ಸೋಮವಾರಪೇಟೆ, ಅ. ೨೭: ತಾಲೂಕಿನ ಕಿರಗಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಿಗೇರಿ ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ೨ ಕುಟುಂಬಗಳು ಕಳೆದ ೪೦ ವರ್ಷಗಳಿಂದ ಮನೆಗೆ ತೆರಳುವ ರಸ್ತೆಗಾಗಿ ಕಾದಿದ್ದು, ಈವರೆಗೆ ಈ ಕುಟುಂಬಗಳಿಗೆ ರಸ್ತೆ ಭಾಗ್ಯ ದೊರಕಿಲ್ಲ.
ಬಿಳಿಗೇರಿ ಗ್ರಾಮದ ಪಿ.ಕೆ. ವಸಂತ ಹಾಗೂ ನಾರಾಯಣ ಅವರುಗಳು ಸ.ನಂ. ೨೨೪/೬ಎ ರಲ್ಲಿ ಕಳೆದ ೪೦ ವರ್ಷಗಳ ಹಿಂದೆಯೇ ಮನೆ ನಿರ್ಮಿಸಿಕೊಂಡಿದ್ದು, ಇವರಿಗೆ ಗ್ರಾ.ಪಂ.ನಿAದ ನೀರು, ಸೆಸ್ಕ್ನಿಂದ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ. ಆದರೆ ಮನೆಗೆ ತೆರಳಲು ಮುಖ್ಯವಾಗಿ ಬೇಕಿರುವ ರಸ್ತೆಯನ್ನು ಒದಗಿಸಿಲ್ಲ.
ಪರಿಣಾಮ ಮನೆಗೆ ಯಾವುದೇ ವಸ್ತುಗಳನ್ನು ಸಾಗಿಸಬೇಕಿದ್ದರೂ ಓಣಿಯಂತಿರುವ ದಾರಿಯಲ್ಲಿ ತಲೆ ಮೇಲೆ ಹೊತ್ತುಕೊಂಡು ಸಾಗಿಸಬೇಕಾದ ಪರಿಸ್ಥಿತಿಯಿದೆ. ವಸಂತ ಅವರ ಮನೆಯಲ್ಲಿ ನಾಲ್ವರು, ನಾರಾಯಣ ಅವರ ಮನೆಯಲ್ಲಿ ೭ ಮಂದಿ ವಾಸವಿದ್ದು, ಮಕ್ಕಳು ಶಾಲಾ ಕಾಲೇಜಿಗೆ ತೆರಳಲು ಸಮಸ್ಯೆಯಾಗಿದೆ.
ಈ ಎರಡು ಮನೆಗಳಿಗೆ ತೆರಳುವ ದಾರಿಯಲ್ಲಿ ಸರ್ಕಾರದ ಪೈಸಾರಿ ಜಾಗವಿದ್ದು, ಇದನ್ನು ಗ್ರಾಮದ ಈರ್ವರು ಒತ್ತುವರಿ ಮಾಡಿಕೊಂಡು ತೋಟ ಮಾಡಿದ್ದಾರೆ. ಈ ಹಿಂದೆಯೂ ದಾರಿಯ ಬಗ್ಗೆ ಮಾತುಕತೆ ನಡೆದ ಸಂದರ್ಭ ಒತ್ತುವರಿದಾರರು ಪೈಸಾರಿ ಜಾಗವನ್ನು ದಾರಿಗಾಗಿ ಬಿಟ್ಟು ಕೊಡುವ ಬಗ್ಗೆ ಭರವಸೆ ನೀಡಿದ್ದರು. ಆದರೆ ಈವರೆಗೆ ಸ್ಥಳವನ್ನು ಬಿಟ್ಟುಕೊಟ್ಟಿಲ್ಲ. ಇದರಿಂದಾಗಿ ಪ್ರತಿ ದಿನ ನಾವುಗಳು ಓಣಿಯಂತಿರುವ ದಾರಿಯಲ್ಲಿ ನಡೆದುಕೊಂಡೇ ಮುಖ್ಯರಸ್ತೆಗೆ ಬರಬೇಕಿದೆ ಎಂದು ಪಿ.ಕೆ. ವಸಂತ ಅವರು ‘ಶಕ್ತಿ’ಯೊಂದಿಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ರಸ್ತೆಗಾಗಿ ಜಾಗವನ್ನು ಬಿಡಿಸಿಕೊಡುವಂತೆ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ತಾಲೂಕು ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ ಮೇರೆ ಸ್ಥಳ ಪರಿಶೀಲನೆಗೆ ಕಂದಾಯ ಪರೀಕ್ಷಕರು ಆಗಮಿಸಬೇಕಿದ್ದರೂ ಅಧಿಕಾರಿ ಈವರೆಗೆ ಬಂದಿಲ್ಲ. ಕಂದಾಯ ಇಲಾಖೆಯ ಗ್ರಾಮ ಸಹಾಯಕರೋರ್ವರನ್ನು ಕಳುಹಿಸಿ, ಭಾವಚಿತ್ರ ತೆಗೆದುಕೊಂಡು ಹೋಗಿದ್ದನ್ನು ಹೊರತುಪಡಿಸಿದರೆ ಈವರೆಗೆ ರಸ್ತೆಗೆ ಜಾಗ ಬಿಡಿಸಿಕೊಡುವ ಯಾವುದೇ ಪ್ರಯತ್ನವನ್ನೂ ಕಂದಾಯ ಇಲಾಖೆಯ ಕಂದಾಯ ಪರಿವೀಕ್ಷಕರು ಮಾಡಿಲ್ಲ ಎಂದು ವಸಂತ ಅವರು ದೂರಿದ್ದಾರೆ.
ಈ ಬಗ್ಗೆ ತಹಶೀಲ್ದಾರರು ಗಮನ ಹರಿಸಿ ಕಂದಾಯ ಹಾಗೂ ಸರ್ವೆ ಇಲಾಖೆಗೆ ಸೂಚನೆ ನೀಡಿ ತಕ್ಷಣ ರಸ್ತೆ ಜಾಗಕ್ಕೆ ಸಂಬAಧಿಸಿದAತೆ ಪೈಸಾರಿ ಜಾಗದ ಸರ್ವೆ ನಡೆಸಬೇಕೆಂದು ವಸಂತ ಹಾಗೂ ನಾರಾಯಣ ಅವರುಗಳು ಮನವಿ ಮಾಡಿದ್ದಾರೆ.