ಮಡಿಕೇರಿ, ಸೆ. ೧೬ : ಕೊಡಗು ಜಿಲ್ಲಾ ಮಹಾಬೋಧಿ ಪತ್ತಿನ ಸಹಕಾರ ಸಂಘವು ೨೦೨೨-೨೩ನೇ ಸಾಲಿನಲ್ಲಿ ರೂ.೭೬,೨೦೬ ರÀಷ್ಟು ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಸ್.ಸಿ. ಸತೀಶ್ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಂಘವು ಪ್ರಸ್ತುತ ೧೩೨೨ ಮಂದಿ ಸದಸ್ಯರುಗಳನ್ನು ಹೊಂದಿದ್ದು, ಸದಸ್ಯರಿಂದ ರೂ.೧೧,೪೭,೩೦೦ ಲಕ್ಷ ಪಾಲು ಬಂಡವಾಳ ಸಂಗ್ರಹಿಸಲಾಗಿದೆ. ಸಂಘದ ದುಡಿಯುವ ಬಂಡವಾಳವು ರೂ. ೧೬,೭೯,೧೦೦ ಆಗಿದ್ದು, ಸಂಘ ಪ್ರಸ್ತುತ ರೂ.೪,೭೦,೦೪೦ ರಷ್ಟು ವಿವಿಧ ಠೇವಣಿಗಳನ್ನು ಹೊಂದಿರುತ್ತದೆ. ಸಂಘವು ಸದಸ್ಯರುಗಳಿಗೆ ಜಾಮೀನು ಸಾಲವನ್ನು ನೀಡುತ್ತಿದ್ದು, ಇದುವರೆಗೆ ರೂ.೧೭,೦೮,೫೪೯ ಗಳಷ್ಟು ಸದಸ್ಯರಿಗೆ ಜಾಮೀನು ಸಾಲವಾಗಿ ನೀಡಲಾಗಿದೆ ಎಂದು ಹೇಳಿದ್ದಾರೆ.

ಸಂಘದಲ್ಲಿರುವ ಠೇವಣಿಗಳಿಗೆ ಕನಿಷ್ಟ ಶೇ.೨ ರಿಂದ ಗರಿಷ್ಠ ಶೇ.೮ ರವರೆಗೆ ಆಕರ್ಷಕ ಬಡ್ಡಿ ನೀಡಲಾಗುತ್ತಿದೆ. ಹಿರಿಯ ನಾಗರಿಕರಿಗೆ ೮.೫ ರಷ್ಟು ಬಡ್ಡಿ ನೀಡಲಾಗುತ್ತಿದ್ದು, ಗ್ರಾಹಕರು ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಸಂಘದಲ್ಲಿ ಪ್ರಸ್ತುತ ಮರಣೋತ್ತರ ಸಹಾಯಧನ ನಿಧಿ ಯೋಜನೆ ಜಾರಿಯಲ್ಲಿದೆ. ಹೊಸದಾಗಿ ಸೇರ್ಪಡೆಗೊಳ್ಳುವ ಸದಸ್ಯರುಗಳು ಇದರ ಸೌಲಭ್ಯವನ್ನು ಪಡೆದುಕೊಳ್ಳಬಹುದು ಹಾಗೂ ಸದಸ್ಯರುಗಳು ತೆಗೆದುಕೊಳ್ಳುವ ಸಾಲದ ಮೇಲೆ ಜೀವವಿಮೆಯನ್ನು ಮಾಡಲಾಗುತ್ತಿದೆ. ಮಹಾಬೋಧಿ ಪತ್ತಿನ ಸಹಕಾರ ಸಂಘದ ೮ನೇ ಮಹಾಸಭೆಯು ತಾ.೧೭ ರಂದು (ಇಂದು) ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಬೆಳಿಗ್ಗೆ ೧೦.೩೦ ಗಂಟೆಗೆ ತಮ್ಮ ಅಧ್ಯಕ್ಷತೆಯಲ್ಲಿ ನಡೆಯಲಿದೆ ಅವರು ತಿಳಿಸಿದ್ದಾರೆ.