ಮಡಿಕೇರಿ, ಅ. ೨೭ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕೊಡ ಮಾಡುವ ಪ್ರತಿಷ್ಠಿತ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿಯನ್ನು ಕತೆಗಾತಿಯರಾದ ಕಟ್ರತನ ಲಲಿತಾ ಅಯ್ಯಣ್ಣ ಹಾಗೂ ಈರಮಂಡ ಹರಿಣಿ ವಿಜಯ್ ಅವರುಗಳಿಗೆ ಪ್ರದಾನ ಮಾಡಲಾಯಿತು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಕಾಲೇಜು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೊಡಗು ವಿಶ್ವ ವಿದ್ಯಾನಿಲಯದ ಚಿಕ್ಕಅಳುವಾರ ಜ್ಞಾನಕಾವೇರಿ ಕನ್ನಡ ಉಪನ್ಯಾಸಕ ಡಾ. ಜಮೀರ್ ಅಹ್ಮದ್ ಮಾತನಾಡಿ, ಕತೆಗಾರ್ತಿ ಕೊಡಗಿನ ಗೌರಮ್ಮ ಅವರು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ಕೊಡಗಿನ ಗೌರಮ್ಮ ಸ್ವಾತಂತ್ರö್ಯ ಪೂರ್ವದಲ್ಲಿ ಸಣ್ಣ ಕತೆಗಳನ್ನು ಬರೆಯುವ ಮೂಲಕ ಮಹಿಳಾ ಸಬಲೀಕರಣ, ಸಮಾಜದಲ್ಲಿ ಸಮಾನತೆ ಹೀಗೆ ಹಲವು ವಿಚಾರಗಳ ಕುರಿತು ಕನ್ನಡ ಸಾಹಿತ್ಯದಲ್ಲಿ ಬೆಳಕು ಚೆಲ್ಲಿದ್ದಾರೆ ಎಂದು ಹೇಳಿದರು.
ಬದುಕಿದ್ದ ೨೭ ವರ್ಷದಲ್ಲಿ ಸಾಮಾಜಿಕ ಕ್ರಾಂತಿಯನ್ನೇ ಉಂಟು ಮಾಡಿದ್ದರು. ಮಹಾತ್ಮ ಗಾಂಧೀಜಿಯವರು ಭೇಟಿ ನೀಡಿದ ಸಂದರ್ಭದಲ್ಲಿ ಬಡ ವರ್ಗದವರು ಮುಖ್ಯವಾಹಿನಿಗೆ ಬರುವಂತಾಗಲು ತಮ್ಮಲ್ಲಿದ್ದ ಒಡವೆಗಳನ್ನು ಮಹಾತ್ಮ ಗಾಂಧೀಜಿಯವರಿಗೆ ನೀಡಿದ್ದರು.
ಜೀವನದಲ್ಲಿ ಸರಳ ಸಜ್ಜನ ಬದುಕು ನಡೆಸಿದ್ದ ಗೌರಮ್ಮ ಅವರು ಸಂವೇದನಾಶೀಲ ಹಾಗೂ ಕ್ರೀಯಾಶೀಲ ಸಾಹಿತ್ಯ ಚಟುವಟಿಕೆ ಯಲ್ಲಿ ತೊಡಗಿಸಿಕೊಂಡಿದ್ದರು. ಸಮಾಜಮುಖಿ ಕಾರ್ಯಗಳಿಗಾಗಿ ಸದಾ ಮುಂಚೂಣಿಯಲ್ಲಿದ್ದರು.
ಗೌರಮ್ಮನವರ ಸಣ್ಣ ಕತೆಗಳು ಪ್ರಸ್ತುತವಾಗಿದ್ದು ಸಮಾಜಮುಖಿಯಾಗಿ ಬೆಳಕು ಚೆಲ್ಲುತ್ತದೆ; ವೈಚಾರಿಕ, ವೈಜ್ಞಾನಿಕತೆ, ಜೀವನ ಮೌಲ್ಯವನ್ನು ಗೌರಮ್ಮನವರ ಸಾಹಿತ್ಯದಲ್ಲಿ ಕಾಣಬಹುದಾಗಿದೆ. ಕನ್ನಡ ಸಾರಸ್ವತ ಲೋಕಕ್ಕೆ ಗೌರಮ್ಮನವರ ಕೊಡುಗೆ ಅಪಾರ ಎಂದು ವಿವರಿಸಿದರು.
ಪ್ರಶಸ್ತಿ ಪ್ರದಾನ ಮಾಡಿದ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಗೌರಮ್ಮ ದತ್ತಿನಿಧಿ ಪ್ರಶಸ್ತಿಯಿಂದ ಕೊಡಗು ಜಿಲ್ಲೆಯಲ್ಲಿ ಹಲವು ಮಹಿಳಾ ಬರಹಗಾರರನ್ನು ಗುರುತಿಸು ವಂತಾಗಿದೆ.
ಸಾಹಿತ್ಯ ಲೋಕದಲ್ಲಿ ಗೌರಮ್ಮ ದತ್ತಿನಿಧಿ ಪ್ರಶಸ್ತಿ ರಾಜ್ಯಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ, ಗೌರಮ್ಮ ಅವರು ಬರೆದಿರುವ ೨೧ ಸಣ್ಣ ಕತೆಗಳು ಸಾರ್ವಕಾಲಿಕವಾಗಿವೆ. ಗೌರಮ್ಮ ದತ್ತಿನಿಧಿ ಕಥಾ ಸ್ಪರ್ಧೆಯಿಂದ ವಿದ್ಯಾರ್ಥಿಗಳಿಗೆ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪಿ.ಕೆ. ವೆಂಕಟೇಶ್ ಪ್ರಸನ್ನ ಮಾತನಾಡಿ, ಹೃದಯದ ಬದುಕನ್ನು ಹತ್ತಿರಕ್ಕೆ ಬೆಸೆಯುವುದು ಸಾಹಿತ್ಯವಾಗಿದೆ. ಜಾತಿ, ಧರ್ಮವನ್ನು ಮೀರುವಂತದ್ದು ಸಾಹಿತ್ಯ. ಬದುಕನ್ನು ಅರ್ಥೈಸಿಕೊಳ್ಳಲು ಸಾಹಿತ್ಯ ಸಹಕಾರಿ. ಗೌರಮ್ಮ ಅವರು ಮಹಿಳಾ ಕಥೆ ಗಾರ್ತಿಯಾಗಿ ಸಮಾಜದಲ್ಲಿ ಜಾಗೃತಿ ಮೂಡಿಸಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ಗೌರವ ಕಾರ್ಯದರ್ಶಿ
(ಮೊದಲ ಪುಟದಿಂದ) ಎಸ್.ಐ. ಮುನೀರ್ ಅಹ್ಮದ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರಿಗಾಗಿ ಇರುವ ಏಕೈಕ ಪ್ರಾತಿನಿಧಿಕ ಸಂಸ್ಥೆಯಾಗಿದ್ದು, ಕನ್ನಡ, ಕನ್ನಡಿಗರ ಅಸ್ತಿತ್ವ, ಆಸ್ತೆ, ಅಕ್ಕರೆ, ಅಭಿಮಾನ ಉಳಿಸಿ ಬೆಳೆಸುವ ಪ್ರಯತ್ನ ಮಾಡುತ್ತಿದೆ. ಇದು ಸಾಹಿತ್ಯ ಸೇವೆಗಳಿಂದ ಸಾಧ್ಯ. ವಿವಿಧ ತೆರನಾದ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿ ಅನುಭವಗಳನ್ನು ಹೊರಚೆಲ್ಲುವ ಮೂಲಕ ಈ ಕಾರ್ಯ ಆಗಬೇಕಿದೆ ಎಂದರು. ವಿದ್ಯಾರ್ಥಿಗಳೇ ಸಾಹಿತಿಗಳು, ದಾರ್ಶನಿಕ ಬಗ್ಗೆ ಅರಿವು ಮೂಡಿಸಿ, ಅವರುಗಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸುವ ಉದ್ದೇಶ ದೊಂದಿಗೆ ಶಾಲೆ - ಕಾಲೇಜುಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ಕೊಳ್ಳಬೇಕೆಂದು ಕರೆ ನೀಡಿದರು.
ಪ್ರಶಸ್ತಿ ವಿಜೇತ ಈರಮಂಡ ಹರಿಣಿ ಮಾತನಾಡಿ, ತಾನು ಹುಟ್ಟಿ ಬೆಳೆದಿದ್ದು, ಉತ್ತರ ಭಾರತದಲ್ಲಿ ಓದಿದ್ದು ಆಂಗ್ಲ ಮಾಧ್ಯಮದಲ್ಲಿ ಹಾಗಾಗಿ ಕನ್ನಡ ಬರುತ್ತಿರಲಿಲ್ಲ. ಇಂಗ್ಲಿಷ್, ಹಿಂದಿಯಲ್ಲಿ ಸಾಹಿತ್ಯ ರಚನೆ ಮಾಡುತಿದ್ದೆ. ಮದುವೆಯಾಗಿ ಕೊಡಗು ಜಿಲ್ಲೆಗೆ ಬಂದ ಬಳಿಕ ಶಕ್ತಿ ಪತ್ರಿಕೆಯನ್ನು ಓದಿ ಕನ್ನಡ ಕಲಿತು ನಂತರದಲ್ಲಿ ಕನ್ನಡದಲ್ಲಿ ಸಾಹಿತ್ಯ ರಚನೆ ಮಾಡಲು ಆರಂಭ ಮಾಡಿದ್ದು, ಇದೀಗ ಪ್ರಶಸ್ತಿ ಸಿಕ್ಕಿರುವುದು ಹೆಮ್ಮೆ ಎನಿಸಿದೆ. ಈ ಸಾಧನೆಗೆ ಪತಿ, ಕುಟುಂಬದವರು, ಶಕ್ತಿ ಪತ್ರಿಕಾ ಬಳಗದವರು, ಸಾಹಿತ್ಯಾಭಿಮಾನಿಗಳು ಕಾರಣ ಎಂದು ಹೇಳಿದರು.
ಕಟ್ರತನ ಲಲಿತ ಅಯ್ಯಣ್ಣ ಅವರು ಮಾತನಾಡಿ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಕುಟುಂಬದವರ ಪ್ರೇರಣೆ ಹೆಚ್ಚಿನದ್ದಾಗಿದೆ. ಲೇಖನಗಳನ್ನು ಪ್ರಕಟಿಸುವ ಮೂಲಕ ಶಕ್ತಿ ಪತ್ರಿಕೆ ಪ್ರೋತ್ಸಾಹ ನೀಡಿದೆ. ಎಲ್ಲರ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ರೇವತಿ ರಮೇಶ್, ಗೌರವ ಕೋಶಾಧಿಕಾರಿ ಎಸ್.ಎ. ಸಂಪತ್ ಕುಮಾರ್, ಕನ್ನಡ ಸಾಹಿತ್ಯ ಪರಿಷತ್ತು ಮಡಿಕೇರಿ ತಾಲೂಕು ಘಟಕದ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ಸೋಮವಾರಪೇಟೆ ಅಧ್ಯಕ್ಷ ಎಸ್.ಡಿ. ವಿಜೇತ್, ಗೌರಮ್ಮ ಪ್ರಶಸ್ತಿ ವಿಜೇತ ಸಾಹಿತಿಗಳಾದ ಬೈತಡ್ಕ ಜಾನಕಿ ಬೆಳ್ಯಪ್ಪ, ಸ್ಮಿತಾ ಅಮೃತರಾಜ್, ಸಂಗೀತ ರವಿರಾಜ್, ಡಾ. ಕೋರನ ಸರಸ್ವತಿ, ಡಾ. ಕಾವೇರಿ ಪ್ರಕಾಶ್, ಸುನಿತಾ ಲೋಕೇಶ್, ಸಹನ ಕಾಂತಬೈಲು, ಕ.ಸಾ.ಪ. ಮಾಜಿ ಅಧ್ಯಕ್ಷರುಗಳಾದ ಕೆ.ಟಿ. ಬೇಬಿ ಮ್ಯಾಥ್ಯೂ, ನವೀನ್ ಅಂಬೆಕಲ್ಲು, ಕುಡೆಕಲ್ ಸಂತೋಷ್ ಇತರರು ಇದ್ದರು.
ಸಾಹಿತ್ಯ ಪರಿಷತ್ತಿನ ನಿರ್ದೇಶಕಿ ಕೆ.ಜಿ. ರಮ್ಯಾ, ಪ್ರೇಮ ರಾಘವಯ್ಯ ತಂಡದವರು ನಾಡಗೀತೆ ಹಾಡಿದರು.