ಮಡಿಕೇರಿ, ಸೆ. ೧೬: ವ್ಯಕ್ತಿಯೊಬ್ಬರನ್ನು ಅಪಹರಿಸಿ, ಮನೆಯೊಂದರಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿ, ಅವರ ಕುಟುಂಬದವರ ಬಳಿ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣಕ್ಕೆ ಸಂಬAಧಿಸಿದAತೆ ಮಡಿಕೇರಿ ನಗರ ಪೊಲೀಸರು ೧೪ ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ನಗರದ ಗೌಳಿ ಬೀದಿಯಲ್ಲಿ ವಾಸವಿರುವ ನಿಜಾಮುದ್ದೀನ್ (೩೫) ಎಂಬವರು ಬಾವಿ ಕೆಲಸ ಮಾಡುವವರಾಗಿದ್ದಾರೆ. ಇವರ ಪುತ್ರ ಮೊಹಮ್ಮದ್ ಸೈಫುದ್ದೀನ್ ಮೈಸೂರಿನಲ್ಲಿ ವಾಸವಿದ್ದು, ತಂದೆಯ ಆರೋಗ್ಯ ಸರಿಯಿಲ್ಲದ ಕಾರಣ ಮಡಿಕೇರಿಗೆ ಆಗಮಿಸಿದ್ದರು. ನಿನ್ನೆ ದಿನ ನಿಜಾಮುದ್ದೀನ್ ಅವರು ವಿದ್ಯಾನಗರದಲ್ಲಿ ಇರುವ ಎಂ.ಝೆಡ್. ಮಹಮ್ಮದ್ ರಾಶಿದ್ ಎಂಬಾತನ ಮನೆಯಲ್ಲಿ ಸ್ಯಾನಿಟರಿ ಗುಂಡಿ ಕೆಲಸ ಇರುವುದಾಗಿ ತಮ್ಮ ಪುತ್ರ ಮೊಹಮ್ಮದ್ ಸೈಫುದ್ದೀನ್‌ಗೆ ತಿಳಿಸಿ ತೆರಳಿದ್ದರು. ಮಹಮ್ಮದ್ ರಾಶಿದ್ ಮನೆಗೆ ತಲುಪಿದ ಸಂದರ್ಭ ಅಲ್ಲಿ ಆತ ಇರಲಿಲ್ಲ ಎನ್ನಲಾಗಿದ್ದು, ನಿಜಾಮುದ್ದೀನ್ ಕೆಲಸ ನೋಡಲು ಮುಂದಾಗಿದ್ದಾರೆ. ಈ ಸಂದರ್ಭ ಅವರ ಕೈ ಆಕಸ್ಮಿಕವಾಗಿ ರಾಶಿದ್ ಪತ್ನಿಗೆ ತಾಗಿತು ಎಂಬ ವಿಚಾರ ತಿಳಿದು ರಾಶಿದ್ ಹಾಗೂ ಇತರರು ನಿಜಾಮುದ್ದೀನ್ ಮೇಲೆ ಹಲ್ಲೆ ಮಾಡಿದ್ದಾರೆ. ಈ ವಿಚಾರವನ್ನು ನಿಜಾಮುದ್ದೀನ್ ತಮ್ಮ ಮನೆಗೆ ಹಿಂತಿರುಗಿ ಪುತ್ರನಿಗೆ ತಿಳಿಸಿದ್ದಾರೆ. ಬಳಿಕ ಮೊಹಮ್ಮದ್ ಸೈಫುದ್ದೀನ್ ಮೈಸೂರಿಗೆ ಹಿಂತಿರುಗಿದ್ದಾರೆ. ನಂತರ ಗೌಳಿ ಬೀದಿ ರಸ್ತೆಯಲ್ಲಿ ತೆರಳುತ್ತಿದ್ದ ನಿಜಾಮುದ್ದೀನ್ ಅವರನ್ನು ಮಹಮ್ಮದ್ ರಾಶಿದ್‌ನ ತಂಡ ಅಪಹರಿಸಿದ್ದು, ಮಂಗಳಾದೇವಿನಗರದ ಮನೆಯೊಂದಕ್ಕೆ ಕರೆದೊಯ್ದು ನಿಜಾಮುದ್ದೀನ್ ಅವರಿಗೆ ಹಲ್ಲೆ ಮಾಡಿ ಅವರ ಪತ್ನಿ ಉಮೇರಾ ಬಾನು ಅವರಿಗೆ ವಾಟ್ಸಾಪ್ ಮೂಲಕ ನಿಜಾಮುದ್ದೀನ್ ಅವರಿಂದಲೇ ಕರೆ ಮಾಡಿಸಿ, ಹಣ ಕೇಳುವಂತೆ ತಿಳಿಸಿ ದೂರವಾಣಿ ಸಂಖ್ಯೆಯೊAದನ್ನು ನೀಡಿದ್ದಾರೆ. ಈ ವಿಚಾರ ತಿಳಿದು ಆತಂಕಗೊAಡ ಪುತ್ರ ಮೊಹಮ್ಮದ್ ಸೈಫುದ್ದೀನ್, ಅಪಹರಣಕಾರರು ನೀಡಿದ್ದ ದೂರವಾಣಿ ಸಂಖ್ಯೆಗೆ ಹತ್ತು ಸಾವಿರ ಹಣವನ್ನು ಕಳುಹಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಅಪಹರಣಕಾರರು ನಿಜಾಮುದ್ದೀನ್ ಅವರಿಗೆ ಹಲ್ಲೆ ಮಾಡುತ್ತಿರುವುದನ್ನು ವೀಡಿಯೋ ಕಾಲ್ ಮೂಲಕ ಮೊಹಮ್ಮದ್ ಸೈಫುದ್ದೀನ್‌ಗೆ ತೋರಿಸಿ ರಾತ್ರಿ ೧೨ ಗಂಟೆಯೊಳಗಾಗಿ ೫ ಲಕ್ಷ ಹಣ ನೀಡದಿದ್ದರೆ, ನಿನ್ನ ತಂದೆಯನ್ನು ಕೊಲೆ ಮಾಡುವುದಾಗಿ ಬೆದರಿಸಿದ್ದಾರೆ.

ಈ ಬಗ್ಗೆ ಮೊಹಮ್ಮದ್ ಸೈಫುದ್ದೀನ್ ಮಡಿಕೇರಿ ನಗರ ಠಾಣೆಗೆ ದೂರು ನೀಡಿದ್ದಾರೆ. ತನಿಖೆ ಕೈಗೊಂಡ ಪೊಲೀಸರು ಮಂಗಳಾದೇವಿನಗರದ ಎನ್.ಎಸ್. ಕಿರಣ್‌ರೈ ಎಂಬಾತನ ಮನೆಯಲ್ಲಿ ನಿಜಾಮುದ್ದೀನ್ ಅವರನ್ನು ಕೂಡಿ ಹಾಕಿರುವದನ್ನು ಪತ್ತೆಹಚ್ಚಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಕಾನ್ವೆಂಟ್ ಜಂಕ್ಷನ್‌ನ ಮಹಮ್ಮದ್ ರಾಶಿದ್ (೪೧), ಗೌಳಿಬೀದಿಯ ಎಂ.ಜಿ. ಪ್ರಮೋದ್ (೩೧), ಚಾಮುಂಡೇಶ್ವರಿ ನಗರದ ಬಿ. ಡಾಲಿ (೪೮),

(ಮೊದಲ ಪುಟದಿಂದ) ಗೌಳಿಬೀದಿಯ ಟಿ.ಆರ್. ದರ್ಶನ್ (೪೮), ಮಕ್ಕಂದೂರಿನ ಜೀವನ್‌ಕುಮಾರ್ (೨೫), ಮಹದೇವಪೇಟೆಯ ಟಿ.ಪಿ. ಮದನ್‌ರಾಜ್ (೩೪), ಕಡಗದಾಳುವಿನ ಎಸ್. ದರ್ಶನ್ (೨೪), ಮದೆನಾಡಿನ ಎಂ.ಜೆ. ಪುರುಷೋತ್ತಮ್ (೨೨), ಕಡಗದಾಳುವಿನ ಎಂ.ಆರ್. ಮಣಿಕಂಠ (೨೪), ಮಂಗಳಾದೇವಿನಗರದ ಎನ್.ಎಸ್. ಕಿರಣ್‌ರೈ (೩೨), ಗಾಳಿಬೀಡುವಿನ ಪಿ.ಎಸ್. ಮಂಜು (೨೩), ಇಬ್ನಿವಳವಾಡಿಯ ಕೀರ್ತಿ ಟಿ.ಎಸ್. (೩೧), ವಿದ್ಯಾನಗರದ ಎಸ್. ಸಂದೀಪ್ (೩೭) ಹಾಗೂ ಕಾನ್ವೆಂಟ್ ಜಂಕ್ಷನ್‌ನ ತಬಸ್ಯ (೩೬) ಬಂಧಿತ ಆರೋಪಿಗಳಾಗಿದ್ದಾರೆ. ತಬಸ್ಯ ಮಹಮ್ಮದ್ ರಾಶಿದ್‌ನ ಪತ್ನಿಯಾಗಿದ್ದಾಳೆ.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಮೊಬೈಲ್ ಫೋನ್‌ಗಳು, ೨ ಚತುಷ್ಚಕ್ರ ವಾಹನ, ೧ ಆಟೋ ರಿಕ್ಷಾ, ೩ ದ್ವಿಚಕ್ರ ವಾಹನಗಳು ಹಾಗೂ ೧ ಎಸ್.ಬಿ.ಬಿ.ಎಲ್, ೧ ಏರ್ ಪಿಸ್ತೂಲ್, ೧ ಟಾಯ್ ಪಿಸ್ತೂಲ್ ಮತ್ತು ೨ ಕತ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಸೋಮವಾರಪೇಟೆ ಡಿವೈಎಸ್‌ಪಿ ಆರ್.ವಿ. ಗಂಗಾಧರಪ್ಪ, ಮಡಿಕೇರಿ ನಗರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ನಗರ ಠಾಣಾಧಿಕಾರಿ ಶ್ರೀನಿವಾಸ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.