ಕುಶಾಲನಗರ, ಅ. ೨೬: ಮೈಸೂರು ದಸರಾದಲ್ಲಿ ಪಾಲ್ಗೊಂಡ ದುಬಾರೆ ಶಿಬಿರದ ನಾಲ್ಕು ಮತ್ತು ಹಾರಂಗಿ ಶಿಬಿರದ ಒಂದು ಸೇರಿದಂತೆ ಒಟ್ಟು ಐದು ಆನೆಗಳು ಗುರುವಾರ ಸಂಜೆ ಶಿಬಿರಕ್ಕೆ ಹಿಂತಿರುಗಿದವು.
ದುಬಾರೆ ಆನೆ ಶಿಬಿರದ ಧನಂಜಯ, ಗೋಪಿ, ಕಂಚನ್, ಪ್ರಶಾಂತ್ ಮತ್ತು ಹಾರಂಗಿ ಶಿಬಿರದ ವಿಜಯ ಆನೆಗಳನ್ನು ಲಾರಿ ಮೂಲಕ ಮೈಸೂರಿನಿಂದ ಕುಶಾಲನಗರಕ್ಕೆ ತರಲಾಯಿತು. ಮೈಸೂರಿನ ಅರಮನೆಯಿಂದ ಸಾಂಪ್ರದಾಯಿಕವಾಗಿ ಬೀಳ್ಕೊಟ್ಟ ಆನೆಗಳೊಂದಿಗೆ ಮಾವುತರಾದ ಭಾಸ್ಕರ, ನವೀನ್ ಕುಮಾರ್, ಭೋಜಪ್ಪ, ವಿಜಯ, ಕಾವಾಡಿಗರಾದ ಮಣಿ, ಶಿವು, ಭರತ್, ಮಣಿಕಂಠ ಮತ್ತು ಕುಟುಂಬ ಸದಸ್ಯರು ಇದ್ದರು.
ಮೈಸೂರಿನಿಂದ ಮಾಲ್ದಾರೆ ಮೂಲಕ ದುಬಾರೆಗೆ ಆಗಮಿಸಿದ ಆನೆಗಳನ್ನು ಉಪ ವಲಯ ಅರಣ್ಯ ಅಧಿಕಾರಿ ಕನ್ನಂಡ ರಂಜನ್ ಮತ್ತು ಸಿಬ್ಬಂದಿ ಬರಮಾಡಿಕೊಂಡರು. ಹಾರಂಗಿ ಶಿಬಿರಕ್ಕೆ ಹಿಂತಿರುಗಿದ ವಿಜಯ ಆನೆಯನ್ನು ಉಪ ವಲಯ ಅರಣ್ಯ ಅಧಿಕಾರಿ ಅನಿಲ್ ಡಿಸೋಜ ಮತ್ತು ಸಿಬ್ಬಂದಿಗಳು ಬರಮಾಡಿಕೊಂಡರು. ತಿಂಗಳುಗಳ ಕಾಲ ಮೈಸೂರಿನಲ್ಲಿ ಸಂಭ್ರಮದಲ್ಲಿ ಇದ್ದ ಆನೆಗಳು ಕ್ಷೇಮವಾಗಿವೆ ಎಂದು ಮಾವುತರು ಮಾಹಿತಿ ನೀಡಿದ್ದಾರೆ.