ವೀರಾಜಪೇಟೆ, ಸೆ. ೧೬: ಶಿಕ್ಷಣದ ಜೊತೆಯಲ್ಲಿ ಮಾನಸಿಕ ಆರೋಗ್ಯ ಕಾಪಾಡುವುದು ಮುಖ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕೊಡಗು ಜಿಲ್ಲೆಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಕೆ.ಬಿ. ಪ್ರಸಾದ್ ಅಭಿಪ್ರಾಯಪಟ್ಟರು.

ವೀರಾಜಪೇಟೆಯ ಸಂತ ಅನ್ನಮ್ಮ ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಾನಸಿಕ ಆರೋಗ್ಯ ವಿಭಾಗ, ವಕೀಲರ ಸಂಘ, ಪೊಲೀಸ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ನಡೆದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ೨೦೨೩ನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಮಾನಸಿಕ ಆರೋಗ್ಯ ಮುಖ್ಯವಾಗಿದ್ದು, ಮಾನಸಿಕವಾಗಿ ಸದೃಢರಾಗಬೇಕೆಂದರು. ಮಾತ್ರವಲ್ಲದೆ ಪರಿಸರಕ್ಕೆ ಹೊಂದಿಕೊAಡು ಜೀವನವನ್ನು ನಡೆಸಬೇಕು ಎಂದು ತಿಳಿಸಿದರು.

ವೀರಾಜಪೇಟೆ ನಗರ ಪೊಲೀಸ್ ಠಾಣಾಧಿಕಾರಿ ರವೀಂದ್ರ ಮಾತನಾಡಿ, ಜೀವನದಲ್ಲಿ ಸಮಸ್ಯೆಗಳು ಬರುವುದು ಸಹಜ, ಆತ್ಮಹತ್ಯೆ ಒಂದೇ ಪರಿಹಾರವಲ್ಲ. ಮಾನಸಿಕ ಸ್ಥಿರತೆ ಕಾಪಾಡಬೇಕೆಂದು ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ.ಫಾ. ಐಸಾಕ್ ರತ್ನಾಕರ್ ಮಾತನಾಡಿ, ಪ್ರತಿಯೊಬ್ಬರ ಮೇಲೂ ದೇವರ ಆಶೀರ್ವಾದವಿರುತ್ತದೆ. ಜೀವ ಹಾಗೂ ಜೀವನ ಎರಡೂ ಅಮೂಲ್ಯ ಎಂದರು.

ಆತ್ಮಹತ್ಯೆ ತಡೆಗಟ್ಟುವಲ್ಲಿ ಸಮುದಾಯದ ಪಾತ್ರ ಎಂಬ ವಿಷಯದಲ್ಲಿ ಪ್ರಭಂದ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಮನೋವೈದ್ಯರಾದ ಡಾ. ಡೆವಿನ್ ಲಿನೇಕರ್ ಕರ್ಕಡ ಹಾಗೂ ಮಕ್ಕಳ ವಿಶೇಷ ಪೊಲೀಸ್ ಘಟಕದ ಸುಮತಿ ಉಪನ್ಯಾಸವನ್ನು ನೀಡಿದರು.

ವೇದಿಕೆಯಲ್ಲಿ ಸಂತ ಅನ್ನಮ್ಮ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಜೋಮನ್ ಥೋಮಸ್ ಡಾ. ಆನಂದ್, ಜಯಪ್ಪ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ಉಪಸ್ಥಿತರಿದ್ದರು.