ಶನಿವಾರಸಂತೆ, ಸೆ. ೧೭: ಸಮೀಪದ ಮುಳ್ಳೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಪರಿಸರ ಸ್ನೇಹಿ ಗಣಪ ತಯಾರಿಕೆ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಶಾಲೆಯಲ್ಲಿ ಹಲವಾರು ವರ್ಷಗಳಿಂದ ಮುಖ್ಯಶಿಕ್ಷಕ ಸಿ.ಎಸ್.ಸತೀಶ್ ಶಾಲೆಯಲ್ಲಿ ಮಣ್ಣು, ಅರಿಶಿನ, ಅಕ್ಕಿ ಹಿಟ್ಟು, ಭತ್ತದ ಹೊಟ್ಟು ಮತ್ತು ಮೈದಾ ಹಿಟ್ಟು, ಪೇಪರ್ ಮತ್ತು ರಟ್ಟು ಬಳಸಿ ಪರಿಸರ ಸ್ನೇಹಿ ಗಣಪತಿ ರಚಿಸಿ ಎಲ್ಲರ ಗಮನ ಸೆಳೆಯುತ್ತಿದ್ದರು. ಈ ಬಾರಿ ಶಾಲೆಯ ೩೦ ವಿದ್ಯಾರ್ಥಿಗಳು ಮುಖ್ಯಶಿಕ್ಷಕ ಸತೀಶ್ ಹಾಗೂ ಶಿಕ್ಷಕಿ ನವ್ಯಾ ಮಾರ್ಗದರ್ಶನದಲ್ಲಿ ಶಾಲಾ ಆವರಣ ದಲ್ಲಿ ವಿವಿಧ ಬಗೆಯ ನಿಲುವಿನ ಗಣಪನನ್ನು ತಯಾರಿಸಿ ಸಂಭ್ರಮಿಸಿದರು.

ಈ ಸಂದರ್ಭ ಮುಖ್ಯಶಿಕ್ಷಕ ಸತೀಶ್ ಮಾತನಾಡಿ, ಪಿಒಪಿ ಯಿಂದ ತಯಾರಿಸಲ್ಪಟ್ಟ ಗಣಪತಿ ಕರಗಲು ಹತ್ತಾರು ವರ್ಷಗಳೇ ಬೇಕಾಗುತ್ತದೆ. ಇದರಲ್ಲಿರುವ ರಾಸಾಯನಿಕ ವಸ್ತುಗಳು ನೀರಿನಲ್ಲಿ ಸೇರುವುದರಿಂದ ಜಲಚರಗಳ ಸಾವಿಗೂ ಕಾರಣವಾಗುತ್ತದೆ. ನೀರೂ ಕಲುಷಿತಗೊಳ್ಳುತ್ತದೆ. ಹಾಗಾಗಿ, ಮಣ್ಣಿನಿಂದ ರಚಿತವಾದ ನೈಸರ್ಗಿಕ ಪರಿಸರ ಸ್ನೇಹಿ ಗಣಪತಿಯನ್ನು ಪ್ರತಿಷ್ಠಾಪಿಸಬೇಕು. ಮೈದಾ ಮತ್ತು ಭತ್ತದ ಹೊಟ್ಟಿನಿಂದ ತಯಾರಿಸಿದ ಗಣಪ ಕೂಡ ಪರಿಸರಕ್ಕೆ ಪೂರಕವಾಗಿದ್ದು ಇದು ನೀರಿನಲ್ಲಿ ಕರಗಿ ಜಲಚರಗಳಿಗೆ ಆಹಾರವಾಗುತ್ತದೆ ಎಂದರು.

ಹೊರ ರಾಜ್ಯದಿಂದ ಆಳೆತ್ತರದ ಪಿಒಪಿ ಗಣಪತಿ ಮೂರ್ತಿಗಳು ನಮ್ಮ ರಾಜ್ಯಕ್ಕೆ ಬರುತ್ತಿದ್ದು ರಾಜ್ಯದ ಸ್ಥಳೀಯ ಕುಶಲಕರ್ಮಿಗಳು, ಶಿಲ್ಪಿಗಳು, ಕುಂಬಾರರು ತಯಾರಿಸಿದ ನೈಸರ್ಗಿಕ ಗಣಪತಿಗೆ ಬೇಡಿಕೆ ಇಲ್ಲದಂತಾಗಿದೆ. ಪಿಒಪಿ ಗಣಪನನ್ನು ನಿಷೇಧಿಸಿದರೇ ಮಾಲಿನ್ಯ ತಡೆಗಟ್ಟುವುದರ ಜತೆಗೆ ಸ್ಥಳೀಯ ಕುಶಲಕರ್ಮಿಗಳಿಗೆ ಉದ್ಯೋಗ ಒದಗಿಸಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.