ಗೋಣಿಕೊಪ್ಪಲು, ಅ. ೨೬: ಮುಂಜಾನೆ ವೇಳೆ ನಡೆದ ರಸ್ತೆ ಅಪಘಾತದಲ್ಲಿ ಶಾಲಾ ಬಸ್ ಚಾಲಕ ಗಂಭೀರ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಾದ ಪ್ರಕರಣ ವರದಿಯಾಗಿದೆ. ದ.ಕೊಡಗಿನ ನಿಟ್ಟೂರು- ಕಾನೂರು ಮುಖ್ಯ ರಸ್ತೆಯಲ್ಲಿ (ತೇಂಬರೆ) ಸರ್ಕಾರಿ ಹಾಗೂ ಶಾಲಾ ಬಸ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ೨ ಬಸ್‌ಗಳಲ್ಲಿದ್ದ ಬಹುತೇಕ ಶಾಲಾ ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ. ಕೆಲವು ವಿದ್ಯಾರ್ಥಿ ಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ತಮ್ಮ ಮನೆಗಳಿಗೆ ವಾಪಸ್ಸಾಗಿದ್ದಾರೆ.

ಗೋಣಿಕೊಪ್ಪ ಲಯನ್ಸ್ ವಿದ್ಯಾ ಸಂಸ್ಥೆಗೆ ಒಳಪಟ್ಟಿರುವ ಶಾಲಾ ಬಸ್ ಎಂದಿನAತೆ ವಿದ್ಯಾರ್ಥಿಗಳನ್ನು ಶಾಲೆಗೆ ಕರೆದುಕೊಂಡು ಕೊಟ್ಟಗೇರಿ ಕಡೆ ಯಿಂದ ಬರುತ್ತಿದ್ದ ವೇಳೆ ನಿಟ್ಟೂರು-ಕಾನೂರು ಮುಖ್ಯ ರಸ್ತೆಯ (ತೇಂಬರೆ) ಬಳಿ ಹೆಚ್.ಡಿ.ಕೋಟೆ ನಿಟ್ಟೂರು ಮಾರ್ಗವಾಗಿ ಗೋಣಿಕೊಪ್ಪಕ್ಕೆ ಬರುತ್ತಿದ್ದ ಸರ್ಕಾರಿ ಬಸ್‌ಗೆ ಮುಖಾ ಮುಖಿ ಡಿಕ್ಕಿಯಾಗಿದೆ.

ಬಸ್‌ಗೆ ಡಿಕ್ಕಿಯಾದ ರಭಸಕ್ಕೆ ಶಾಲಾ ಬಸ್ ಚಾಲಕ ಕುಳಿತಿರುವ ಭಾಗ ತೀವ್ರ ಜಖಂಗೊAಡಿದೆ. ಬಸ್ ಚಾಲಕ ಈಶ ಅವರ ಹೊಟ್ಟೆ ಭಾಗಕ್ಕೆ ಬಸ್‌ನ ಸ್ಟೀರಿಂಗ್ ತಗುಲಿದ ಪರಿ ಣಾಮ ಗಾಯವಾಗಿದೆ. ಬಸ್‌ನ ಸ್ಟೀರಿಂಗ್ ಸ್ಥಳದಿಂದ ಚಾಲಕ ಈಶನನ್ನು ಸ್ಥಳದಲ್ಲಿದ್ದ ನಾಗರಿಕರು ಕಷ್ಟಪಟ್ಟು ಹೊರತೆಗೆದರು. ತೀವ್ರ ತರದ ಪೆಟ್ಟಾದ ಹಿನ್ನೆಲೆಯಲ್ಲಿ ಈತನನ್ನು ಗೋಣಿಕೊಪ್ಪ ಆಸ್ಪತ್ರೆಗೆ ಸಾಗಿಸಲಾಯಿತು. ಇಲ್ಲಿನ ವೈದ್ಯರಾದ ಡಾ. ಗ್ರೀಷ್ಮ ಬೋಜಮ್ಮ ಪ್ರಥಮ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಯಿತು.

ಶಾಲಾ ಬಸ್ ಹಾಗೂ ಸರ್ಕಾರಿ ಬಸ್ಸಿನಲ್ಲಿ ಬಹುತೇಕ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿ ದ್ದರು. ಹೆಚ್.ಡಿ.ಕೋಟೆ ಘಟಕ ಮಾರ್ಗ ಸಂಖ್ಯೆ ೨೯ರ ಸರ್ಕಾರಿ ಬಸ್ ಚಾಲಕ ಎಂ.ಬಿ.ಲಕ್ಷö್ಮಣ ಅವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಡಿಕ್ಕಿಯಾದ ಹಿನ್ನೆಲೆಯಲ್ಲಿ ಬಸ್‌ನಲ್ಲಿದ್ದ ಹಲವು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ವಿದ್ಯಾರ್ಥಿಗಳಿಗೆ ಗೋಣಿಕೊಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.

ಅಪಘಾತದ ಸುದ್ದಿ ತಿಳಿದ ಲಯನ್ಸ್ ಪ್ರೌಢಶಾಲೆಯ ಪ್ರಾಂಶುಪಾಲರಾದ ಲತ ಹಾಗೂ ಸಿಬ್ಬಂದಿಗಳು ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು. ಗಂಭೀರ ಗಾಯಗೊಂಡಿದ್ದ ಶಾಲಾ ಬಸ್ ಚಾಲಕ ಈಶನನ್ನು ಹೆಚ್ಚಿನ ಚಿಕಿತ್ಸೆ ನೀಡಲು ಮೈಸೂರಿನ ಆಸ್ಪತ್ರೆಗೆ ಸಾಗಿಸಲು ವ್ಯವಸ್ಥೆ ಕಲ್ಪಿಸಿದರು. ಅಪಘಾತದ ಸುದ್ದಿ ತಿಳಿದ ನಾಗರಿಕರು ಆಸ್ಪತ್ರೆ ಆವರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಮಕ್ಕಳ ಪೋಷಕರು ಧಾವಂತದಿAದ ಆಸ್ಪತ್ರೆ ಬಳಿ ಜಮಾಯಿಸಿದ್ದರು.

ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತ ಸ್ಥಳದಲ್ಲಿದ್ದ ಬಸ್‌ಗಳನ್ನು ಪೊಲೀಸರು ತಮ್ಮ ಸುಪರ್ದಿಗೆ ಪಡೆದಿದ್ದಾರೆ. ಬಾಳೆಲೆ ವಿಜಯಲಕ್ಷಿö್ಮ ವಿದ್ಯಾಸಂಸ್ಥೆಯ ಶಿಕ್ಷಕರಾದ ಪಡಿಜ್ಞಾರಂಡ ಪ್ರಭುಕುಮಾರ್ ಶಾಲಾ ಬಸ್ ಚಾಲಕನನ್ನು ತಮ್ಮ ಕಾರಿನಲ್ಲಿ ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ಕರೆತರುವ ಮೂಲಕ ಮಾನವೀಯತೆ ಮೆರೆದರು. -ಹೆಚ್.ಕೆ.ಜಗದೀಶ್