ಕುಶಾಲನಗರ, ಅ. ೨೭: ರಸ್ತೆ ಬದಿಯಲ್ಲಿ ನೆರಳಿಗಾಗಿ ನೆಟ್ಟು ಬೆಳೆಸಿದ್ದ ಬೃಹತ್ ಗಾತ್ರದ ಮರ ಒಂದರ ಬುಡಕ್ಕೆ ಬೆಂಕಿ ಹಾಕಿ ಹಾನಿಗೊಳಿಸಿದ ಪ್ರಕರಣ ಕುಶಾಲನಗರ ಸಮೀಪದ ಕೂಡ್ಲೂರು ಕೈಗಾರಿಕಾ ಬಡಾವಣೆಯಲ್ಲಿ ಕಂಡು ಬಂದಿದೆ.
ಕೂಡ್ಲೂರು ಕೈಗಾರಿಕಾ ಬಡಾವಣೆಯ ಮುಖ್ಯ ರಸ್ತೆಯ ಗ್ಯಾರೇಜು ಒಂದರ ಮುಂಭಾಗ ರಸ್ತೆ ಬದಿಯಲ್ಲಿ ಭಾರಿ ಗಾತ್ರದ ಮರವೊಂದನ್ನು ನೆಟ್ಟು ಬೆಳೆಸಿದ್ದು, ಆಯುಧ ಪೂಜೆ ಸಂದರ್ಭ ಅಂಗಡಿ ಯಿಂದ ತೆರವು ಗೊಳಿಸಿದ ತ್ಯಾಜ್ಯ, ಕಸ ಕಡ್ಡಿಗಳನ್ನು ಮರದ ಬುಡಕ್ಕೆ ಹಾಕಿ ಬೆಂಕಿ ಹಾಕಿರೋದು ಗೋಚರಿಸಿದೆ. ಮರದ ಬುಡ ಉರಿಯುತ್ತಿರುವುದನ್ನು ಕಾರ್ಯನಿಮಿತ್ತ ತೆರಳುತ್ತಿದ್ದ ಸ್ಥಳೀಯ ಪತ್ರಕರ್ತ ಮಹಮ್ಮದ್ ಮುಸ್ತಾಫ ಕಂಡು ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ.
ಅಷ್ಟೊತ್ತಿಗಾಗಲೇ ಮರದ ಬುಡ ಬಹುತೇಕ ಸುಟ್ಟು ಹೋಗಿದ್ದು ಬಹುತೇಕ ಹಾನಿ ಉಂಟಾಗಿದೆ. ಮರದ ಬುಡಕ್ಕೆ ಬೆಂಕಿ ಹಾಕಿ ಹಾನಿ ಉಂಟು ಮಾಡಿರುವ ದುಷ್ಕರ್ಮಿಗಳ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ.
- ಚಂದ್ರಮೋಹನ್