ಗೋಣಿಕೊಪ್ಪ ವರದಿ, ಅ. ೨೯: ಬಿ. ಶೆಟ್ಟಿಗೇರಿ ಗ್ರಾಮದಲ್ಲಿ ಮುಂಜಾನೆ ಕಾಡಾನೆ ಹಿಂಡು ದಾಳಿ ನಡೆಸಿ ಸುಮಾರು ೩ ಎಕರೆ ಬೆಳೆ ನಾಶ ಮಾಡಿದ್ದು, ಸುಮಾರು ೬ ಲಕ್ಷ ರೂ. ನಷ್ಟವಾಗಿದೆ.

ಗ್ರಾಮದ ಕಾಳೇಂಗಡ ಮಧು ಮಂದಣ್ಣ, ಕಣಿಯರ ಪೆಮ್ಮಯ್ಯ, ಕಾಳೇಂಗಡ ಬೋಪಣ್ಣ, ಬಂಟರ ರವಿಗೆ ಸೇರಿದ ಗದ್ದೆ ಮತ್ತು ತೋಟಕ್ಕೆ ನುಗ್ಗಿರುವ ಆನೆಗಳು ಭತ್ತ, ಕಾಫಿ, ಅಡಿಕೆ ಬೆಳೆಯನ್ನು ನಾಶ ಮಾಡಿವೆ. ಕೊಯ್ಲಿಗೆ ಬಂದಿರುವ ಸುಮಾರು ೩ ಎಕರೆ ಭತ್ತ ಬೆಳೆ ನಾಶವಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ ಉಪ ವಲಯ ಅರಣ್ಯ ಅಧಿಕಾರಿ ಸಚಿನ್ ಮಾತನಾಡಿ, ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಬೆಳೆಗಾರ ಮಧು ಮಂದಣ್ಣ ಮಾತನಾಡಿ, ಶನಿವಾರ ಸಮೀಪದ ಬೇಗೂರು -ಹರಿಹರ ಗ್ರಾಮದಲ್ಲಿ ಸೇರಿಕೊಂಡಿದ್ದ ಆನೆಗಳನ್ನು ಅರಣ್ಯ ಇಲಾಖೆ ವತಿಯಿಂದ ಕಾಡಿಗಟ್ಟುವ ಕಾರ್ಯಾಚರಣೆ ನಡೆಸಿತ್ತು. ಅಲ್ಲಿ ಸೇರಿಕೊಂಡಿದ್ದ ಆನೆಗಳು ನಮ್ಮ ಗ್ರಾಮಕ್ಕೆ ಬಂದು ನಾಶ ಮಾಡಿವೆ. ಸರ್ಕಾರ ನಷ್ಟ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.