ಮಡಿಕೇರಿ, ಸೆ. ೧೬: ಆಟೋಟ, ನಾಟಕ, ಸಂಗೀತ, ನೃತ್ಯ ಕಾರ್ಯಕ್ರಮ ಗಳೊಂದಿಗೆ ಕೊಡಗು ಪ್ರೆಸ್ ಕ್ಲಬ್À ಬೆಳ್ಳಿ ಮಹೋತ್ಸವ ಸಂಭ್ರಮದಿAದ ನಡೆಯಿತು.
ಕಳೆದ ಒಂದು ವರ್ಷಗಳಿಂದ ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ವತಿಯಿಂದ ಬೆಳ್ಳಿ ಮಹೋತ್ಸವ ಪ್ರಯುಕ್ತ ವಿವಿಧ ಸಾಮಾಜಿಕ ಕಾರ್ಯಚಟುವಟಿಕೆಗಳನ್ನು ನಡೆಸಲಾಗಿತ್ತು. ಇಂದು ಕಾವೇರಿ ಹಾಲ್‌ನಲ್ಲಿ ನಡೆದ ೨೫ನೇ ವರ್ಷದ ಕೊನೆಯ ಕಾರ್ಯಕ್ರಮ ಜನಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
ಕಾವೇರಿ ಹಾಲ್ ಸಭಾಂಗಣದಲ್ಲಿ ಬೆಳಿಗ್ಗಿನಿಂದಲೇ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಜಿಲ್ಲೆಯ ವಿವಿಧೆಡೆಗಳಿಂದ ನೂರಾರು ಪತ್ರಕರ್ತರು ಹಾಗೂ ಅವರ ಕುಟುಂಬ ಆಗಮಿಸಿ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು. ಬೆಳ್ಳಿ ಮಹೋತ್ಸವ ಅಂಗವಾಗಿ ಕ್ಲಬ್ ಸದಸ್ಯರಿಗೆ ಬೆಳ್ಳಿ ನಾಣ್ಯವನ್ನು ಉಡುಗೊರೆಯಾಗಿ ನೀಡಲಾಯಿತು.
ಮನರಂಜಿಸಿದ ಆಟೋಟಗಳು
ಸದಾ ವೃತ್ತಿ ಜಂಜಾಟದಲ್ಲಿರುವ ಪತ್ರಕರ್ತರು ಹಾಗೂ ಅವರ ಕುಟುಂಬದವರು ಇಂದು ಹಲವು ಆಟೋಟಗಳಲ್ಲಿ
(ಮೊದಲ ಪುಟದಿಂದ) ಭಾಗವಹಿಸಿ ಮನೋಲ್ಲಾಸ ಪಡೆದುಕೊಂಡರು. ಬಲೂನ್ ಊದಿ ಒಡೆಯುವುದು, ಸ್ಟಾçನಲ್ಲಿ ಮಣಿಗಳನ್ನು ಹೆಕ್ಕುವುದು, ಸಂಗೀತ ಕುರ್ಚಿ, ವಾಲಗತಾಟ್ ಸೇರಿದಂತೆ ಇನ್ನಿತರ ಆಟೋಟಗಳಲ್ಲಿ ಭಾಗವಹಿಸುವುದ ರೊಂದಿಗೆ ಕೆಲ ಪತ್ರಕರ್ತರು ಛದ್ಮವೇಷ ಧರಿಸಿ ಆಕರ್ಷಿಸಿದರು.
ಸಾಂಸ್ಕೃತಿಕ ವೈಭವ
ಕಾರ್ಯಕ್ರಮದ ಅಂಗವಾಗಿ ಕರ್ನಾಟಕ ಜಾನಪದ ಪರಿಷತ್ತಿನ ಕೊಡಗು ಘಟಕದ ವತಿಯಿಂದ ಮಾದೇಟಿರ ಬೆಳ್ಯಪ್ಪ ನಿರ್ದೇಶನದಲ್ಲಿ ಪ್ರಸ್ತುತಿಗೊಂಡ `ಕಣಿವೆಯ ನೆಳಲಲ್ಲಿ' ನಾಟಕ ಮನರಂಜನೆ ನೀಡುವುದ ರೊಂದಿಗೆ `ನಂಬಿಕೆಯಲ್ಲಿ ಬದುಕಬೇಕು, ದುಡುಕಿನ ನಿರ್ಧಾರ ಬೇಡ' ಎಂಬ ಸಂದೇಶ ನೀಡಿತು.
ಗಾಯತ್ರಿ ಚೆರಿಯಮನೆ, ವಿನೋದ್ ಮೂಡಗದ್ದೆ, ಹಾರಂಬಿ ಯತೀನ್ ವೆಂಕಪ್ಪ, ಡಿ.ಎಂ. ಉಮೇಶ್ ಮನೋಜ್ಞ ಅಭಿನಯದ ಮೂಲಕ ಗಮನ ಸೆಳೆದರು. 'ವಚನ ಸಂಗಮ' ಕಾರ್ಯಕ್ರಮ ಮುದ ನೀಡಿತು.
ಜಿಲ್ಲೆಯ ವಿವಿಧ ನೃತ್ಯ ತಂಡಗಳು ಪ್ರದರ್ಶಿಸಿದ ವೈವಿಧ್ಯಮಯ ನೃತ್ಯಗಳು ಮನಸೂರೆಗೊಂಡವು. ಮಡಿಕೇರಿಯ ಕಿಂಗ್ಸ್ ಆಫ್ ಕೂರ್ಗ್, ನಾಟ್ಯಾಲಯ, ಗುರುಕುಲ ಕಲಾಮಂಡಳಿ, ಕೊಡವ ಸಮಾಜ ಪೊಮ್ಮಕ್ಕಡ ಕೂಟ, ಕಲಾ ಕಾವ್ಯ ನಾಟ್ಯಶಾಲೆ, ಕುಶಾಲನಗರದ ಏಂಜಲ್ ವಿಂಗ್ಸ್, ಭಾಗಮಂಡಲದ ಅಭಿನಯ ಕಲಾಮಿಲನ ಚಾರಿಟೇಬಲ್ ಟ್ರಸ್ಟ್ ತಂಡಗಳು ವಿವಿಧ ಪ್ರಕಾರದ ನೃತ್ಯಗಳನ್ನು ಪ್ರದರ್ಶಿಸಿ ಚಪ್ಪಾಳೆ ಗಿಟ್ಟಿಸಿಕೊಂಡವು.
ಮಾಧ್ಯಮರಂಗ ಪ್ರಭಾವಶಾಲಿ - ವರ್ಣಿತ್ ನೇಗಿ
ಮಾಧ್ಯಮ ರಂಗ ಅತ್ಯಂತ ಪ್ರಭಾವಶಾಲಿಯಾಗಿದ್ದು, ಸುಸ್ಥಿರ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಪ್ರಬಾರ ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣೀತ್ ನೇಗಿ ಹೇಳಿದರು. ಸ್ಥಳೀಯ ಪತ್ರಿಕೆಗಳ ಮೂಲಕ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಪತ್ರಕರ್ತರ ಹಾಗೂ ಅವರ ಕುಟುಂಬಸ್ಥರಿಗೆ ಆಯೋಜಿಸಿದ್ದ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಪತ್ರಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಜನಸಾಮಾನ್ಯರ ಸಮಸ್ಯೆಗಳನ್ನು ಆಡಳಿತಕ್ಕೆ ಮುಟ್ಟಿಸುವ ಜವಾಬ್ದಾರಿಯುತ ಕೆಲಸವನ್ನು ಪತ್ರಕರ್ತರು ಮಾಡುತ್ತಿದ್ದಾರೆ. ಸ್ಥಳೀಯರ ಬೇಡಿಕೆ, ಸಮಸ್ಯೆಗಳನ್ನು ಜಿಲ್ಲಾಡಳಿತದ ಗಮನಕ್ಕೆ ತಂದು ಸಮಾಜಮುಖಿಯಾಗಿ ಶ್ರಮಿಸುತ್ತಿದ್ದಾರೆ. ಮಾಧ್ಯಮ ರಂಗ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದೆ. ಸರಕಾರದ ಯೋಜನೆಗಳು ಜನರಿಗೆ ತಲುಪಬೇಕಾದರೂ ಮಾಧ್ಯಮದ ಅವಶ್ಯಕತೆ ಹೆಚ್ಚಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಮಾಧ್ಯಮ ಕ್ಷೇತ್ರ ಮಹತ್ತರ ಪಾತ್ರವಹಿಸಿದೆ. ಉನ್ನತ ಅಧಿಕಾರಿಗಳು ಈ ಸ್ಥಾನಕ್ಕೆ ಬರಬೇಕಾದರೆ ಪತ್ರಿಕೆಗಳೇ ಕಾರಣವಾಗಿವೆ. ಶೋಷಿತ, ಸಮಾಜದ ಮುಖ್ಯವಾಹಿನಿಗೆ ಬಾರದವರ ಧ್ವನಿಯಾಗಿ ಮಾಧ್ಯಮ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಹಲವು ಪ್ರಕರಣಗಳ ಇನ್ನೊಂದು ಮುಖವನ್ನು ಪತ್ರಕರ್ತರು ಅನಾವರಣಗೊಳಿಸಿ ಸತ್ಯವನ್ನು ಜನರಿಗೆ ತಿಳಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಅಧಿಕಾರಿಗಳಿಗೆ, ಆಡಳಿತ ವಿರುದ್ಧ ಬರುವ ಟೀಕೆಯನ್ನು ಸಕರಾತ್ಮಕವಾಗಿ ಸ್ವೀಕರಿಸಿ ಸಮಸ್ಯೆ ಪರಿಹರಿಸಬೇಕು ಎಂದು ಅಭಿಮತ ವ್ಯಕ್ತಪಡಿಸಿದರು.
ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಹಬ್ಬ ಆಚರಣಾ ಸಮಿತಿ ಗೌರವಾಧ್ಯಕ್ಷೆ ಬಿ.ಆರ್. ಸವಿತಾ ರೈ ಮಾತನಾಡಿ, ಸಂಘಟನಾತ್ಮಕ ಕೆಲಸದಿಂದ ಬೆಳ್ಳಿ ಹಬ್ಬ ಯಶಸ್ವಿಯಾಗಿ ನಡೆದಿದೆ. ಜಿಲ್ಲೆಯ ಪತ್ರಕರ್ತರು ಸಮಾಜಮುಖಿಯಾಗಿ ಕೆಲಸ ಮಾಡುತ್ತ್ತಾ ಸದೃಢ ಸಮಾಜ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ ಎಂದರು.
ಈ ಸಂದರ್ಭ ಬೆಳ್ಳಿಹಬ್ಬ ಆಚರಣಾ ಸಮಿತಿ ಅಧ್ಯಕ್ಷ ಉಳ್ಳಿಯಡ ಪೂವಯ್ಯ, ಮಹಾಪೋಷಕ ಜಿ. ರಾಜೇಂದ್ರ ಹಾಜರಿದ್ದರು.
ವಿಶ್ವ ಕುಂಬೂರು ಸ್ವಾಗತಿಸಿ, ಕಿಶೋರ್ ರೈ, ರೆಜಿತ್ ಕುಮಾರ್ ನಿರೂಪಿಸಿ, ನವೀನ್ ವಂದಿಸಿದರು.