ಕಣಿವೆ, ಸೆ. ೧೬: ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ಪ್ರತಿ ಮಳೆಗಾಲದ ಆಗಸ್ಟ್ ತಿಂಗಳಲ್ಲಿ ಕಾಡಿದ ಕಾವೇರಿ ನದಿಯ ಪ್ರವಾಹಕ್ಕೆ ಹೆದರಿದ ನದಿ ದಂಡೆಯ ಕೃಷಿಕರು ಈ ಬಾರಿ ಬತ್ತದ ಸಸಿಗಳ ನಾಟಿಯನ್ನು ಮುಂದೂಡಿದ್ದರು. ಈ ವರ್ಷ ಗ್ರಹಚಾರ ಸರಿ ಇಲ್ಲದ ಕಾರಣ ಮಳೆ ಮಾರುತಗಳು ಮಳೆ ಸುರಿಸದೇ ರೈತರಲ್ಲಿ ಆಸೆ ಭರಿಸಿ ಮಳೆ ಸುರಿಸಲೇ ಇಲ್ಲ. ಹಾಗಾಗಿ ಕಾವೇರಿ ನದಿ ಮಳೆಗಾಲದ ಈ ದಿನಗಳಲ್ಲಿ ಬೇಸಿಗೆಯ ಆರಂಭದ ದಿನಗಳ ಮಾದರಿಯಲ್ಲಿ ಬತ್ತಿದಂತಿದೆ. ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ನದಿಯಂಚಿನ ಕೃಷಿಕರು ಭತ್ತದ ನಾಟಿ ಮಾಡಿದ ಬಳಿಕ ನದಿಯಲ್ಲಿ ಪ್ರವಾಹ ಏರ್ಪಟ್ಟು ಸಸಿ ಮಡಿಗಳು ತೇಲಿ ಹೋಗಿದ್ದವು. ಇದು ಕೃಷಿಕನಿಗೆ ಅಪಾರ ನಷ್ಟ ಉಂಟು ಮಾಡಿತ್ತು. ಹಾಗಾಗಿ ಈ ವರ್ಷವೂ ಅಂತಹುದೇ ನದಿಯ ಪ್ರವಾಹ ಬರಬಹುದು ಎಂದು ಹೆದರಿದ ನದಿ ದಂಡೆಯ ಬಹಳಷ್ಟು ಕೃಷಿಕರು ಆಗಸ್ಟ್ ತಿಂಗಳು ಹಾಗೂ ಆಶ್ಲೇಷ ಮಳೆ ಎರಡೂ ಪೂರ್ಣಗೊಂಡ ಬಳಿಕ ಇದೀಗ ನಿರ್ಭಯವಾಗಿ ಗದ್ದೆಗಳನ್ನು ಉಳುಮೆ ಮಾಡಿ ಸಿದ್ಧಪಡಿಸಿಕೊಂಡು ಭತ್ತದ ನಾಟಿಯಲ್ಲಿ ನಿರತರಾಗಿದ್ದಾರೆ.

ಉಳಿದಂತೆ ಇತರ ಪ್ರದೇಶಗಳ ಕೃಷಿಕರು ಕೈಗೊಂಡ ಭತ್ತದ ನಾಟಿ ಪೂರ್ಣಗೊಂಡಿದ್ದು ಭತ್ತದ ಪೈರುಗಳು ಗದ್ದೆಗಳಲ್ಲಿ ಬೇರುಗಳನ್ನು ಬಿಟ್ಟು ಚಿಗುರೊಡೆಯುತ್ತಿವೆ.

ಆದರೆ ಈ ಕಾವೇರಿ ಪ್ರವಾಹದ ವೇದನೆ ಅನುಭವಿಸುವ ನತದೃಷ್ಟ ಮಂದಿ ಇದೀಗ ನಾಟಿ ಮಾಡುತ್ತಿದ್ದು ಭತ್ತದ ಫಸಲು ಚಳಿಗಾಲದ ಕೊರೆಗೆ ಸಿಲುಕುವ ಆತಂಕದಲ್ಲಿದ್ದಾರೆ.