ಬೆಂಗಳೂರು, ಅ. ೨೬: ಹುಲಿ ಉಗುರಿನ ಲಾಕೆಟ್ ಇರುವ ಸರ ಧರಿಸಿರುವವರ ವಿರುದ್ಧ ನಿತ್ಯ ದೂರುಗಳು ಬರುತ್ತಿದ್ದು, ಬಹುತೇಕರಿಗೆ ಇದು ಅಪರಾಧ ಎಂಬ ಅರಿವೇ ಇಲ್ಲ ಎಂಬುದು ಗೋಚರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಕ್ರಮವಾಗಿ ವನ್ಯಜೀವಿ ಉತ್ಪನ್ನಗಳನ್ನು ಇಟ್ಟುಕೊಂಡಿರುವವರು ಅವುಗಳನ್ನು ಸರ್ಕಾರಕ್ಕೆ ಮರಳಿಸಲು ಕೊನೆಯ ಅವಕಾಶ ನೀಡುವ ಕಾನೂನು ಸಾಧ್ಯತೆಗಳನ್ನು ಪರಾಮರ್ಶಿಸಲಾಗುತ್ತಿದೆ ಎಂದು ಅರಣ್ಯ, ವನ್ಯಜೀವಿ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ವಿಕಾಸಸೌಧದ ತಮ್ಮ ಕಚೇರಿಯಲ್ಲಿಂದು ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದ ತರುವಾಯ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಪೂರ್ವಜರು ಹೊಂದಿದ್ದ ವನ್ಯಜೀವಿ ಅಂಗಾAಗದಿAದ ಮಾಡಿದ ಟ್ರೋಫಿ, ಫಲಕ, ಪೆಂಡೆAಟ್ ಸೇರಿದಂತೆ ಯಾವುದೇ ಉತ್ಪನ್ನಗಳನ್ನು ಅರಣ್ಯ ಇಲಾಖೆಯಿಂದ ದೃಢೀಕರಿಸಿಕೊಂಡು ಮಾಲೀಕತ್ವದ ಹಕ್ಕು ಪಡೆದುಕೊಳ್ಳಲು ೨೦೦೩ರವರೆಗೆ ಹಲವು ಅವಕಾಶ ನೀಡಲಾಗಿತ್ತು. ಹಲವರು ತಮ್ಮ ಬಳಿ ಇದ್ದ ವನ್ಯಜೀವಿ ಉತ್ಪನ್ನಗಳಿಗೆ ಮಾಲೀಕತ್ವದ ಹಕ್ಕು ಪಡೆದಿದ್ದಾರೆ. ಇನ್ನೂ ಅನೇಕರು ದೃಢೀಕರಣ ಮತ್ತು ಪ್ರಮಾಣ ಪತ್ರ ಪಡೆದಿಲ್ಲ ಎಂದು ಹೇಳಿದರು.
ಗ್ರಾಮೀಣ ಪ್ರದೇಶದ ಕೆಲವರ ಮನೆಗಳಲ್ಲಿ ಜಿಂಕೆ ಚರ್ಮ, ಆನೆ ದಂತದಿAದ ಮಾಡಿದ ಕಲಾಕೃತಿಗಳು, ಜಿಂಕೆ ಮತ್ತು ಸಾರಂಗದ ಕೊಂಬು ಇತ್ಯಾದಿಗಳನ್ನು ಇಟ್ಟುಕೊಂಡಿರುತ್ತಾರೆ. ಇದು ಅಪರಾಧ ಎಂಬುದೂ ಅವರಿಗೆ ತಿಳಿದಿಲ್ಲ. ವರ್ತೂರು ಸಂತೋಷ ಪ್ರಕರಣ ವರದಿಯಾದ ಬಳಿಕ, ವನ್ಯಜೀವಿ ಉತ್ಪನ್ನಗಳ ಅಕ್ರಮ ದಾಸ್ತಾನಿನ ಬಗ್ಗೆ ಹೆಚ್ಚಾಗಿ ದೂರುಗಳು ಬರುತ್ತಿವೆ. ಕಾನೂನಿನ ಅರಿವಿಲ್ಲದ ಶ್ರೀಸಾಮಾನ್ಯರಿಗೆ ಆಗುವ ತೊಂದರೆ ತಪ್ಪಿಸಲು ಒಂದು ಬಾರಿ ಕೊನೆಯದಾಗಿ ಇಂತಹ ಅಕ್ರಮ ಸಂಗ್ರಹಣೆ, ದಾಸ್ತಾನಿನ ಬಗ್ಗೆ ಘೋಷಣೆ ಮಾಡಿಕೊಳ್ಳಲು ಮತ್ತು ಸರ್ಕಾರಕ್ಕೆ ಮರಳಿಸಲು ಅವಕಾಶ ನೀಡುವ ಬಗ್ಗೆ ಪರಾಮರ್ಶಿಸಿ, ಇದಕ್ಕೆ ಇತಿಶ್ರೀ ಹಾಡಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.
ಚಿತ್ರನಟರು, ಗಣ್ಯರು ನಕಲಿ ಹುಲಿ ಉಗುರಿನ ಲಾಕೆಟ್ ಕೂಡ ಧರಿಸಿದರೂ ಇತರರಿಗೆ ಪ್ರೇರಣೆ ಸಿಗುತ್ತದೆ. ಅವರಿಗೆ ಸಾವಿರಾರು ಅಭಿಮಾನಿಗಳು ಇರುತ್ತಾರೆ. ಅವರು ಕೂಡ ತಮ್ಮ ನಾಯಕನಂತೆ ಹುಲಿ ಉಗುರಿನ ಲಾಕೆಟ್ ಧರಿಸಲು ಬಯಸುತ್ತಾರೆ. ಆಗ ಬೇಡಿಕೆ ಹೆಚ್ಚುತ್ತದೆ. ವನ್ಯಜೀವಿಗಳ ಹತ್ಯೆ ಆಗುತ್ತದೆ. ಇದಕ್ಕೆ ಪರೋಕ್ಷ ಕುಮ್ಮಕ್ಕು ನೀಡಿದಂತೆ ಆಗುತ್ತದೆ. ಹೀಗಾಗಿ ಸಾಮಾಜಿಕ ಬದ್ಧತೆಯ ದೃಷ್ಟಿಯಿಂದ ಗಣ್ಯರು, ನಟರು ನಕಲಿ ಪೆಂಡೆAಟ್ ಕೂಡ ಧರಿಸಬಾರದು ಎಂದು ಮನವಿ ಮಾಡಿದರು.
ಎಲ್ಲ ಚಿನ್ನಾಭರಣ ಮಳಿಗೆಗಳಲ್ಲಿ ತಮ್ಮಲ್ಲಿ ವನ್ಯಜೀವಿಯ ಯಾವುದೇ ಆಭರಣ ತಯಾರಿಸುವುದಿಲ್ಲ, ಮಾರಾಟ ಮಾಡುವುದಿಲ್ಲ. ಇದು ಶಿಕ್ಷಾರ್ಹ ಅಪರಾಧ ಎಂಬ ಫಲಕ ಹಾಕುವಂತೆ ಸೂಚಿಸಲಾಗುವುದು ಎಂದು ಈಶ್ವರ ಖಂಡ್ರೆ ತಿಳಿಸಿದರು.