ಚೆಯ್ಯಂಡಾಣೆ, ಅ. ೨೮: ಕೊಡಗಿನ ಸುಂದರ ಜಲಪಾತಗಳಲ್ಲಿ ಒಂದಾದ ಚೇಲಾವರ ಜಲಪಾತಕ್ಕೆ ಪ್ರವಾಸಿಗರು ಪ್ರತಿದಿನ ಅಧಿಕ ಸಂಖ್ಯೆಯಲ್ಲಿ ಆಗಮಿಸುತ್ತಾರೆ.

ಪ್ರವಾಸಿಗರು ಆಗಮಿಸಿ ಸ್ವಚ್ಛತೆ ಕಾಪಾಡದೆ ಕಂಡ ಕಂಡಲ್ಲಿ ನೀರಿನ ಬಾಟಲಿ, ಪ್ಲಾಸ್ಟಿಕ್‌ಗಳು, ತಿಂಡಿ ತಿನಿಸುಗಳ ಪೊಟ್ಟಣಗಳನ್ನು ಅಲ್ಲೇ ಬಿಸಾಡಿ ತೆರಳುತ್ತಾರೆ. ಇದರಿಂದ ಸುಂದರ ಜಲಪಾತ ಹಾಗೂ ಪರಿಸರ ಮಲಿನಗೊಳ್ಳುತ್ತಿರುವುದು ಮನಗಂಡು ಚೇಲಾವರ ಗ್ರಾಮದ ಹೊಸೋಕ್ಲು ಸತೀಶ್ ಹಾಗೂ ವಸಂತಿ ದಂಪತಿ ಪುತ್ರಿ. ಗೋಣಿಕೊಪ್ಪ ಕಾವೇರಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಹಾಗೂ ಎನ್‌ಎಸ್‌ಎಸ್ ಸ್ವಯಂಸೇವಕಿ ಡಯಾನ ಜಲಪಾತದ ಸಮೀಪ ರಸ್ತೆಯಲ್ಲಿದ್ದ ಕಸಗಳನ್ನು ಸ್ವಚ್ಛಗೊಳಿಸಿ ಮಾದರಿಯಾಗಿದ್ದಾಳೆ. ವಿದ್ಯಾರ್ಥಿ ಡಯಾನ ಕಾರ್ಯಕ್ಕೆ ಸ್ಥಳೀಯ ಗ್ರಾಮಸ್ಥರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಪರಿಸರದ ಸಮಸ್ಯೆಗಳನ್ನು ನಾವು ಪರಿಹರಿಸಿದರೆ, ನಮ್ಮ ನೂರಾರು ಸಮಸ್ಯೆಗಳು ಪರಿಹಾರವಾಗುತ್ತದೆ. ಪರಿಸರ ಉಳಿಸಿ ಕೊಡಗಿನಲ್ಲಿ ಸ್ವಚ್ಛತೆಯನ್ನು ಕಾಪಾಡಿ, ಪರಿಸರವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಈ ಕಾರ್ಯ ಮಾಡಿದ್ದೇನೆ ಎಂದು ಡಯಾನ ತಿಳಿಸಿದ್ದಾಳೆ.