ಕಣಿವೆ, ಅ. ೨೮ : ಕಾಡಂಚಿನ ಗ್ರಾಮಗಳ ಒಂದಿಷ್ಟು ರೈತರು ತಾವು ಸಾಕಿರುವ ಗೋವುಗಳಿಗೆ ಒಂದು ರೀತಿ ಶೋಷಣೆ ಮಾಡುತ್ತಾ ಪೋಷಣೆ ಮಾಡುತ್ತಿದ್ದಾರೆ. ಬೇಲಿಯನ್ನು ದಾಟಿ ನೆರೆ ಹೊರೆಯವರ ಭೂಮಿಗೆ ಹೋಗಿ ಬೆಳೆದಿರುವ ಕೃಷಿ ಫಸಲು ತಿನ್ನುತ್ತದೆ ಎಂದು ಬೇಲಿಯನ್ನು ದಾಟಲು ಆಗದೇ ಇರುವ ಹಾಗೆ ಮಾರುದ್ದದ ಮರದ ಕೋಲೊಂದನ್ನು ಗೋವುಗಳ ಕುತ್ತಿಗೆಗೆ ಕಟ್ಟುತ್ತಿರುವುದು ಸಾಮಾನ್ಯವಾಗಿ ಕಂಡು ಬರುವ ಚಿತ್ರಣವಾಗಿದೆ.
ಹಾರಂಗಿ ಹಿನ್ನೀರು ಪ್ರದೇಶದ ಕಲ್ಲೂರು, ಮಳೂರು, ಯಡವನಾಡು ಮೊದಲಾದ ಕಾಡಂಚಿನ ಗ್ರಾಮಗಳಲ್ಲಿ ತಾವು ಸಾಕಿರುವ ಹಸುಗಳಿಗೆ ಈ ರೀತಿ ಕೋಲು ತೂಗು ಹಾಕಿದಾಗ ಆ ಹಸುಗಳು ಜೋತು ಬಿದ್ದ ಆ ಕೋಲನ್ನು ಎಳೆದುಕೊಂಡು ರಸ್ತೆಯಲ್ಲಿ ಹೋಗಲು ಹಾಗೂ ರಸ್ತೆ ಬದಿಯಲ್ಲಿನ ಹುಲ್ಲು ಮೇಯಲು ಭಾರೀ ತ್ರಾಸ ಪಡುತ್ತಿರುವುದನ್ನು ಕಂಡ ಗೋವುಗಳ ಪ್ರೇಮಿಗಳಿಗೆ ಅಯ್ಯೋ ಏನಿದು ಈ ಪರಿ ಹಿಂಸೆ ಎನಿಸದೇ ಇರದು.
ಹಸುಗಳು ಹಾಕುವ ಸಗಣಿಯನ್ನು ಬೆಳೆಗೆ ಹಾಕುವ, ಅದು ನೀಡುವ ಹಾಲನ್ನು ಕುಡಿದು ಉತ್ತಮ ಆರೋಗ್ಯ ಪಡೆದುಕೊಳ್ಳುವ ಗೋಪಾಲಕರಿಗೆ ಹಾಲು ನೀಡುವ ಹಸುಗಳಿಗೆ ತಾವು ಚಿತ್ರ ಹಿಂಸೆ ನೀಡುತ್ತಿದ್ದೇವೆ ಎಂದೆನಿಸುವುದೇ ಇಲ್ಲವೇ? ಎಂಬ ಪ್ರಶ್ನೆ ಮೂಡುತ್ತದೆ.
ಗೋವುಗಳನ್ನು ಕಾಮಧೇನು ಎಂದು ಪೂಜಿಸುವ ಈ ನಾಡಿನಲ್ಲಿ ಈ ಅಮಾಯಕ ಮುಗ್ಧ ಜೀವಿಗಳಿಗೆ ಈ ಪರಿ ಹಿಂಸೆ ಕೊಟ್ಟು ಸಾಕಬೇಕೇ...?
ಮಾರುದ್ದದ ಹಾಗೂ ಒಂದಿಷ್ಟು ತೂಕವಿರುವ ಬಡಿಗೋಲನ್ನು ಎಳೆದುಕೊಂಡು ಹಸಿರು ಹುಲ್ಲಿನತ್ತ ಸಾಗಿ ಅದನ್ನು ಮೇಯುವಾಗ ಅದಕ್ಕಾಗುವ ನೋವು, ಯಾತನೆ, ಹಿಂಸೆಯ ಅರಿವು ಆ ಗೋಪಾಲಕರಿಗೆ ಇಲ್ಲದ ಮೇಲೆ ಆ ಮುಗ್ಧ ಪ್ರಾಣಿಗಳನ್ನು ಇವರು ಸಾಕಿ ಫಲವಿಲ್ಲ.
ಆದ್ದರಿಂದ ಗೋವುಗಳ ಪ್ರೇಮಿಗಳು ಇಂತಹ ನೋವು ನುಂಗಿ ಹಾಲು ಹಿಂಡುತ್ತಿರುವ ಗೋವುಗಳನ್ನು ಅವುಗಳು ಅನುಭವಿಸುತ್ತಿರುವ ಹಿಂಸೆಗಳಿAದ ಮುಕ್ತಗೊಳಿಸಬೇಕಿದೆ. ಅಥವಾ ಪಶುಪಾಲನಾ ಇಲಾಖೆ ಅಧಿಕಾರಿಗಳು ಇಂತಹ ಗೋಪಾಲಕರಿಗೆ ತಿಳುವಳಿಕೆ ನೀಡುವ ಮೂಲಕ ಮಾತು ಬಾರದ ಆ ಗೋವುಗಳಿಗೆ ಮಾತಾಗಬೇಕಿದೆ. -ವರದಿ : ಕೆ.ಎಸ್.ಮೂರ್ತಿ