ನಾಪೋಕ್ಲು, ಅ. ೨೬: ಖಾಸಗಿ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ೯ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ನಾಪತ್ತೆಯಾದ ಬಗ್ಗೆ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದ್ದು, ಪೊಲೀಸ್ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ತಾ. ೩೦ ರಂದು ಬೆಳಗ್ಗೆ ೧೦ ಗಂಟೆಯಿAದ ಪೊಲೀಸ್ ಠಾಣೆ ಮುಂಭಾಗದಲ್ಲಿ ವಿವಿಧ ಸಂಘ - ಸಂಸ್ಥೆಗಳ ಹಾಗೂ ಗ್ರಾಮಸ್ಥರು ಒಟ್ಟು ಸೇರಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಮರಂದೋಡ ಗ್ರಾಮದ ಚಂಡಿರ ಸುಂದರ ಮತ್ತು ಮೀನಾಕ್ಷಿ ದಂಪತಿ ಪುತ್ರಿ ನಾಪೋಕ್ಲು ಖಾಸಗಿ ಶಾಲೆಯಲ್ಲಿ ೯ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಬುಧವಾರ ಬೆಳಿಗ್ಗೆಯಿಂದ ನಾಪತ್ತೆಯಾದ ಬಾಲಕಿ ಸಂಜೆಯಾದರೂ ಮನೆಗೆ ಹಿಂತಿರುಗಿಲ್ಲ. ಈ ಬಗ್ಗೆ ಗ್ರಾಮದಲ್ಲಿ ಹುಡುಕಾಟ ನಡೆಸಿದ್ದು ಬಾಲಕಿ ಪತ್ತೆಯಾಗದ ಕಾರಣ ಪೋಷಕರೊಂದಿಗೆ ಗ್ರಾಮಸ್ಥರು ಬುಧವಾರ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದು ಹಾಗೂ ಕೂಡಲೇ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.

ಆದರೆ, ಪೋಷಕರ ಗ್ರಾಮಸ್ಥರ ಮನವಿಗೆ ಇಲಾಖೆ ಸ್ಪಂದಿಸಿಲ್ಲ. ಶಂಕಿತ ವ್ಯಕ್ತಿಗಳ ದೂರವಾಣಿ ಸಂಖ್ಯೆ ಮತ್ತಿತರ ಮಾಹಿತಿಗಳನ್ನು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿರುವ ಗ್ರಾಮಸ್ಥರು ಇಂದು ಪೊಲೀಸ್ ಠಾಣೆ ಎದುರು ಸೇರಿ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಪೋಷಕರಾದ ಚಂಡಿರ ಸುಂದರ ಮಾತನಾಡಿ, ಪುತ್ರಿ ಬುಧವಾರ ಬೆಳಿಗ್ಗೆಯಿಂದ ನಾಪತ್ತೆಯಾಗಿದ್ದು, ಎಲ್ಲಾ ಕಡೆ ಹುಡುಕಾಟ ನಡೆಸಿ ಪತ್ತೆಯಾಗದ ಹಿನ್ನೆಲೆಯಲ್ಲಿ ರಾತ್ರಿ ೯ ಗಂಟೆ ವೇಳೆಗೆ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ದೂರ ದಾಖಲಿಸಿದ್ದೇವೆ. ಠಾಣಾಧಿಕಾರಿ ಮಂಜುನಾಥ್ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮಸ್ಥ ಚಂಡಿರ ಜಗದೀಶ್ ಮಾತನಾಡಿ, ವಿದ್ಯಾರ್ಥಿನಿಯ ಪತ್ತೆಗಾಗಿ ಗ್ರಾಮಸ್ಥರು ಹುಡುಕಾಟ ನಡೆಸಿದ್ದೇವೆ. ಶಂಕಿತ ವ್ಯಕ್ತಿಗಳ ಮೊಬೈಲ್ ನಂಬರ್ ಇನ್ನಿತರ ದಾಖಲೆಗಳನ್ನು ನೀಡಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಶಂಕಿತ ವ್ಯಕ್ತಿಗಳ ತನಿಖೆ ನಡೆಸಿಲ್ಲ. ಆದ ಕಾರಣ ಗ್ರಾಮಸ್ಥರು ಸಂಘ-ಸAಸ್ಥೆಗಳ ನೆರವಿನೊಂದಿಗೆ ತಾ. ೩೦ ರಂದು ಬೆಳಿಗ್ಗೆಯಿಂದ ಪ್ರತಿಭಟನೆ ನಡೆಸುವುದಾಗಿ ಹೇಳಿದರು.

ಈ ಸಂದರ್ಭ ಚಂಡಿರ ಮುದ್ದಪ್ಪ, ಚಂಡಿರ ರ‍್ಯಾಲಿ ಗಣಪತಿ, ಬಾರಿಕೆ ನಂದ, ಚೋಯಮಾಡಂಡ ಮುದ್ದಪ್ಪ, ಚಂಡಿರ ರೋಷನ್, ಚಂಡಿರ ದೇವಯ್ಯ, ಮುಕ್ಕಾಟಿರ ನವೀನ್, ಮುಕ್ಕಾಟಿರ ದಯಾನಂದ, ಚಂಡಿರ ವಿಜಯ, ಮುಕ್ಕಾಟಿರ ದಿಲೀಪ್, ಮಂದ್ರೀರ ಬೆಳ್ಯಪ್ಪ, ಮಂದ್ರೀರ ಸುಂದರಿ, ಮುಕ್ಕಾಟಿರ ರಾಜೇಶ್, ಚಂಡಿರ ತಿಮ್ಮಯ್ಯ, ಚಂಡಿರ ನಂದಕುಮಾರ್, ಮುಕ್ಕಾಟಿರ ದೇವೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.