ಮಡಿಕೇರಿ, ಸೆ. ೧೬: ಶವಪರೀಕ್ಷೆಗೆ ಲಂಚದ ಬೇಡಿಕೆಯಿಟ್ಟಿದ್ದ ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯ ಕೀಲು ಮೂಳೆ ತಜ್ಞರಾದ ಡಾ. ಶ್ರೀನಿವಾಸ್ ಮೂರ್ತಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಶಾಸಕರಾದ ಎ.ಎಸ್. ಪೊನ್ನಣ್ಣ ತಿಳಿಸಿದ್ದಾರೆ. ವಿಷ ಸೇವಿಸಿ ಸಾವನ್ನಪ್ಪಿದ್ದ ವ್ಯಕ್ತಿಯ ಮೃತದೇಹದ ಮರಣೋತ್ತರ ಪರೀಕ್ಷೆಗೆ ಮೃತರ ಸಂಬAಧಿಕರಿAದ ಡಾ. ಶ್ರೀನಿವಾಸ್ ಮೂರ್ತಿ ಅವರು ಲಂಚ ಸ್ವೀಕರಿಸಿದ ವೀಡಿಯೋ ವೈರಲ್ ಆಗಿತ್ತು.

ಈ ಪ್ರಕರಣ ಸಂಬAಧ ಡಾ. ಶ್ರೀನಿವಾಸ್ ಮೂರ್ತಿ ಲಂಚ ಪಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿದ್ದು, ಭ್ರಷ್ಟಾಚಾರ ಹಾಗೂ ದುರ್ನಡತೆ ಆರೋಪದ ಬಗ್ಗೆ ಶಿಸ್ತು ಕ್ರಮ ಬಾಕಿಯಿರಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರಾದ ಡಿ. ರಂದೀಪ್ ಅವರು ಡಾ. ಶ್ರೀನಿವಾಸ ಮೂರ್ತಿ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಅಮಾನತ್ತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯದೇ ಕೇಂದ್ರ ಸ್ಥಾನ ಬಿಡುವಂತಿಲ್ಲ ಎಂದೂ ಆದೇಶದಲ್ಲಿ ಸೂಚಿಸಲಾಗಿದೆ ಎಂದು ಪೊನ್ನಣ್ಣ ಮಾಹಿತಿ ನೀಡಿದ್ದಾರೆ.