ನಾಪೋಕ್ಲು, ಅ. ೨೮: ಪಾಡಿ ಶ್ರೀ ಇಗ್ಗುತ್ತಪ್ಪ ದೇವಸ್ಥಾನದಲ್ಲಿ ಶ್ರೀ ಇಗ್ಗುತ್ತಪ್ಪ ದೇವರ ಪರದಂಡ ಆರಾಧನೆ ಎಂದೇ ಪ್ರಸಿದ್ಧವಾಗಿರುವ ‘ಪತ್ತಾಲೋದಿ ಉತ್ಸವ’ ನಿನ್ನೆ ಶ್ರದ್ಧಾಭಕ್ತಿಯಿಂದ ಜರುಗಿತು.

ದೇವಸ್ಥಾನದ ನಮಸ್ಕಾರ ಮಂಟಪ, ಗರ್ಭಗುಡಿ, ಎಲ್ಲವೂ ಪುಷ್ಪಾಲಂಕಾರದಿAದ ಕಂಗೊಳಿಸುತ್ತಿತ್ತು. ಈ ಉತ್ಸವದ ಉಸ್ತುವಾರಿ, ಅನ್ನಸಂತರ್ಪಣೆ, ವಿಧಿ-ವಿಧಾನಗಳ ಅಂದಿನ ಖರ್ಚು-ವೆಚ್ಚ ಎಲ್ಲವನ್ನೂ ದೇವತಕ್ಕರಾದ ಹಾಗೂ ದೇಶತಕ್ಕರಾದ ಪರದಂಡ ಮನೆತನದವರು ಭರಿಸುತ್ತಾ ಬಂದಿದ್ದಾರೆ.

ಉತ್ಸವ ಸಂಪನ್ನವಾಗುವುದಕ್ಕೆ ಮುಂಚೆ ಸಂಪ್ರದಾಯದAತೆ ದೇವರ ನಾಟ್ಯಬಲಿಯ ನಂತರ ಹಲಸಿನ ಮರದ ಕೆಳಗೆ ದೇವತಕ್ಕರು ತುಲಾಭಾರ ಸೇವೆಗೈದ ಭಕ್ತರು ಹಾಗೂ ಕೊಡಗಿನ ಸರ್ವ ಭಕ್ತಾದಿಗಳ ಶ್ರೇಯೋಭಿವೃದ್ಧಿಗೆ ಪ್ರಾರ್ಥನೆ ಸಲ್ಲಿಸುವುದು ವಾಡಿಕೆ.

ಈ ಸಂದರ್ಭದಲ್ಲಿ ಕೊಡಗಿನ ದೇಶತಕ್ಕ ಕುಟುಂಬಕ್ಕೆ ಸೇರಿದ ಹಾಗೂ ದೇವಾಲಯದ ದೇವತಕ್ಕರೂ ಆಗಿರುವ ಪರದಂಡ ಕುಟುಂಬಸ್ಥರು ಕಾವೇರಿ ತೀರ್ಥೋದ್ಭವ ಕಳೆದು ೧೦ನೇ ದಿವಸ ಜರುಗುವ ‘ಪತ್ತಾಲೋದಿ’ಯ ದಿನವನ್ನೇ ಉತ್ಸವಕ್ಕಾಗಿ ಆಯ್ಕೆ ಮಾಡಿರುವ ದಿನ ವಿಶೇಷವನ್ನು ವಿವರಿಸಲಾಯಿತು. ಅಲ್ಲದೆ, ಕೊಡಗಿನ ಸರ್ವ ಸಮುದಾಯದ ಭಕ್ತ ಜನರ ಶ್ರೇಯೋಭಿವೃದ್ಧಿಗೆ ಕೊಡಗಿನಲ್ಲಿ ಹಸಿರು ನೆಲೆಸಿ, ಸುಭಿಕ್ಷೆ, ಸಮೃದ್ಧಿ, ನೆಮ್ಮದಿಯಿಂದ ಕೂಡಿರುವಂತೆ ದೇವತಕ್ಕರಿಂದ ಪ್ರಾರ್ಥನೆ ನೆರವೇರಿತು.

ತಲಕಾವೇರಿಗೆ ಆಗಮಿಸಿದ್ದ ಅನೇಕ ಭಕ್ತಾದಿಗಳು, ಅಲ್ಲಿ ಪೂಜಾ ಕೈಂಕರ್ಯ ಮುಗಿಸಿ, ಪಾಡಿಗೆ ಆಗಮಿಸಿದ್ದು ವಿಶೇಷವಾಗಿತ್ತು.