಲೀಪ್ ಹಾಗೂ ಲೋಚನಾ ವೇದಿಕೆಯಲ್ಲಿದ್ದರು. ಉಪನ್ಯಾಸಕ ಮನೋಹರ್ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಅಕಿತಾ ಹಾಗೂ ನವ್ಯಜಾ ನಿರೂಪಿಸಿದರು. ಉಪನ್ಯಾಸಕಿ ಸಾರಿಕಾ ವಂದಿಸಿದರು.