ಸೋಮವಾರಪೇಟೆ, ಅ. ೨೮: ಜಿಲ್ಲೆಯ ರೈತರೇ ಕಾಫಿ ಬೆಳೆಯು ತ್ತಿರುವುದರಿಂದ ಕಾಫಿ ಕೃಷಿಗಾಗಿ ಉಪಯೋಗಿಸಿದ ೧೦ ಹೆಚ್‌ಪಿ ಪಂಪ್‌ಸೆಟ್‌ಗಳ ವಿದ್ಯುತ್ ಬಾಕಿ ಬಿಲ್ ಅನ್ನು ಸಂಪೂರ್ಣ ಮನ್ನ ಮಾಡ ಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಸರ್ಕಾರವನ್ನು ಒತ್ತಾಯಿಸಿದೆ.

ಕಾಫಿ ಬೆಳೆಗಾರರ ೧೦ ಹೆಚ್‌ಪಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವಂತೆ ಕಳೆದ ಹಲವಾರು ವರ್ಷಗಳಿಂದ ರೈತ ಸಂಘ ಹೋರಾಟ ಮಾಡುತ್ತಿದೆ. ಹಿಂದಿನ ಬಿಜೆಪಿ ಸರ್ಕಾರ ಕೆಲವು ಷರತ್ತು ಗಳೊಂದಿಗೆ ಉಚಿತ ವಿದ್ಯುತ್ ನೀಡಲು ಒಪ್ಪಿಗೆ ನೀಡಿದ್ದು, ಹಾಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಕಾಫಿ ಬೆಳೆಗಾರರ ರಕ್ಷಣೆಗೆ ಉಚಿತ ವಿದ್ಯುತ್ ನೀಡಬೇಕೆಂದು ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಕೊಡಗು ಬರಗಾಲ ಪೀಡಿತ ಜಿಲ್ಲೆಯಾಗಿದ್ದು, ಐದು ತಾಲೂಕು ಗಳಲ್ಲಿ ಸರಾಸರಿ ೪೦ ಇಂಚಿನಷ್ಟು ಮಳೆಯಾಗಿದೆ. ಶೇ. ೭೦ ರಷ್ಟು ಕಾಫಿ, ಕಾಳುಮೆಣಸು ಫಸಲು ಹಾನಿಯಾ ಗಿದೆ. ಅದರಲ್ಲೂ ಸೋಮವಾರಪೇಟೆ ತಾಲೂಕಿನ ಅರೇಬಿಕಾ ಕಾಫಿ ತೋಟಗಳು ರೋಗಪೀಡಿತವಾಗಿವೆ. ಮುಂದಿನ ಐದು ವರ್ಷಗಳ ಫಸಲಿಗೂ ಹಾನಿಯಾಗಿದೆ. ಈಗ ರೈತರು ಸಂಕಷ್ಟದಲ್ಲಿದ್ದಾರೆ ಎಂದು ಹೇಳಿದರು. ಕೊಡಗಿನಲ್ಲಿ ೪ಸಾವಿರದಷ್ಟು ಕೊಳವೆಬಾವಿಗಳಿವೆ. ಸ್ವಂತ ಖರ್ಚಿನಲ್ಲೇ ನಾಲ್ಕೆöÊದು ಲಕ್ಷ ರೂ.ಗಳನ್ನು ರೈತರು ಖರ್ಚು ಮಾಡಿ, ಕೊಳವೆ ಬಾವಿಗಳನ್ನು ಕೊರೆಸಿ, ಒಂದು ಲಕ್ಷದಷ್ಟು ಖರ್ಚು ಮಾಡಿ ಪಂಪ್‌ಸೆಟ್‌ಗಳನ್ನು ಸ್ಥಾಪಿಸಿಕೊಂಡು, ಕಾಫಿ ತೋಟಗಳಿಗೆ ನೀರು ಹಾರಿಸಿ, ಕಾಫಿ ಉತ್ಪಾದನೆ ಹೆಚ್ಚು ಮಾಡಿದ್ದಾರೆ. ಇದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ವಿದೇಶಿ ವಿನಿಮಯ ಮತ್ತು ತೆರಿಗೆಯಿಂದ ಸಾವಿರಾರು ಕೋಟಿ ಆದಾಯ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರ ೨೩ಕೋಟಿ ರೂ.ಗಳ ವಿದ್ಯುತ್ ಬಿಲ್ ಬಾಕಿ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ಕಾಫಿ ಬೆಳೆಗಾರರು ವಾರ್ಷಿಕ ಮರ‍್ನಾಲ್ಕು ತಿಂಗಳು ಮಾತ್ರ ಪಂಪ್‌ಸೆಟ್ ಮೂಲಕ ತೋಟಗಳಿಗೆ ನೀರನ್ನು ಬಳಸುತ್ತಿದ್ದಾರೆ. ಆದರೆ ೧೨ ತಿಂಗಳಿಗೂ ಮಾಸಿಕ ೬೦೦ ರೂ.ಗಳ ನಿಗದಿತ ಶುಲ್ಕದೊಂದಿಗೆ ವಿದ್ಯುತ್ ಬಿಲ್ ನೀಡಲಾಗುತ್ತಿದೆ. ಯೂನಿಟ್ ಬಿಲ್, ತೆರಿಗೆ, ಚಕ್ರಬಡ್ಡಿ ಸೇರಿ ಒಂದು ಯೂನಿಟ್‌ಗೆ ೧೯.೫೦ ರೂ. ಬಿಲ್ ಜಡಿಯುತ್ತಿದ್ದಾರೆ. ವಾರ್ಷಿಕ ೫ ಸಾವಿರದಷ್ಟು ವಿದ್ಯುತ್ ಬಳಸಿದ ರೈತರಿಗೆ ೨ ಲಕ್ಷ ರೂ.ಗಳ ಬಿಲ್ ನೀಡಲಾಗಿದೆ. ಇದು ವಿದ್ಯುತ್ ಇಲಾಖೆಯ ಅವೈಜ್ಞಾನಿಕ ನೀತಿ, ಇದೊಂದು ದಂಧೆ ಎಂದು ಅಕ್ರೋಶ ವ್ಯಕ್ತಪಡಿಸಿದರು. ವಿದ್ಯುತ್ ಬಿಲ್ ಬಾಕಿಯಿರುವ ಬೆಳಗಾರರ ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಬರಗಾಲ ಪೀಡಿತ ಜಿಲ್ಲೆಯಾಗಿರುವ ಹಿನ್ನೆಲೆ ರೈತರ ಸಾಲವನ್ನು ಸಂಪೂರ್ಣ ಮನ್ನ ಮಾಡಬೇಕು. ಫಸಲು ಹಾನಿಗೆ ಸೂಕ್ತ ಪರಿಹಾರ ನೀಡಬೇಕು. ರಾಸಾಯನಿಕ ಗೊಬ್ಬರ, ಕೀಟನಾಶಕಗಳಿಗೆ ಹೆಚ್ಚಿನ ಸಬ್ಸಿಡಿ ನೀಡಬೇಕು. ಭತ್ತ ಕೃಷಿಗೆ ಸಹಾಯಧನ ನೀಡಬೇಕು. ಕಾಫಿ ಬೆಳೆಗೆ ವಿಶೇಷ ಪ್ಯಾಕೇಜ್ ಕಲ್ಪಿಸಬೇಕು ಎಂದು ಉಪಾಧ್ಯಕ್ಷ ಜಿ.ಎಂ. ಹೂವಯ್ಯ ಆಗ್ರಹಿಸಿದರು.

ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆಹಾನಿಯಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಕಾಡುಕೋಣಗಳು ಭತ್ತ ಪೈರನ್ನು ತಿಂದು ನಷ್ಟಪಡಿಸುತ್ತಿವೆ. ಕಾಡಾನೆಗಳ ಹಾವಳಿಯೂ ಜಾಸ್ತಿಯಾಗಿದೆ. ಅರಣ್ಯದಂಚಿನಲ್ಲಿ ರೈಲ್ವೆ ಬ್ಯಾರಿಕೇಡ್ ಕಾಮಗಾರಿ ತೆವಳುತ್ತ ಸಾಗುತ್ತಿದೆ. ಕಿಲೋಮೀಟರ್‌ಗೊಬ್ಬರಂತೆ ಗುತ್ತಿಗೆದಾರರು ಇದ್ದಾರೆ. ಕಾಮಗಾರಿ ಕಳಪೆಯಾದರೂ ಕಾನೂನು ಕ್ರಮ ತೆಗೆದುಕೊಳ್ಳುತ್ತಿಲ್ಲ. ಕಾಡಾನೆಗಳ ಹಾವಳಿ ನಿಂತಿಲ್ಲ. ಸರ್ಕಾರ ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಸಂಚಾಲಕ ಮಚ್ಚಂಡ ಅಶೋಕ್ ಒತ್ತಾಯಿಸಿದರು. ಖಾಸಗಿಯವರ ಕಂಪ್ಯೂಟರ್ ಸೆಂಟರ್‌ಗಳಲ್ಲಿ ಆಧಾರ್ ಕಾರ್ಡ್, ಪಡಿತರ ಚೀಟಿ ತಿದ್ದುಪಡಿ ಇನ್ನಿತರ ಕೆಲಸಗಳಿಗೆ ೨೦೦ರಿಂದ ೩೦೦ ರೂ.ಗಳನ್ನು ಅಕ್ರಮವಾಗಿ ಪಡೆಯಲಾಗುತ್ತಿದೆ. ಕೇವಲ ೨೫ ರೂ.ಗಳ ಸರ್ಕಾರಿ ಶುಲ್ಕವಾಗಿರುತ್ತದೆ. ಅದರಲ್ಲೇ ಕಮಿಷನ್ ನೀಡಲಾಗುತ್ತದೆ. ಆದರೆ ಖಾಸಗಿಯವರನ್ನು ಕೇಳುವವರೆ ಇಲ್ಲದಂತಾಗಿದೆ. ಸರ್ಕಾರದ ನಿಯಮ ಪಾಲಿಸದ ಸೆಂಟರ್‌ಗಳ ಅನುಮತಿಯನ್ನು ಕೂಡಲೇ ರದ್ದುಪಡಿಸಬೇಕು ಎಂದು ದಿನೇಶ್ ಆಗ್ರಹಿಸಿದರು.

ಹೊನ್ನಮ್ಮನ ಕೆರೆ ಹಾಗೂ ಅಬ್ಬೂರುಕೆರೆಯ ಚೆಕ್‌ಡ್ಯಾಂ ಕಾಲುವೆಗಳು ಹಾಳಾಗಿದ್ದು, ದುರಸ್ತಿಯಾಗದೆ ನೀರು ಪೋಲಾಗುತ್ತಿದೆ. ಕೃಷಿ ಬೆಳೆಗೆ ನೀರಿಲ್ಲದಂತಾಗಿದೆ. ಕೂಡಲೇ ಕಾಲುವೆ ದುರಸ್ತಿಗೆ ಜನಪ್ರತಿನಿಧಿಗಳು ಅನುದಾನ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಸಿ.ಜೆ. ಚೇತನ್, ಪದಾಧಿಕಾರಿಗಳ ಎ.ಆರ್. ಕುಶಾಲಪ್ಪ ಇದ್ದರು.