ಕಣಿವೆ, ಸೆ. ೧೬: ಈ ಬಾರಿ ಶುಂಠಿ ಬೆಳೆದ ಬೆಳೆಗಾರರಿಗೆ ಎಲ್ಲಿಲ್ಲದ ಸಂತಸ. ಏಕೆಂದರೆ ಈ ವರ್ಷ ಬೆಳೆದಿರುವ ಶುಂಠಿ ಫಸಲಿಗೆ ಮಾರುಕಟ್ಟೆಗಳಲ್ಲಿ ಅತ್ಯಂತ ಹೆಚ್ಚಿನ ಬೆಲೆ ಇರುವುದರಿಂದ ಕೃಷಿಕರ ಮೈಮನ ಓಲಾಡಿ ತೇಲಾಡುತ್ತಿದೆ.

ಏಕೆಂದರೆ ಕಳೆದ ಮೂರು ವರ್ಷಗಳ ಹಿಂದೆ ನಾಡನ್ನು ಕಾಡಿದ ಮಾರಕ ಕೊರೊನಾದ ಅವಧಿಯಲ್ಲಿ ಬಹಳಷ್ಟು ಮಂದಿ ಶುಂಠಿ ಕೃಷಿಕರು ಬೆಲೆ ಇಲ್ಲದೇ ಕೈಸುಟ್ಟುಕೊಂಡಿದ್ದ ಗಾಯದ ನೋವು ಮಾಯವಾಗುವ ಮುನ್ನವೇ ಕಣ್ಣ ಮುಂದೆ ಮತ್ತದೇ ಶುಂಠಿಗೆ ಶುಕ್ರದೆಸೆ ಬಂದುದರಿAದ ಕೃಷಿಕರು ಸಹಜವಾಗಿಯೇ ಹರ್ಷಚಿತ್ತರಾಗಿದ್ದಾರೆ.

ಈ ಬಾರಿ, ಅಂದರೆ ಕಳೆದ ಮಾರ್ಚ್, ಏಪ್ರಿಲ್‌ನಲ್ಲಿ ಬಿತ್ತನೆ ಮಾಡಿದ್ದ ಮೂರುವರೆ ತಿಂಗಳ ಅವಧಿ ತುಂಬಿದ್ದ ಎಳೆಯ ಶುಂಠಿಯ ೬೦ ಕೆಜಿ ತೂಕದ ಚೀಲವೊಂದಕ್ಕೆ ಕಳೆದ ಜುಲೈ ಮೊದಲ ವಾರದಲ್ಲಿ ಅತ್ಯಧಿಕ ಬೆಲೆ ಅಂದರೆ ೭,೫೦೦ ರೂ.ಗಳಿಂದ ಮೊದಲುಗೊಂಡು ಬಂದ ಬೆಲೆ ಇದೀಗ ೬ ತಿಂಗಳ ಅವಧಿ ತುಂಬಿದ ಫಸಲಿಗೆ ಚೀಲವೊಂದಕ್ಕೆ ೪,೦೦೦ ಆಸುಪಾಸಿನಲ್ಲಿ ಸ್ಥಿರವಾಗಿ ನಿಂತಿದೆ.

ಇನ್ನು ಒಂದೂವರೆ ವರ್ಷ ಅವಧಿ ತುಂಬಿದ ಹಳೆಯ ಶುಂಠಿಗೆ ಇದೀಗ ೧೨,೫೦೦ ರೂ. ಇದೆ. ಇದು ಶುಂಠಿ ಬೆಳೆಯ ಇತಿಹಾಸದಲ್ಲಿಯೇ ಗರಿಷ್ಠ ಬೆಲೆಯಾಗಿದೆ.

ಲಕ್ಷ ಸುರಿದವರು ಕೋಟಿ ಗಳಿಕೆ

ಹೌದು ಈ ವರ್ಷ ಶುಂಠಿ ಬೆಳೆದ ಕೃಷಿಕರಲ್ಲಿ ಹಲವರು ಸಾವಿರ ಸುರಿದು ಲಕ್ಷ ರೂ ಬಾಚಿದರೆ, ಲಕ್ಷ ಸುರಿದವರು ಕೋಟಿ ಲೆಕ್ಕದಲ್ಲಿ ಹಣ ಬಾಚುವಂತಾಗಿದೆ. ಅಂದರೆ ಒಂದು ಎಕರೆ ಭೂಮಿಯಲ್ಲಿ ಈ ವರ್ಷ ಶುಂಠಿ ಬೆಳೆದವರಿಗೆ ಕನಿಷ್ಟ ಎಂದರೂ ೨೫೦ ರಿಂದ ೩೦೦ ಚೀಲ ಶುಂಠಿ ಫಸಲು ಬಂದಿದೆ.

ಇನ್ನು, ಪ್ರಗತಿಪರ ಕೃಷಿಕರಂತೂ ಎಕರೆಯೊಂದರ ಭೂಮಿಯಲ್ಲಿ ಕನಿಷ್ಟ ೪೦೦ ರಿಂದ ಗರಿಷ್ಠ ೫೦೦ ಚೀಲದವರೆಗೂ ಶುಂಠಿ ಫಸಲು ತೆಗೆಯುತ್ತಿದ್ದಾರೆ.

ಈ ಹಿಂದಿನ ವರ್ಷಗಳಲ್ಲಿ ಈಗಾಗಲೇ ಇಂತಹ ಚಿನ್ನದ ಬೆಳೆ ತೆಗೆದವರೂ ಇದ್ದಾರೆ. ಹಾಗಾಗಿ ಈ ವರ್ಷ ಈಗ ಇರುವ ಶುಂಠಿ ಬೆಲೆಗೆ ಒಂದು ಎಕರೆಯಲ್ಲಿನ ಶುಂಠಿ ಫಸಲಿಗೆ ಕನಿಷ್ಟ ಎಂದರೂ ೧೨ ರಿಂದ ೧೫ ಲಕ್ಷ ಗಳಿಂದ ಗರಿಷ್ಠ ೨೦ ರಿಂದ ೨೫ ಲಕ್ಷ ರೂ.ಗಳ ತನಕ ಲಾಭ ಬರುತ್ತಿದೆ.

ಮಳೆ ಕೊರತೆ ನಡುವೆಯೂ ಉತ್ತಮ ಬೆಳೆ

ಈ ವರ್ಷದ ಫೆಬ್ರವರಿಯಿಂದ ಜೂನ್ ಅಂತ್ಯದವರೆಗೂ ಕುಶಾಲನಗರ ವ್ಯಾಪ್ತಿಯಲ್ಲಿ ಕೃಷಿಕರಿಗೆ ಖುಷಿ ಕೊಡುವ ಮಳೆ ಸುರಿಯದೇ ಇದ್ದರೂ ಕೂಡ ಇದ್ದ ಜಲ - ಮೂಲಗಳನ್ನು ಬಳಸಿಕೊಂಡು ಬಹಳಷ್ಟು ಮಂದಿ ಕೃಷಿಕರು ಬೆವರು ಹರಿಸಿ ಕಷ್ಟಪಟ್ಟು ಶುಂಠಿ ಬೆಳೆದಿದ್ದಾರೆ.

ಅಂದರೆ ಈ ಬಾರಿ ಮಾರ್ಚ್ ನಿಂದ ಜೂನ್‌ವರೆಗೂ ಧರೆಯನ್ನು ಸುಟ್ಟ ಅತ್ಯಧಿಕ ಬಿಸಿಲ ತಾಪದ ನಡುವೆ ಅದೃಷ್ಟದ ಬೆಳೆ ಶುಂಠಿಯನ್ನು ನಿರ್ವಹಣೆ ಮಾಡುವುದು ಮಾತ್ರ ಅದನ್ನು ಬೆಳೆದವರಿಗೇನೆ ಗೊತ್ತು. ಆವಾಗಿನ ಸಂದರ್ಭ ಶುಂಠಿ ಬೆಳೆಗಾರರ ಕಷ್ಟ ಕಾರ್ಪಣ್ಯಗಳನ್ನು ಕಂಡವರು ‘‘ಅಯ್ಯೋ ಈ ಶುಂಠಿ ಸಹವಾಸವೇ ಬೇಡ’’ ಎಂದವರೂ ಇದ್ದಾರೆ. ಈ ಮಧ್ಯೆ ಇದೀಗ ಇರುವ ಅತ್ಯುತ್ತಮ ಬೆಲೆ ಸಂತಸ ತಂದಿದೆ.

ಈ ವರ್ಷ ಖಾಲಿ ಭೂಮಿಗೆ ಹೆಚ್ಚು ಬೇಡಿಕೆ

ಈ ಬಾರಿ ಶುಂಠಿಗೆ ಇರುವ ಒಳ್ಳೆಯ ಬೆಲೆಯಿಂದಾಗಿ ಬಹಳಷ್ಟು ಮಂದಿ ಮುಂದಿನ ಬಾರಿ ಶುಂಠಿ ಬಿತ್ತನೆಗೆ ಮುಂದಾಗುತ್ತಿದ್ದಾರೆ. ಹಾಗಾಗಿ ಶುಂಠಿ ಬೆಳೆಯದೇ ಇರುವ ಖಾಲಿ ಭೂಮಿಗೆ ಈಗಿನಿಂದಲೇ ಹುಡುಕಾಟ ಆರಂಭಿಸಿದ್ದಾರೆ.

ಈ ಬಾರಿ ಬಿತ್ತನೆ ಬೀಜ ದುಬಾರಿ...?

ಈಗ ಮಾರುಕಟ್ಟೆಗಳಲ್ಲಿ ಶುಂಠಿ ಫಸಲಿಗೆ ಇರುವ ಗರಿಷ್ಠ ದರದಿಂದಾಗಿ ಮುಂದಿನ ಬಾರಿಯ ಬಿತ್ತನೆಯ ಶುಂಠಿಯ ಬೆಲೆ ದುಬಾರಿಯಾಗುವ ಸಾಧ್ಯತೆ ನಿಚ್ಛಳವಾಗಿದೆ.

ಅಂದರೆ ಕಳೆದ ೨೦೨೩ ರ ಫೆಬ್ರವರಿಯಿಂದ ಏಪ್ರಿಲ್‌ನವರೆಗೆ ಬಿತ್ತನೆ ಶುಂಠಿ ಬೀಜಕ್ಕೆ ೫ ರಿಂದ ೬ ಸಾವಿರ ಇತ್ತು. ಇನ್ನು ಈ ಬಾರಿ ೬೦ ಕೆಜಿ ಯೊಂದರ ಶುಂಠಿ ಬಿತ್ತನೆ ಬೀಜಕ್ಕೆ ೮ ರಿಂದ ೧೦ ಸಾವಿರ ಆದರೂ ಅಚ್ಚರಿಪಡುವಂತಿಲ್ಲ.