ಮಡಿಕೇರಿ, ಅ. ೨೮: ಜಿಲ್ಲಾ ಕೇಂದ್ರ ಮಡಿಕೇರಿಯ ಗಾಂಧಿ ಮೈದಾನದಲ್ಲಿರುವ ಗಾಂಧಿ ಪ್ರತಿಮೆ ಸ್ಥಳವನ್ನು ಸ್ಮಾರಕ ಭವನ (ಉದ್ಯಾನವನ)ವನ್ನಾಗಿ ನಿರ್ಮಿಸುವ ಕಾಮಗಾರಿ ಇದೀಗ ಆರಂಭಗೊAಡಿದೆ.

ಈ ಕಾಮಗಾರಿಗೆ ಸರಕಾರದಿಂದ ರೂ. ೫೦ ಲಕ್ಷ ಬಿಡುಗಡೆಯಾಗಿದ್ದು, ಕಳೆದ ವಾರ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ನಿರ್ಮಿತಿ ಕೇಂದ್ರದ ಮೂಲಕ ಕಾಮಗಾರಿ ನಡೆಸಲಾಗುತ್ತಿದ್ದು, ಪ್ರಸ್ತುತ ಆರಂಭಿಕ ಹಂತದ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಸ್ಥಳದಲ್ಲಿದ್ದ ಗಾಂಧಿ ಪ್ರತಿಮೆಯನ್ನು ಇದೀಗ ತೆರವುಗೊಳಿಸಲಾಗಿದೆ. ಪ್ರತಿಮೆಯನ್ನು ಸದ್ಯಕ್ಕೆ ವಾರ್ತಾಭವನದಲ್ಲಿ ಇಡಲಾಗಿದೆ. ನಿರ್ಮಿತಿ ಕೇಂದ್ರ ಇದರ ನೀಲಿ ನಕಾಶೆಯನ್ನು ತಯಾರಿಸಿದ್ದು ಕೆಲವೊಂದು ಸಣ್ಣ-ಪುಟ್ಟ ಬದಲಾವಣೆಗಳೊಂದಿಗೆ ಸ್ಮಾರಕ ಭವನ ತಲೆ ಎತ್ತಲಿದೆ. ಇದು ಹಲವು ವರ್ಷಗಳ ಹಿಂದಿನ ಯೋಜನೆಯಾಗಿದ್ದು, ಇದೀಗ ಕಾಮಗಾರಿಗೆ ಚಾಲನೆ ದೊರೆತಂತಾಗಿದೆ.