ಕುಶಾಲನಗರ, ಅ. ೨೮: ಕಾವೇರಿ ನೀರಾವರಿ ನಿಗಮದ ವತಿಯಿಂದ ರೂ. ೧೦ ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ಗುಮ್ಮನಕೊಲ್ಲಿ-ಹಾರಂಗಿ ಸಂಪರ್ಕ ಕಲ್ಪಿಸುವ ಕಾಂಕ್ರೀಟ್ ರಸ್ತೆ ಕಾಮಗಾರಿಯನ್ನು ಆದಷ್ಟು ಬೇಗನೆ ಪೂರ್ಣಗೊಳಿಸ ಲಾಗುವುದು ಎಂದು ಶಾಸಕ ಡಾ. ಮಂಥರ್ ಗೌಡ ತಿಳಿಸಿದ್ದಾರೆ.
ಕೆಲವು ಅಡೆತಡೆಗಳಿಂದ ನೆನೆಗುದಿಗೆ ಬಿದ್ದಿದ್ದ ಕಾಮಗಾರಿಯನ್ನು ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಶಾಸಕರು ಮಾತನಾಡಿ, ಅರ್ಧಕ್ಕೆ ನಿಂತಿರುವ ರಸ್ತೆ ಕಾಮಗಾರಿಯಿಂದ ನಾಗರಿಕರಿಗೆ ಆಗುತ್ತಿರುವ ಅನಾನುಕೂಲತೆ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಪರಿಶೀಲಿಸಲಾಗಿದೆ. ರಸ್ತೆಯ ಅಭಿವೃದ್ಧಿಗೆ ಇರುವ ತೊಡಕುಗಳ ಬಗ್ಗೆ ಅಧಿಕಾರಿಗಳೊಂದಿಗೆ ಮಾಹಿತಿ ಸಂಗ್ರಹಿಸಿದ್ದು, ಸದ್ಯದಲ್ಲೇ ರಸ್ತೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದರು.
ರಸ್ತೆ ಬದಿಯಲ್ಲಿರುವ ಮರ ಹಾಗೂ ವಿದ್ಯುತ್ ಕಂಬಗಳಿAದ ರಸ್ತೆ ಕಾಮಗಾರಿಗೆ ಅಡಚಣೆ ಉಂಟಾಗಿತ್ತು. ರಸ್ತೆ ಅಭಿವೃದ್ಧಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ನಿಗಮದ ಅಧಿಕಾರಿ ಮತ್ತು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ನೀರಾವರಿ ನಿಗಮ, ಚೆಸ್ಕಾಂ, ಅರಣ್ಯ ಇಲಾಖೆ ಅಧಿಕಾರಿ ಗಳೊಂದಿಗೆ ಸ್ಥಳ ಪರಿಶೀಲಿಸಿ ಚರ್ಚಿಸಿ ಮರಗಳ ತೆರವು, ವಿದ್ಯುತ್ ಕಂಬಗಳ ಸ್ಥಳಾಂತರಕ್ಕೆ ಅಗತ್ಯ ಕ್ರಮಕೈಗೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ವಲಯ ಅರಣ್ಯ ಅಧಿಕಾರಿ ರತನ್ ಕುಮಾರ್, ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ದೇವೇಗೌಡ, ಸಹಾಯಕ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ, ಚೆಸ್ಕಾಂನ ಸಹಾಯಕ ಅಭಿಯಂತರ ವಿನಯ್, ಡಿ.ಆರ್.ಎಫ್.ಒ.ಅನಿಲ್ ಡಿಸೋಜ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್, ಜಿಪಂ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ಪುರಸಭೆ ಸದಸ್ಯ ಎಂ.ಕೆ. ದಿನೇಶ್, ಕೂಡುಮಂಗಳೂರು ಗ್ರಾ.ಪಂ. ಸದಸ್ಯರಾದ ಗಿರೀಶ್, ಶಂಶುದ್ದಿನ್, ಫಿಲೋಮಿನಾ, ಗುತ್ತಿಗೆದಾರ ಕಿರಣ್ ಮತ್ತಿತರರು ಸ್ಥಳದಲ್ಲಿದ್ದರು.
ಹಾರಂಗಿ ಗುಮ್ಮನಕೊಲ್ಲಿ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿ ಕಾಮಗಾರಿ ಕಳೆದ ಹಲವು ತಿಂಗಳಿAದ ನೆನೆಗುದಿಗೆ ಬಿದ್ದಿದ್ದು ಚಿಕ್ಕತ್ತೂರು ಗ್ರಾಮ ಬಳಿ ಅಲ್ಲಿನ ನಿವಾಸಿಯೊಬ್ಬರು ನ್ಯಾಯಾಲಯದ ಮೊರೆ ಹೋಗಿರುವುದು ರಸ್ತೆ ಕಾಮಗಾರಿ ನಿಧಾನ ಗತಿಯಾಗಿ ಸಾಗಲು ಕಾರಣ ಎಂದು ತಿಳಿದು ಬಂದಿದೆ.
ಚಿಕ್ಕತ್ತೂರು ಗ್ರಾಮದ ನಿವಾಸಿ ಸಿ.ವಿ. ನಾಗೇಶ್ ಎಂಬವರು ತನ್ನ ಸ್ವಾಧೀನಕ್ಕೆ ಒಳಪಟ್ಟ ಜಾಗದಲ್ಲಿ ರಸ್ತೆ ಹಾದು ಹೋಗುತ್ತಿದ್ದು ಈ ಬಗ್ಗೆ ನ್ಯಾಯಾಲಯದಲ್ಲಿ ತಕರಾರು ಅರ್ಜಿ ಸಲ್ಲಿಸಲಾಗಿದೆ. ಹಾರಂಗಿ- ಗುಮ್ಮನ ಕೊಲ್ಲಿ ರಸ್ತೆಯ ಮೂಲ ರಸ್ತೆಯನ್ನು ಬಿಟ್ಟು ತನಗೆ ಸೇರಿದ ಜಾಗದಲ್ಲಿ ರಸ್ತೆ ಹಾದುಹೋಗಿದೆ. ಈ ಬಗ್ಗೆ ನ್ಯಾಯಾಲಯದಲ್ಲಿ ದೂರು ಸಲ್ಲಿಸಿರುವದಾಗಿ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.