ವೀರಾಜಪೇಟೆ, ಅ. ೨೮ : ವಿಶೇಷಚೇತನ ಒಕ್ಕೂಟದ ಸದಸ್ಯರಿಗೆ ಸಮುದಾಯ ಬಂಡವಾಳ ನಿಧಿಯಿಂದ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಂಘದ ಗುಂಪುಗಳ ಸದಸ್ಯರಿಗೆ ಸ್ವ ಉದ್ಯೋಗದಲ್ಲಿ ಸ್ವಾವಲಂಬಿ ಜೀವನ ನಡೆಸಲು ಸರಕಾರ ರೂ. ೧.೫ ಲಕ್ಷ ಅನುದಾನ ನೀಡುತ್ತದೆ ಎಂದು ವೀರಾಜಪೇಟೆ ತಾಲೂಕು ಪಂಚಾಯಿತಿ ಎನ್.ಆರ್.ಎಲ್.ಎಂ. ಸಂಯೋಜಕ ಎಸ್. ಸೋಮಶೇಖರ್ ಹೇಳಿದರು.
ವೀರಾಜಪೇಟೆ ನಗರದ ಮೀನುಪೇಟೆಯಲ್ಲಿರುವ ಸೌಭಾಗ್ಯ ವಿಕಲಚೇತನ ಪತ್ತಿನ ಸಹಕಾರ ಸಂಘ, ಉದ್ಯಮಶೀಲತೆ ಜೀವನೋಪಾಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಸಮೀಪದ ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಶೇಷಚೇತನರ ಗುಂಪಿನ ಸಂಜೀವಿನಿ ಒಕ್ಕೂಟದ ಸದಸ್ಯರಿಗೆ ರೂ. ೧.೫ ಲಕ್ಷದ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸೋಮಶೇಖರ್ ಅವರು, ಇಲಾಖೆ ವತಿಯಿಂದ ಸಂಘದ ಮಹಿಳಾ ಸದಸ್ಯರಿಗೆ ಜೇನು ಸಾಕಾಣಿಕೆ, ಹೈನುಗಾರಿಕೆ, ಅಣಬೆ ಬೆಸಾಯ, ಟೈಲರಿಂಗ್, ಮೇಣದ ಬತ್ತಿ, ಸೋಪು ಇತ್ಯಾದಿಗಳ ತರಬೇತಿ ನೀಡಿ ಬಳಿಕ ಉದ್ಯೋಗದಲ್ಲಿ ಸಮಾಜದ ಮುಖ್ಯವಾಹಿನಿಗೆ ಬರುವಂತೆ ಅವರಿಗೆ ಬ್ಯಾಂಕ್ ಮೂಲಕ ಸಾಲ ಸೌಲಭ್ಯಗಳನ್ನು ನೀಡಲಾಗುವುದು. ಈ ಹಿನ್ನೆಲೆ ಈಗಾಗಲೇ ರೂ. ೧೮ ಕೋಟಿ ಅನುದಾನ ನೀಡುವಂತೆ ಸರಕಾರಕ್ಕೆ ವರದಿ ನೀಡಲಾಗಿದೆ ಎಂದು ತಿಳಿಸಿದ ಅವರು ಈಗಾಗಲೇ ಸ್ತಿçÃಶಕ್ತಿ ಸಂಘಗಳು, ಸಂಜೀವಿನಿ ಸಂಘದ ವ್ಯಾಪ್ತಿಗೆ ಬರುತ್ತದೆ ಎಂದರು.
ಆರ್ಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಾತಿಮಾ ಅವರು ವಿಶೇಷಚೇತನರ ಒಕ್ಕೂಟದ ಸದಸ್ಯರಿಗೆ ಚೆಕ್ ವಿತರಣೆ ಮಾಡಿದ ಬಳಿಕ ಮಾತನಾಡಿ, ಸರಕಾರದ ಅನುದಾನ ವನ್ನು ಉತ್ತಮ ಕಾರ್ಯಗಳಿಗೆ ಬಳುಸುವಂತಾಗಬೇಕು ಎಂದರು.
ಚೆಕ್ ವಿತರಣೆ ಸಂದರ್ಭ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ. ಮಣಿ, ಸೌಭಾಗ್ಯ ವಿಕಲಚೇತನರ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷೆ ಆಯಿಶಾ ಹಾಗೂ ವ್ಯವಸ್ಥಾಪಕಿ ಟಿ.ಯು. ವಿದ್ಯಾಶ್ರೀ, ಆರ್ಜಿ ಗ್ರಾ.ಪಂ. ಉಪಾಧ್ಯಕ್ಷೆ ಹೆಚ್.ಕೆ. ಕವಿತಾ, ಸಂಜೀವಿನಿ ಸಂಘದ ಅಧ್ಯಕ್ಷೆ ಕೆ.ಕೆ. ಜಾನ್ಸಿ ಮತ್ತು ಪಂಚಾಯಿತಿ ಸದಸ್ಯರು ಸಂಜೀವಿನಿ ಒಕ್ಕೂಟದ ಸದಸ್ಯರು ಹಾಜರಿದ್ದರು.