ಮಡಿಕೇರಿ, ಅ. ೨೮: ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅದು ಮಕ್ಕಳ ದಸರಾ ದಿನದ ಕಾರ್ಯಕ್ರಮ.
ಬೆಂಗಳೂರಿನಿAದ ಬಂದಿದ್ದ ಪುಟಾಣಿಗಳಾದ ಭೂಮಿಕಾ, ದೀಪಿಕಾ ಅತ್ಯುತ್ತಮವಾಗಿ ಹಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಇವರ ಕಾರ್ಯಕ್ರಮದೊಂದಿಗೆ ಅಂದಿನ ಸಾಂಸ್ಕೃತಿಕ ಕಾರ್ಯಕ್ರಮ ಮುಕ್ತಾಯಗೊಂಡಿತ್ತು.
ವೇದಿಕೆಯ ಲೈಟ್ ಆಫ್ ಆದವು. ಈ ಸಂದರ್ಭ ವೇದಿಕೆಗೆ ಮೆಲ್ಲನೆ ಹತ್ತಿಕೊಂಡು ಬಂದ ಆ ಹಿರಿಯರು ಮಡಿಕೇರಿ ನಗರಸಭೆಯ ಪೌರಕಾರ್ಮಿಕ ನಾಗ ಎಂಬವರು.
ಏನಾಗಬೇಕಿತ್ತು ಅಂದೆ. ಸಾ.., ಈಗ ಹಾಡಿದ್ರಲ್ಲ ಆ ಮಕ್ಕಳನ್ನು ನೋಡಬೇಕಿತ್ತು ಎಂದರು ನಾಗ. ಕೂಡಲೇ ಭೂಮಿಕಾ, ದೀಪಿಕಾರನ್ನು ಕರೆದೆ. ಅವರ ಬೆನ್ನು ತಟ್ಟಿದ ನಾಗ ಏನ್ ಚೆನ್ನಾಗಿ ಹಾಡ್ತಿರಾ ಮಕ್ಕಳೇ ಎಂದವರೇ ಮೆಲ್ಲನೇ ತನ್ನ ಕೈಯೊಳಗಿದ್ದ ಮುದುರಿದ ೧೦೦ ರೂ. ನೋಟು ಹೊರತೆಗೆದರು. ಭೂಮಿಕಾ ಕೈಗೆ ನೋಟನ್ನಿತ್ತ ನಾಗ, ಮಕ್ಕಳೇ ನಿಮಗೆ ಒಳ್ಳೆಯದಾಗಲಿ.. ಚಂದಾಕೆ ಹಾಡಿ ಎಂದು ಹಾರೈಸಿದರು. ನಾಗ ಅವರ ಕೊಡುಗೆಗೆ ಮಕ್ಕಳು ತಬ್ಬಿಬ್ಬಾದರು.
ಇದನ್ನೆಲ್ಲಾ ವೇದಿಕೆ ಮುಂಬದಿಯಿAದ ಗಮನಿಸುತ್ತಿದ್ದ ಮಕ್ಕಳ ತಂದೆ ಜಿ. ಶ್ರೀನಾಥ ವೇದಿಕೆ ಏರಿ ಬಂದವರೇ ನಾಗ ಅವರ ಕಾಲಿಗೆರಗಿ ಆಶೀರ್ವಾದ ಕೋರಿದರು. ಅಲ್ಲ ಸ್ವಾಮಿ, ನೀವೇ ದಿನಗೂಲಿ ಮಾಡಿಕೊಂಡು ದುಡಿಯೋರು.. ಹೀಗಿದ್ದರೂ ೧೦೦ ರೂಪಾಯಿ ನಮ್ಮ ಮಕ್ಕಳಿಗೆ ಕೊಡುತ್ತೀರಲ್ಲ. ಬೇಡ ಬಿಡಿ. ನೀವೇ ಇಟ್ಟುಕೊಳ್ಳಿ ಎಂದು ವಿನಮ್ರರಾಗಿ ಹೇಳಿದರು.
ನಾಗ ಕೇಳಲಿಲ್ಲ. ಇಲ್ಲ... ಇಲ್ಲ... ಇದು ನನ್ ಕೊಡುಗೆ ಇಸ್ಕೊಳ್ಳಲೇ ಬೇಕು. ಸಾ.., ನಂಗೆ ಹಾಡು ಅಂದ್ರೆ ಇಷ್ಟ.., ಈ ಮಕ್ಳು ಚಂದಾನೆ ಹಾಡಿದ್ರು.., ಅವ್ರಿಗೆ ಏನಾರು ಕೊಡ್ಬೇಕೂಂತ ಆಯ್ತು ಸಾ.., ಅದ್ಕೆ ಬಂದೆ.., ಆ ಮಕ್ಳು ಬೆಳಿಬೇಕು ಸಾ.., ಎಂದು ಹಠ ಹಿಡಿದಾಗ ಭೂಮಿಕಾಳ ಪೋಷಕರು ಮೂಕವಿಸ್ಮಿತರಾದರು.
ನಾಗನ ಅಭಿಮಾನ ಮತ್ತು ಹಾರೈಸಿದ ಪರಿ ಕಂಡು ವೇದಿಕೆಯಲ್ಲಿದ್ದ ಸಾಂಸ್ಕೃತಿಕ ಸಮಿತಿ ತಂಡದವರ ಕಣ್ಣಲ್ಲಿ ಕಣ್ಣೀರು ಸುರಿಯತೊಡಗಿತ್ತು.
ನಮ್ಮ ಮಕ್ಕಳು ಎಷ್ಟೇ ಪ್ರಸಿದ್ಧರಾಗಲಿ ಎಷ್ಟೇ ವರ್ಷಗಳಾಗಲಿ, ಮಡಿಕೇರಿ ಪೌರಕಾರ್ಮಿಕ ನಾಗ ಅವರ ಕೊಡುಗೆಯನ್ನು ಮರೆಯೋದಿಲ್ಲ ಎಂಬ ಮಾತಿನೊಂದಿಗೆ ಶ್ರೀನಾಥ ಮತ್ತು ಮಕ್ಕಳು ತೆರಳಿದರು.
ವೇದಿಕೆಯಲ್ಲಿ ಕತ್ತಲಿದ್ದಿರಬಹುದು. ಆದರೆ ನಾಗ ಅವರ ಕೊಡುಗೆ ಎಲ್ಲರ ಮನದಲ್ಲಿಯೂ ಬೆಳಕು ಮಿಂಚುವAತೆ ಮಾಡಿತ್ತು. - ಅನಿಲ್ ಎಚ್.ಟಿ.