ವೀರಾಜಪೇಟೆ, ಸೆ. ೧೬: ಪದವಿಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಲಾದ ವೀರಾಜಪೇಟೆ ತಾಲೂಕು ಮಟ್ಟದ ಕ್ರೀಡಾಕೂಟದ ಕಬಡ್ಡಿ ಪಂದ್ಯಾವಳಿ ಬಾಳುಗೋಡು ಏಕಲವ್ಯ ಮಾದರಿ ವಸತಿ ಕಾಲೇಜಿನಲ್ಲಿ ನಡೆಯಿತು.
ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ತಿತಿಮತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಚಾರ್ಲ್ಸ್ ಡಿಸೋಜಾ ಅವರು ಉತ್ತಮ ಪೈಪೋಟಿಯೊಂದಿಗೆ ಕ್ರೀಡಾ ಮನೋ ಭಾವನೆಯನ್ನು ಬೆಳೆಸಿಕೊಳ್ಳುವಂತೆ ತಿಳಿಸಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಕಾಲೇಜಿನ ಪ್ರಾಂಶುಪಾಲ ಡಾ. ದಿಲನ್ ಐ.ಎಂ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಸುಮಾರು ೧೮ಕ್ಕೂ ಅಧಿಕ ಕಾಲೇಜುಗಳ ನಡುವೆ ಜರುಗಿದ ಈ ಕ್ರೀಡಾಕೂಟದ ಬಾಲಕರ ವಿಭಾಗದಲ್ಲಿ ಬಿ.ಜಿ.ಎಸ್. ಪದವಿಪೂರ್ವ ಕಾಲೇಜು ಸಿದ್ದಾಪುರ ಮತ್ತು ಬಾಲಕಿಯರ ವಿಭಾಗದಲ್ಲಿ ತಿತಿಮತಿ ಪದವಿಪೂರ್ವ ಕಾಲೇಜು ವಿಜೇತರಾಗಿ ಜಿಲ್ಲಾಮಟ್ಟವನ್ನು ಪ್ರವೇಶಿಸಿತು.
ಬಾಲಕ ಮತ್ತು ಬಾಲಕಿಯರ ವಿಭಾಗದ ರನ್ನರ್ಸ್ ಸ್ಥಾನವನ್ನು ಕ್ರಮವಾಗಿ ಸಂತ ಅನ್ನಮ್ಮ ಪದವಿಪೂರ್ವ ಕಾಲೇಜು ಮತ್ತು ಸರ್ಕಾರಿ ಪದವಿಪೂರ್ವ ಕಾಲೇಜು ಪೊನ್ನಂಪೇಟೆ ತಮ್ಮದಾಗಿಸಿಕೊಂಡವು.
ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ತಿತಿಮತಿ ಮೊರಾರ್ಜಿ ಶಾಲೆ ಪ್ರಾಂಶುಪಾಲ ಷಡಕ್ಷರಿ ಮತ್ತು ಶ್ರೀಮಂಗಲ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಚಂದ್ರಶೇಖರ್ ಅವರು ವಿಜೇತ ಮತ್ತು ರನ್ನರ್ಸ್ ತಂಡಗಳಿಗೆ ಟ್ರೋಫಿ ಮತ್ತು ಪ್ರಶಸ್ತಿ ಪತ್ರ ಪ್ರದಾನ ಮಾಡಿದರು.
ಕ್ರೀಡೆಗೆ ವಿಶೇಷ ತೀರ್ಪುಗಾರರಾಗಿ ಬೆಕ್ಕೆಸೊಡ್ಲೂರುವಿನ ಶ್ರೀ ಶಾರದಾ ಪ್ರೌಢಶಾಲೆಯ ದೈಹಿಕ ಶಿಕ್ಷಕರಾದ ಚೌಹಾನಿ, ಚೂರಿಕಾಡು ಜಿ.ಎಂ.ಪಿ. ಶಾಲೆಯ ವಿನಯ್ ತೋಡ್ಕರ್, ತಿತಿಮತಿ ಎಂಡಿಆರ್ ಎಸ್‌ನ ಹಸೀನಾ ಅಲಾರಕಿ ಭಾಗವಹಿ ಸಿದ್ದರು. ಉಳಿದಂತೆ ವಿವಿಧ ಕಾಲೇಜು ಗಳ ಕ್ರೀಡಾ ತರಬೇತುದಾರರು, ಕಾಲೇಜು ಉಪನ್ಯಾಸಕರು ನೆರೆದಿದ್ದರು.