ಕುಶಾಲನಗರ, ಅ. ೨೬: ಭಾರತ ಸರಕಾರದ ಜವಳಿ ಮಂತ್ರಾಲಯ ಇಲಾಖೆಯ ಅಡಿಯಲ್ಲಿ ಕುಶಾಲನಗರದಲ್ಲಿ ಆಯೋಜಿಸಿದ್ದ ಕ್ರಾಫ್ಟ್ ಅಂಡ್ ವೀವ್ಸ್ ಮಹೋತ್ಸವ-೨೦೨೩ಕ್ಕೆ ಕೊಡಗು ಜಿಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್. ವೀಣಾ ಚಾಲನೆ ನೀಡಿದರು.

ಕುಶಾಲನಗರದ ಮಾರುಕಟ್ಟೆ ರಸ್ತೆಯ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಮೇಳದಲ್ಲಿ ವಿವಿಧ ಮಳಿಗೆಗಳನ್ನು ವೀಕ್ಷಿಸಿ ಮಾಹಿತಿ ಪಡೆದುಕೊಂಡು ವಸ್ತುಗಳನ್ನು ಖರೀದಿಸಿದರು.

ನಂತರ ಮಾತನಾಡಿದ ಅವರು, ದೇಶೀಯ ಉತ್ಪನ್ನಗಳನ್ನು ಹೆಚ್ಚಿನ ಮಟ್ಟದಲ್ಲಿ ಖರೀದಿಸಿ ಇಂತಹ ಉದ್ಯಮಗಳಿಗೆ ಗ್ರಾಹಕರು ಪ್ರೋತ್ಸಾಹ ನೀಡಬೇಕೆಂದು ಕರೆ ನೀಡಿದರು. ಒಂದೇ ಸೂರಿನಡಿ ವಿವಿಧ ಉತ್ಪನ್ನಗಳನ್ನು ಖರೀದಿಸಲು ಕಲ್ಪಿಸಿರುವ ಅವಕಾಶವನ್ನು ಗ್ರಾಹಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಕುಶಾಲನಗರ ಡಿವೈಎಸ್ಪಿ ಗಂಗಾಧರಪ್ಪ ಮಾತನಾಡಿ, ಮೇಳಕ್ಕೆ ಶುಭ ಕೋರಿದರು. ಮೈಸೂರು ಕರಕುಶಲ ಸೇವಾ ಕೇಂದ್ರದ ಸಹಾಯಕ ನಿರ್ದೇಶಕ ಕೆ.ಎಸ್. ಸುನಿಲ್ ಕುಮಾರ್ ಮೇಳದ ಬಗ್ಗೆ ಮಾಹಿತಿ ಒದಗಿಸಿದರು.

ಮೇಳದಲ್ಲಿ ಕರ್ನಾಟಕ ರಾಜ್ಯದ ಮತ್ತು ದೇಶದ ವಿವಿಧ ರಾಜ್ಯಗಳ ಸುಮಾರು ೩೦ಕ್ಕೂ ಹೆಚ್ಚು ಕರಕುಶಲಕರ್ಮಿಗಳು ಮತ್ತು ಕೈಮಗ್ಗ ನೇಕಾರರು ಭಾಗವಹಿಸಿದ್ದರು. ಕರ್ನಾಟಕ ರಾಜ್ಯದ ಮೈಸೂರಿನ ಮರದ ಕೆತ್ತನೆಯ ವಸ್ತುಗಳು, ಚೆನ್ನಪಟ್ಟಣದ ಗೊಂಬೆಗಳು, ಮಂಡ್ಯದ ಮಣ್ಣಿನ ಮಡಿಕೆಗಳು, ಬೆಂಗಳೂರಿನ ಖಾದಿ ಶರ್ಟ್ಗಳು ಮತ್ತು ಖಾದಿ ಉತ್ಪನ್ನಗಳು, ನಮ್ಮ ರಾಜ್ಯದ ಕೈಮಗ್ಗ ಉತ್ಪನ್ನಗಳು ಇದರ ಜೊತೆಗೆ ಸಿಕ್ಕಿಂ ರಾಜ್ಯದ ಮರದ ಗೃಹಲಂಕಾರಿಕ ವಸ್ತುಗಳು ಮತ್ತು ಕೈಮಗ್ಗ ವಸ್ತುಗಳು, ಆಂಧ್ರಪ್ರದೇಶ ರಾಜ್ಯದ ಕರಕುಶಲ ಮತ್ತು ಕೈಮಗ್ಗ ಉತ್ಪನ್ನಗಳು, ಪಶ್ಚಿಮ ಬಂಗಾಳದ ಕಾಂತ ಸೀರೆಗಳು, ಜಾರ್ಖಂಡ್ ಹಾಗೂ ಬಿಹಾರ್ ರಾಜ್ಯದ ತಸ್ಸರ್ ರೇಷ್ಮೆ ಸೀರೆಗಳು, ತಮಿಳುನಾಡು ರಾಜ್ಯದ ಪರಿಶುದ್ಧ ರೇಷ್ಮೆ ಸೀರೆಗಳು ಇನ್ನೂ ಹಲವು ಕರಕುಶಲ ಮತ್ತು ಕೈಮಗ್ಗ ವಸ್ತುಗಳು ಈ ವಿಶೇಷ ಮೇಳದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.