ನಾಪೋಕ್ಲು, ಅ. ೨೭: ಕ್ರೀಡಾಕೂಟಗಳನ್ನು ಆಯೋಜಿಸುವು ದರಿಂದ ಗ್ರಾಮದಲ್ಲಿ ಪ್ರೀತಿ ವಿಶ್ವಾಸ ಸಹೋದರತೆ ಬೆಳೆಯಲು ಸಹಕಾರಿಯಾಗಬಲ್ಲದು ಎಂದು ಮಾಜಿ ಸೈನಿಕ ಸಂಘದ ಅಧ್ಯಕ್ಷ ಚಂಡಿರ ಕೆ. ಬಸಪ್ಪ ಹೇಳಿದರು. ಇಲ್ಲಿಗೆ ಸಮೀಪದ ಮರಂದೋಡ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಮರಂದೋಡ ಗ್ರಾಮಸ್ಥರ ೪೦ನೇ ವರ್ಷದ ವಾರ್ಷಿಕ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಮರಂದೋಡ ಗ್ರಾಮದಲ್ಲಿ ಈ ಕ್ರೀಡಾಕೂಟವು ೪೦ ವರ್ಷಗಳಿಂದ ಸತತವಾಗಿ ನಡೆದುಕೊಂಡು ಬರುತ್ತಿರುವುದು ಹೆಮ್ಮೆಯ ವಿಷಯ ಎಂದ ಬಸಪ್ಪ ಅವರು ಇನ್ನು ಮುಂದೆಯೂ ಇದು ನಿರಂತರವಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ಮತ್ತೋರ್ವ ಅತಿಥಿ ಮಾಜಿ ಸೈನಿಕರು ಹಾಗೂ ಎಸ್.ಬಿ.ಐ. ಉದ್ಯೋಗಿ ಮುಕ್ಕಾಟಿ ದೇವಯ್ಯ ಗಿರೀಶ್ ಮಾತನಾಡಿ, ಇಂತಹ ಗ್ರಾಮೀಣ ಮಟ್ಟದ ಕ್ರೀಡಾಕೂಟದಿಂದ ಉತ್ತಮ ಕ್ರೀಡಾಪಟುಗಳನ್ನು ಹೊರ ತರಲು ಸಾಧ್ಯ. ಈ ನಿಟ್ಟಿನಲ್ಲಿ ಗ್ರಾಮಸ್ಥರ ಸಹಕಾರ ಮತ್ತು ಪ್ರೋತ್ಸಾಹ ಮುಖ್ಯವಾಗಿದೆ ಎಂದರು.
ನಿವೃತ್ತ ಸಿ.ಆರ್.ಪಿ.ಎಫ್. ಪುಷ್ಪಾವತಿ ಮಾತನಾಡಿ ಹಿಂದೆ ಇಂತಹ ಕ್ರೀಡಾಕೂಟಗಳು ನಡೆಯುತ್ತಿರಲಿಲ್ಲ. ಈಗ ಗ್ರಾಮೀಣ ಜನರನ್ನು ಒಗ್ಗೂಡಿಸುವ ಕೆಲಸವನ್ನು ಸಂಘ-ಸAಸ್ಥೆಗಳು ಮಾಡುತ್ತಿವೆ. ಇದು ಗ್ರಾಮದ ಶ್ರೇಯೋಭಿವೃದ್ಧಿಗೆ ಆಶಾದಾಯಕ ಬೆಳವಣಿಗೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚೋಯಮಾಡಂಡ ಹರೀಶ್ ಮೊಣ್ಣಪ್ಪ ಮಾತನಾಡಿ ಗ್ರಾಮೀಣ ಭಾಗದಲ್ಲಿ ಇಂತಹ ಕ್ರೀಡಾಕೂಟ ನಡೆಯಲು ಎಲ್ಲರ ಸಹಕಾರ ಅಗತ್ಯ ಎಂದರು. ಈ ಸಂದರ್ಭ ಕಕ್ಕಬ್ಬೆ ಗ್ರಾಮ ಪಂಚಾಯಿತಿಯ ಮರಂದೋಡ ಸದಸ್ಯೆ ಕೆ. ಲೀಲಾವತಿ, ಕಕ್ಕಬ್ಬೆ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ನಿಡುಮಂಡ ಹರೀಶ್ ಪೂವಯ್ಯ ಪಾಲ್ಗೊಂಡಿದ್ದರು. ಕ್ರೀಡಾಕೂಟದಲ್ಲಿ ಶಾಲಾ ಮಕ್ಕಳಿಗೆ, ಯುವಕರಿಗೆ, ಹಿರಿಯರಿಗೆ ವಿವಿಧ ಸ್ಪರ್ಧೆಗಳು ನಡೆದವು.
ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ೧,೫೦೦ ಮೀಟರ್ ಓಟ, ಮಹನೀಯರಿಗೆ ೧,೫೦೦ ಮೀಟರ್ ಓಟ ಗೋಣಿಚೀಲ ಓಟ, ದಂಪತಿಗಳಿಗೆ ಅಡಿಕೆ ಹಾಳೆ ಎಳೆಯುವ ಸ್ಪರ್ಧೆ, ಭಾರದ ಗುಂಡು ಎಸೆತ, ಹಗ್ಗ ಜಗ್ಗಾಟ ಸ್ಪರ್ಧೆಗಳು ನಡೆದವು.
ಬಳಿಕ ಕ್ರೀಡಾಕೂಟಕ್ಕೆ ಹಿರಿಯರಾದ ಚೋಯಮಾಡಂಡ ಅಚ್ಚಪ್ಪ, ಕೆ.ಎಂ. ಚಾಮಿ ದೀಪ ಬೆಳಗಿಸಿ ಚಾಲನೆ ನೀಡಿದರು. ೧೨ ಬೋರ್ ಸ್ಪರ್ಧೆಯಲ್ಲಿ ಚೋಯಮಾಡಂಡ ಹಂಪಿತ್ ಪ್ರಥಮ ಸ್ಥಾನವನ್ನು ಮಾರ್ಚಂಡ ಸುರೇಶ್ ದ್ವಿತೀಯ ಸ್ಥಾನವನ್ನು ಗಳಿಸಿದರು. ೦.೨೨ ವಿಭಾಗದಲ್ಲಿ ಮೇರಿಯಂಡ ಮುತ್ತಪ್ಪ .ಎಂ. ಪ್ರಥಮ ಸ್ಥಾನವನ್ನು ಮಾರ್ಚಂಡ ಶಿವಾನಿ ದ್ವಿತೀಯ ಸ್ಥಾನವನ್ನು ಗಳಿಸಿದರು.
ಕಾರ್ಯಕ್ರಮದಲ್ಲಿ ಕ್ರೀಡಾ ಸಮಿತಿಯ ಕಾರ್ಯದರ್ಶಿ ಮುಕ್ಕಾಟಿ ಅಜಿತ್ ಕುಮಾರ್, ಖಜಾಂಚಿ ಚಂಡಿರ ರವಿಕುಮಾರ್, ಸದಸ್ಯರಾದ ಮಂದಣ್ಣ, ಪಳಂಗಪ್ಪ, ಚಂಗಪ್ಪ, ರೋಷನ್, ಅಖಿಲ್, ಮುತ್ತಪ್ಪ, ಮನೋಜ್, ನವೀನ್ ಇನ್ನಿತರರು ಪಾಲ್ಗೊಂಡಿದ್ದರು. ವಿವಿಧ ಕ್ರೀಡಾಕೂಟಗಳ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು ಜನಮನ ರಂಜಿಸಿತು.