ಸಿದ್ದಾಪುರ, ಅ. ೨೮: ಪುಂಡಾಟ ತೋರುತ್ತ ಜನರಿಗೆ ಉಪಟಳ ನೀಡಿ ಪ್ರಾಣಭಯ ಸೃಷ್ಟಿಸಿದ್ದ ಆನೆ ಇದೀಗ ಪಳಗಿದ್ದು, ಕ್ರಾಲ್ನಿಂದ ಹೊರ ಬಂದು ಜನರಿಗೆ ಹಿತ ನೀಡುತ್ತಿದೆ.
ದುಬಾರೆ ಸಾಕಾನೆಗಳ ಶಿಬಿರದಲ್ಲಿ ಪಳಗಿಸಿದ ಕಾಡಾನೆಗಳ ಪೈಕಿ ಒಂದು ಕಾಡಾನೆ ‘ಕ್ರಾಲ್’ನಲ್ಲಿ ಇದ್ದು ಮತ್ತೊಂದು ಕಾಡಾನೆಗೆ ನಾಮಕರಣ ಮಾಡಿ ಶಿಬಿರದಲ್ಲಿ ಉಳಿಸಿ ಕೊಳ್ಳಲಾಗಿದೆ.
ಮೂಡಿಗೆರೆಯಲ್ಲಿ ಕಳೆದ ಕೆಲವು ತಿಂಗಳ ಹಿಂದೆ ಉಪಟಳ ನೀಡುತ್ತಿದ್ದ ಸಲಗ ಒಂದನ್ನು ಸೆರೆ ಹಿಡಿದು ದುಬಾರೆ ಶಿಬಿರಕ್ಕೆ ಕರೆತರಲಾಗಿತ್ತು. ಸಿಬ್ಬಂದಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದಂತೆ ಅವುಗಳಿಗೆ ಸೂಕ್ತ ತರಬೇತಿ ನೀಡಿ ಕೋಪ ಇಳಿಸಿ ಇದೀಗ ‘ಸಾರಥಿ’ ಎಂದು ನಾಮಕರಣ ಮಾಡಲಾಗಿದೆ. ಇದೀಗ ಶಿಬಿರದಲ್ಲಿರುವ ಸಾಕಾನೆ ಗಳೊಂದಿಗೆ ಬಿಡಲಾಗಿದೆ.
ಕ್ರಾಲ್ನಲ್ಲಿ ಆನೆಗೆ ಬೇಕಾದಂತಹ ಆಹಾರಗಳನ್ನು ನೀಡಿ ಅದನ್ನು ಪಳಗಿಸಲಾಯಿತು. ಪರಿಣಿತ ಮಾವುತರುಗಳಾದ ರವಿ, ಮಣಿ ಆನೆಯನ್ನು ಪಳಗಿಸಿದರು. ಪಳಗುವ ಮುನ್ನ ಮುನ್ನೆಚ್ಚರಿಕೆ ಕ್ರಮವಾಗಿ ಕ್ರಾಲ್ ಬಳಿ ಪ್ರವಾಸಿಗರಿಗೆ ಪ್ರವೇಶ ನಿಷೇಧಿ ಸಲಾಗಿತ್ತು. ಇದೀಗ ಶಿಬಿರದಲ್ಲಿರುವ ಸಾಕಾನೆಗಳೊಂದಿಗೆ ಸಾರಥಿ ಹೊಂದಿಕೊಳ್ಳುತ್ತಿದ್ದಾನೆ.
ಪಳಗುತ್ತಿದೆ ಮತ್ತೊಂದು ಆನೆ
ಅರೆಕಾಡು ಹೊಸ್ಕೇರಿ ಭಾಗದಲ್ಲಿ ಉಪಟಳ ನೀಡುತ್ತಿದ್ದ ಸಲಗವನ್ನು ಸೆರೆಹಿಡಿದು ಇದೀಗ ದುಬಾರೆ ಸಾಕಾನೆಗಳ ಶಿಬಿರದ ಸಮೀಪದ ಕ್ರಾಲ್ನಲ್ಲಿ ಪಳಗಿಸ ಲಾಗುತ್ತಿದೆ. ಇದಕ್ಕೆ ‘ಕಂಸ’ ಎಂದು ನಾಮಕರಣ ಮಾಡಲಾಗಿದೆ. ಈಗಾಗಲೇ ಬಹುತೇಕವಾಗಿ ತರಬೇತಿ ಪೂರ್ಣಗೊಂಡು ಇತರ ಆನೆ ಗಳೊಂದಿಗೆ ಹೊಂದಿಕೊಳ್ಳುತ್ತಿದೆ.
ಮುಂದಿನ ಒಂದು ತಿಂಗಳಿ ನೊಳಗೆ ಇದನ್ನು ಕೂಡ ಕ್ರಾಲ್ ನಿಂದ ಬಂಧಮುಕ್ತ ಗೊಳಿಸ ಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. - ವಾಸು