ಸಿದ್ದಾಪುರ, ಅ. ೨೮: ಹಲವು ವರ್ಷಗಳಿಂದ ಅಭಿವೃದ್ಧಿ ಕಾಣದ ಸಿದ್ದಾಪುರ ವೀರಾಜಪೇಟೆ ಮುಖ್ಯ ರಸ್ತೆಯನ್ನು ಅಭಿವೃದ್ಧಿಪಡಿಸಬೇಕೆಂದು ಸ್ಥಳೀಯರು ಶಾಸಕ ಪೊನ್ನಣ್ಣ ಅವರನ್ನು ಮನವಿ ಮಾಡಿದ ಹಿನ್ನೆಲೆಯಲ್ಲಿ ಇದೀಗ ಅಪಘಾತ ವಲಯಗಳ ರಸ್ತೆ ಅಭಿವೃದ್ಧಿ ಯೋಜನೆಯ ಮೂಲಕ ಲೋಕೋಪಯೋಗಿ ಇಲಾಖೆ ಅಂದಾಜು ರೂ. ೨ ಕೋಟಿ ವೆಚ್ಚದಲ್ಲಿ ಒಂದು ಕಿಲೋ ಮೀಟರ್‌ನಷ್ಟು ಅಗಲೀಕರಣ ಹಾಗೂ ಡಾಮರೀಕರಣ ಅಭಿವೃದ್ಧಿ ಕಾರ್ಯಕೈಗೆತ್ತಿಕೊಂಡಿದ್ದು ವೀರಾಜಪೇಟೆ ತಾಲೂಕಿನ ಆನಂದಪುರ ಬಳಿ ಶಾಸಕ ಎ.ಎಸ್. ಪೊನ್ನಣ್ಣ, ಭೂಮಿಪೂಜೆ ನೆರವೇರಿಸಿದರು.

ನಂತರ ‘ಶಕ್ತಿ’ಯೊಂದಿಗೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಗುಣಮಟ್ಟದ ಕಾಮಗಾರಿಗಳನ್ನು ಮಾಡಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಜನರ ಸಮಸ್ಯೆಗಳನ್ನು ಅರಿತು ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು ಎಂದರು. ಈ ಸಂದರ್ಭ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜಿ ಪೂಣಚ್ಚ, ಸ್ಥಳೀಯ ನಿವಾಸಿ ಜಾನ್ಸನ್, ಅಮ್ಮತಿ ಗ್ರಾಮ ಪಂಚಾಯಿತಿ ಸದಸ್ಯೆ ನಿಶ್ಚಿತ, ವಲಯ ಕಾಂಗ್ರೆಸ್ ಅಧ್ಯಕ್ಷ ದಿವಾಕರ್, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಜಾನ್ಸನ್, ಸ್ಥಳೀಯರಾದ ಕಾವೇರಪ್ಪ, ವಿನಯ್ ಕುಮಾರ್, ಸುರೇಶ್, ಸುಮಂತ್ ಸೇರಿದಂತೆ ಮತ್ತಿತರರು ಇದ್ದರು.