ಸೋಮವಾರಪೇಟೆ, ಅ. ೨೮ : ರಾಜ್ಯಾದ್ಯಂತ ಭಾರೀ ಸಂಚಲನ ಸೃಷ್ಟಿಸಿದ್ದ, ಹಲವಷ್ಟು ಪ್ರತಿಭಟನೆಗಳಿಗೂ ಕಾರಣವಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾದ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗಳ ಪತ್ತೆ ಕಾರ್ಯಾಚರಣೆಯನ್ನು ಚುರುಕುಗೊಳಿಸಿರುವ ಎನ್ಐಎ ಅಧಿಕಾರಿಗಳು, ಸೋಮವಾರಪೇಟೆ ಮೂಲದ ಈರ್ವರು ಆರೋಪಿಗಳ ಮಾಹಿತಿಗಾಗಿ ಸ್ಥಳೀಯ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿಗಳ ಮೂಲಕ ಪೋಸ್ಟರ್ ಅಂಟಿಸಿದ್ದಾರೆ.
ಪಟ್ಟಣದ ಖಾಸಗಿ ಹಾಗೂ ಸರ್ಕಾರಿ ಬಸ್ ನಿಲ್ದಾಣ, ಆಂಜನೇಯ ದೇವಾಲಯದ ಬಳಿ, ಕಕ್ಕೆಹೊಳೆ ಜಂಕ್ಷನ್ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಸೋಮವಾರಪೇಟೆ ಮೂಲದ ಈರ್ವರು ಆರೋಪಿಗಳ ಸಹಿತ ಬೆಳ್ತಂಗಡಿಯ ಓರ್ವ ಆರೋಪಿಯನ್ನು ಒಳಗೊಂಡAತೆ ಪೋಸ್ಟರ್ಗಳನ್ನು ಅಂಟಿಸಲಾಗಿದೆ.
ಸೋಮವಾರಪೇಟೆ ಪಟ್ಟಣ ಸಮೀಪದ ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಕಂದೂರು ಗ್ರಾಮದ ಅಬ್ದುಲ್ ಖಾದರ್ ಅವರ ಪುತ್ರ ಅಬ್ದುಲ್ ರೆಹಮಾನ್ (೩೬ ವರ್ಷ-ಪ್ರಕರಣದ ಆರೋಪಿ ಸಂಖ್ಯೆ ೨೪), ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನ್ವೆಂಟ್ ಬಾಣೆ ಗ್ರಾಮದ ಇಬ್ರಾಹಿಂ ಅವರ ಪುತ್ರ ಅಬ್ದುಲ್ ನಾಸಿರ್ (೪೧ ವರ್ಷ-ಪ್ರಕರಣದ ಆರೋಪಿ ಸಂಖ್ಯೆ ೨೨) ಸೇರಿದಂತೆ ಬೆಳ್ತಂಗಡಿಯ ಹಮೀದ್ ಅವರ ಪುತ್ರ ನೌಷಾದ್ (೩೨ ವರ್ಷ-ಪ್ರಕರಣದ ಆರೋಪಿ ಸಂಖ್ಯೆ ೨೩) ಅವರುಗಳ ಭಾವಚಿತ್ರವನ್ನು ಒಳಗೊಂಡ ಪೋಸ್ಟರ್ಗಳನ್ನು ಅಲ್ಲಲ್ಲಿ ಅಂಟಿಸಲಾಗಿದೆ.
ಇದರೊAದಿಗೆ ಮೂವರು ಆರೋಪಿಗಳ ಬಗ್ಗೆ ಮಾಹಿತಿ ನೀಡಿದ್ದಲ್ಲಿ ತಲಾ ೨ ಲಕ್ಷ ಬಹುಮಾನವನ್ನೂ ಘೋಷಿಸಲಾಗಿದೆ. ೨೬.೦೭.೨೦೨೨ರಂದು ನಡೆದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ಬಂಧನಕ್ಕೆ ಎನ್ಐಎ ಕಾರ್ಯಾಚರಣೆ ಚುರುಕುಗೊಳಿಸಿದ್ದು, ಈವರೆಗೆ ಬಹುತೇಕ ಆರೋಪಿಗಳನ್ನು ಬಂಧಿಸಲಾಗಿದೆ. ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಇವರ ಪತ್ತೆಗೆ ಎನ್ಐಎ ರಿವಾರ್ಡ್ ವಾಂಟೆಡ್ ನೋಟೀಸ್ ಜಾರಿಗೊಳಿಸಿದೆ.
ಪ್ರವೀಣ್ ಹತ್ಯೆ ಪ್ರಕರಣಕ್ಕೆ ಸಂಬAಧಿಸಿದAತೆ ಆರೋಪಿಗಳ ವಿರುದ್ಧ ೧೫೦೦ ಪುಟಗಳ ಆರೋಪ ಪಟ್ಟಿಯನ್ನು ಎನ್ಐಎ ತಂಡ ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಇದರಲ್ಲಿ ೨೪೦ ಸಾಕ್ಷಿದಾರರ ಹೇಳಿಕೆಯನ್ನು ದಾಖಲಿಸಿದೆ.