ಕುಶಾಲನಗರ, ಅ. ೨೮: ಕುಶಾಲನಗರದಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ವೇಳೆ ಆನೆಕಾಡು ಮೀಸಲು ಅರಣ್ಯದ ಬಳಿ ಹೆದ್ದಾರಿಯಲ್ಲಿ ಕಾಡಾನೆಗಳ ಹಿಂಡು ಕಾರೊಂದಕ್ಕೆ ಶುಕ್ರವಾರ ರಾತ್ರಿ ದಾಳಿ ಮಾಡಿದ ಘಟನೆ ನಡೆದಿದೆ.
ಗುಡ್ಡೆಹೊಸೂರು ಗ್ರಾಮದ ಬಸವನಹಳ್ಳಿ ಸಮೀಪ ಅತ್ತೂರು ಅರಣ್ಯ ಅಧಿಕಾರಿಗಳ ವಸತಿಗೃಹದ ಬಳಿ ಈ ಘಟನೆ ನಡೆದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಚಾಲಕ ಸೇರಿದಂತೆ ಇಬ್ಬರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.
ಪೋಲೋ ಕಾರಿನಲ್ಲಿ (ಕೆಎ೦೩-ಎಂವಿ೪೮೪೩) ಬೈಲುಕೊಪ್ಪೆಯ ಉದ್ಯಮಿ ಸಿದ್ದಾರ್ಥ ತನ್ನ ಟಿಬೆಟಿಯನ್ ಸ್ನೇಹಿತ ನಮ್ಗೇಲ್ ಎಂಬಾತನೊAದಿಗೆ ಮಡಿಕೇರಿ ಕಡೆಗೆ ರಾತ್ರಿ ಅಂದಾಜು ೧೦ ಗಂಟೆಗೆ ತೆರಳುತ್ತಿದ್ದ ಸಂದರ್ಭ ಕಾಡಾನೆಗಳ ಹಿಂಡು ದಾಳಿ ನಡೆಸಿದೆ.
ಹೆದ್ದಾರಿಯಲ್ಲಿ ಮರಿಯಾನೆ ಜೊತೆಗೆ ಸುಮಾರು ೬ ರಿಂದ ೭ ಆನೆಗಳು ರಸ್ತೆ ದಾಟುತ್ತಿದ್ದವು. ಈ ಸಂದರ್ಭ ಕಾರು ನಿಲ್ಲಿಸಿದ್ದು, ಹಿಂಡಿನಿAದ ಬೇರ್ಪಟ್ಟ ಒಂದು ಆನೆ ಕಾರಿನ ಮೇಲೆ ಎರಗಿದೆ. ಈ ವೇಳೆ ಕಾರಿನಲ್ಲಿದ್ದ ಇಬ್ಬರು ಸ್ಥಳದಿಂದ ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ. ನಂತರ ಕಾಡಾನೆಗಳ ಹಿಂಡು ಅರಣ್ಯದತ್ತ ಸಾಗಿವೆ. ಮಾಹಿತಿ ತಿಳಿದ ಅರಣ್ಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಕುಶಾಲನಗರ ಅರಣ್ಯ ವಲಯ ಅಧಿಕಾರಿ ರತನ್ ಕುಮಾರ್, ಉಪ ವಲಯ ಅರಣ್ಯ ಅಧಿಕಾರಿಗಳಾದ ದೇವಯ್ಯ, ಅನಿಲ್ ಡಿಸೋಜಾ, ರಂಜನ್ ಮತ್ತು ಆರ್ಆರ್ಟಿ ತಂಡದ ಸದಸ್ಯರು ಹೆದ್ದಾರಿಯ ವಾಹನ ಸಂಚಾರ ಸುಗಮ ಮಾಡುವುದರೊಂದಿಗೆ ಮರೆಯಾಗಿದ್ದ ಆನೆಯನ್ನು ಪತ್ತೆಹಚ್ಚಿ ಮೀಸಲು ಅರಣ್ಯಕ್ಕೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಆನೆ ದಾಳಿಯಿಂದ ಕಾರು ಬಹುತೇಕ ನಜ್ಜುಗುಜ್ಜಾಗಿದ್ದು ಕಾರಿನಲ್ಲಿದ್ದ ಪ್ರಯಾಣಿಕರನ್ನು ಮನೆಗೆ ತಲುಪಿಸಲು ಅರಣ್ಯಾಧಿಕಾರಿಗಳು ಕ್ರಮ ಕೈಗೊಂಡರು.
-ಚAದ್ರಮೋಹನ್