ಕುಶಾಲನಗರ, ಅ. ೨೮: ಕುಶಾಲನಗರ ಸಮೀಪದ ಕೊಪ್ಪ ಗ್ರಾಮ ಪಂಚಾಯಿತಿ ವಾಣಿಜ್ಯ ಮಳಿಗೆಯಲ್ಲಿ ಕೆಲವರು ಅಕ್ರಮವಾಗಿ ಮಾಂಸ ಮಾರಾಟ ಮಾಡುತ್ತಿದ್ದು, ಅದನ್ನು ತೆರವುಗೊಳಿಸಲು ಪಂಚಾಯಿತಿ ಅಧಿಕಾರಿಗಳು ಪೊಲೀಸರೊಂದಿಗೆ ಬಂದ ಸಂದರ್ಭ ಮಾಂಸ ವ್ಯಾಪಾರಿಯೊಬ್ಬ ಕಟ್ಟಡದ ಮೇಲೆ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯೊಡ್ಡಿದ ಪ್ರಹಸನ ಶನಿವಾರ ನಡೆದಿದೆ.
ಕುಶಾಲನಗರ ದಂಡಿನಪೇಟೆಯ ನಿವಾಸಿ ಮೀರಾ ಮೋಹಿದೀನ್ ಎಂಬಾತ ಕೊಪ್ಪ ಗ್ರಾಮ ಪಂಚಾಯಿತಿಗೆ ಸೇರಿದ ವಾಣಿಜ್ಯ ಮಳಿಗೆಯಲ್ಲಿ ಕುರಿ, ಆಡು ಮಾಂಸ ವ್ಯಾಪಾರ ಮಾಡುತ್ತಿದ್ದು, ಸಪ್ಟೆಂಬರ್ ಅಂತ್ಯಕ್ಕೆ ಟೆಂಡರ್ ಅವಧಿ ಮುಗಿದರೂ, ಮಳಿಗೆಯನ್ನು ತೆರವುಗೊಳಿಸದೆ ಅಕ್ರಮವಾಗಿ ವ್ಯಾಪಾರ ಮುಂದುವರಿಸಿರುವುದರ ಬಗ್ಗೆ ಪಂಚಾಯಿತಿ ಆಡಳಿತ ಮಂಡಳಿ ಮಳಿಗೆಯನ್ನು ತಕ್ಷಣ ತೆರವು ಗೊಳಿಸಲು ನಿರ್ಣಯ ಕೈಗೊಂಡಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸತೀಶ್ ಕುಮಾರ್ ಮತ್ತು ಸಿಬ್ಬಂದಿಗಳು ಪೊಲೀಸರ ಸಹಾಯದೊಂದಿಗೆ ಮಳಿಗೆ ತೆರವುಗೊಳಿಸಲು ಶನಿವಾರ ಬೆಳಿಗ್ಗೆ ಆಗಮಿಸಿದ್ದರು.
ಹಿಂದಿನ ಅವಧಿಯಲ್ಲಿ ತಾನು ನಷ್ಟಕ್ಕೆ ಒಳಗಾಗಿರುವ ಕಾರಣ ಅಂಗಡಿಯನ್ನು ತೆರವುಗೊಳಿಸಲು ಸಾಧ್ಯವಿಲ್ಲ ಎಂದು ಪಟ್ಟು ಹಿಡಿದ ಮೀರಾ ಮೈದೀನ್ ಪಂಚಾಯಿತಿ ವಾಣಿಜ್ಯ ಮಳಿಗೆ ಕಟ್ಟಡದ ಮೇಲೆ ಏರಿ ಕಟ್ಟಡದಿಂದ ಹಾರುವುದಾಗಿ ಬೆದರಿಕೆ ಒಡ್ಡಿದ ಘಟನೆ ನಡೆಯಿತು.
ಇದನ್ನು ಕಂಡು ಸ್ಥಳದಲ್ಲಿದ್ದ ಪೊಲೀಸರು ಎಷ್ಟೇ ಹೇಳಿದರೂ ಕೇಳದಿದ್ದ ಸಂದರ್ಭ ಸ್ಥಳೀಯರು ಆತನನ್ನು ಕಟ್ಟಡದಿಂದ ಕೆಳಗಡೆ ಇಳಿಸುವಲ್ಲಿ ಯಶಸ್ವಿಯಾದರು.
ಮಳಿಗೆ ತೆರವುಗೊಳಿಸಲು ಆಗಮಿಸಿದ ಪಂಚಾಯಿತಿ ಅಧಿಕಾರಿ, ಸಿಬ್ಬಂದಿಗಳು ಕಟ್ಟಡದಲ್ಲಿದ್ದ ನೀರು ವಿದ್ಯುತ್ ಸಂಪರ್ಕ ಮೂಲ ಸೌಕರ್ಯಗಳನ್ನು ಕಡಿತಗೊಳಿಸಿದ್ದು, ಸೋಮವಾರದ ಒಳಗೆ ಅಂಗಡಿ ಯನ್ನು ತೆರವುಗೊಳಿಸುವಂತೆ ಸೂಚನೆ ನೀಡಿದ್ದು, ತಪ್ಪಿದಲ್ಲಿ ನಿಯಮಾನುಸಾರ ಬೀಗ ಜಡಿಯುವುದಾಗಿ ಎಚ್ಚರಿಸಿದ್ದಾರೆ.
-ಸಿಂಚು