ಗೋಣಿಕೊಪ್ಪಲು, ಅ. ೨೮: ಮನೆಯ ಹಿತ್ತಲಿನಲ್ಲಿ ವಿವಿಧ ತರಕಾರಿ ಹೂವಿನ ಗಿಡಗಳನ್ನು ಬೆಳೆಸುವುದು ನಾವುಗಳು ಕಂಡಿದ್ದೇವೆ. ಆದರೆ ಗೋಣಿಕೊಪ್ಪ ನಗರದ ಬಡಾವಣೆಯೊಂದರ ಮನೆಯ ಹಿತ್ತಲಿನಲ್ಲಿ ಹೂ, ತರಕಾರಿ ಗಿಡಗಳ ಬದಲು ಗಾಂಜಾ ಗಿಡಗಳನ್ನು ಬೆಳೆಸಿದ್ದಾರೆ ಎಂದರೆ ನಂಬಲು ಸಾಧ್ಯವೇ.? ಆದರೆ ನಂಬಲೇಬೇಕಾದ ಇಂತಹ ಪ್ರಕರಣ ಗೋಣಿಕೊಪ್ಪ ೧ನೇ ವಿಭಾಗದಲ್ಲಿ ನಡೆದಿದೆ.
ಮನೆಯ ಹಿತ್ತಲಿನಲ್ಲಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಮಾಹಿತಿ ಆಧಾರದ ಮೇಲೆ ಗೋಣಿಕೊಪ್ಪ ಪೊಲೀಸರು ಬಡಾವಣೆಯಲ್ಲಿರುವ ಆರೋಪಿ ಮನೆ ಮೇಲೆ ದಾಳಿ ನಡೆಸಿ ಬೆಳೆದಿದ್ದ ೧೩ ಗಾಂಜಾ ಗಿಡಗಳು ಹಾಗೂ ಹೂ ಕುಂಡದಲ್ಲಿ ಬೆಳೆಯಲಾಗಿದ್ದ ೧ ಗಾಂಜಾ ಗಿಡವನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
೫ ಕೆ.ಜಿ. ೪೦೦ ಗ್ರಾಂ ಹಸಿ ಗಾಂಜಾವನ್ನು ವಶಪಡಿಸಿಕೊಂಡ ಪೊಲೀಸರು ಆರೋಪಿ ಗೋಣಿಕೊಪ್ಪಲುವಿನ ೧ನೇ ವಿಭಾಗದ ರಿಷಿ ಕಾವೇರಪ್ಪನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಗೋಣಿಕೊಪ್ಪ ಪೊಲೀಸ್ ಠಾಣೆಯ ಕೂಗಳತೆಯ ದೂರದಲ್ಲಿರುವ ಬಡಾವಣೆಯಲ್ಲಿ ಆರೋಪಿ ರಿಷಿ ಕಾವೇರಪ್ಪ ವಾಸವಾಗಿದ್ದಾರೆ. ಈತ ತನ್ನ ಮನೆಯ ಹಿತ್ತಲಿನಲ್ಲಿ ಹಲವು ಗಾಂಜಾ ಗಿಡಗಳನ್ನು ಬೆಳೆಸಿರುವುದು ಪೊಲೀಸರ ದಾಳಿಯ ವೇಳೆ
ಬೆಳಕಿಗೆ ಬಂದಿದೆ. ಗಾಂಜಾ ಗಿಡಗಳು
(ಮೊದಲ ಪುಟದಿಂದ) ೪ ರಿಂದ ೫ ಅಡಿ ಎತ್ತರವಿದ್ದು ಇವುಗಳನ್ನು ಕಾಪಾಡುವ ನಿಟ್ಟಿನಲ್ಲಿ ಗಿಡಗಳಿಗೆ ಕಬ್ಬಿಣದ ಮೆಸ್ಗಳನ್ನು ಸುತ್ತಲು ಅಳವಡಿಸಲಾಗಿತ್ತು. ಗಾಂಜಾ ಗಿಡಗಳು ಎತ್ತರ ಹೋಗುತ್ತಿದ್ದಂತೆ ಮುರಿದು ಬೀಳದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಗಿಡಗಳಿಗೆ ಕಬ್ಬಿಣದ ಸಲಾಕೆಗಳನ್ನು ಅಳವಡಿಸಲಾಗಿತ್ತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಮಾರ್ಗದರ್ಶನದಲ್ಲಿ ಕಾರ್ಯಪ್ರವೃತ್ತರಾದ ವೀರಾಜಪೇಟೆ ಡಿವೈಎಸ್ಪಿ, ಗೋಣಿಕೊಪ್ಪ ವೃತ್ತ ನಿರೀಕ್ಷಕ ಗೋವಿಂದರಾಜ್ ಹಾಗೂ ಠಾಣಾಧಿಕಾರಿ ರೂಪಾದೇವಿ ಬೀರಾದಾರ್ ಹಾಗೂ ಸಿಬ್ಬಂದಿಗಳು ಗಾಂಜಾ ಗಿಡಗಳ ಸಹಿತ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸರು ನಿರಂತರವಾಗಿ ಗಾಂಜಾ ತಡೆಗೆ ಪರಿಣಾಮಕಾರಿ ಕ್ರಮ ಕೈಗೊಳ್ಳುತ್ತಿದ್ದಾರೆ. ಇತ್ತೀಚೆಗೆ ೮೨ಕ್ಕೂ ಅಧಿಕ ಗಾಂಜಾ ಪ್ರಕರಣಗಳು ಕೊಡಗು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ಗಾಂಜಾವನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಪೊಲೀಸರು ಕಠಿಣ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಕೊಡಗಿನ ಪೊಲೀಸ್ ವರಿಷ್ಠಾಧಿಕಾರಿಗಳು ಈ ನಿಟ್ಟಿನಲ್ಲಿ ವಿಶೇಷ ಕ್ರಮ ಜರುಗಿಸುತ್ತಿದ್ದು ತಮ್ಮ ಸಹ ಸಿಬ್ಬಂದಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಆ ನಿಟ್ಟಿನಲ್ಲಿ ವಿವಿಧ ಠಾಣಾ ಪೊಲೀಸರು ಗಾಂಜಾ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಕಾರ್ಯಾಚರಣೆ ಯಲ್ಲಿ ಅಪರಾಧ ವಿಭಾಗದ ಪಿಎಸ್ಐ ಟಿ.ಎಂ ಕಾವೇರಪ್ಪ, ಗೋಣಿಕೊಪ್ಪ ಪೊಲೀಸ್ ಠಾಣೆಯ ಎಎಸ್ಐ ಎನ್.ಸಿ. ನಂಜಪ್ಪ, ಸಿಬ್ಬಂದಿಗಳಾದ ಟಿ.ಪಿ. ಮಂಜುನಾಥ್, ತೇಜಸ್ ಕುಮಾರ್, ಚಂದ್ರಶೇಖರ್, ಪೂವಣ್ಣ, ಕಾವೇರಪ್ಪ, ಬಿ.ಎನ್. ಪುನೀತ್ ಕುಮಾರ್ ಮುಂತಾದವರು ಭಾಗವಹಿಸಿದ್ದರು.
ಇತ್ತೀಚಿನ ದಿನದಲ್ಲಿ ಮಾದಕ ವಸ್ತುಗಳಿಗೆ ಶಾಲಾ ಕಾಲೇಜು ವಿದ್ಯಾರ್ಥಿಗಳು ಬಲಿಯಾಗುತ್ತಿದ್ದು ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಗಾಂಜಾ ವ್ಯಸನಿಗಳಾಗಿ ತಮ್ಮ ಬದುಕನ್ನೆ ಕಳೆದುಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಜನರು ಜಾಗೃತಿ ವಹಿಸಬೇಕಾಗಿದೆ. ಇಂತಹ ದುಶ್ಚಟಗಳಿಂದ ದೂರವಿರಬೇಕಾಗಿದೆ.
-ಹೆಚ್.ಕೆ.ಜಗದೀಶ್