ಮುಳ್ಳೂರು, ಅ. ೨೯: ಗಣೇಶ ಹಬ್ಬದ ಪ್ರಯುಕ್ತ ಶನಿವಾರಸಂತೆ ತ್ಯಾಗರಾಜ ಕಾಲೋನಿಯ ವಿಜಯ ವಿನಾಯಕ ಯುವಕ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಮೂರ್ತಿಯ ಅದ್ಧೂರಿ ಶೋಭಾಯಾತ್ರೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಕಾಜೂರು ಗ್ರಾಮದ ಕಾಜೂರು ಹೊಳೆ ಯಲ್ಲಿ ವಿಸರ್ಜನೆ ಮಾಡಲಾಯಿತು.

ಶನಿವಾರ ನಡೆದ ಗಣೇಶಮೂರ್ತಿ ವಿಸರ್ಜನೆ ಕಾರ್ಯಕ್ರಮದ ಅಂಗವಾಗಿ ಪ್ರತಿಷ್ಠಾಪಿಸಿದ ಶ್ರೀ ವಿಜಯ ವಿನಾಯಕ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ವಿಶೇಷ ಪೂಜೆ, ಹೋಮ ಹವನ ನಡೆಸಲಾಯಿತು. ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗದೊಂದಿಗೆ ಪೂಜಾ ಕಾರ್ಯಕ್ರಮವನ್ನು ಸಂಪನ್ನ ಗೊಳಿಸಲಾಯಿತು. ದೇವಸ್ಥಾನ ಸಮಿತಿ ಮತ್ತು ವಿಜಯ ವಿನಾಯಕ ಸೇವಾ ಸಂಘದ ವತಿಯಿಂದ ಮಧ್ಯಾಹ್ನದಿಂದ ಸಂಜೆಯವರೆಗೂ ಸಾವಿರಾರು ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು.

ಮಡಿಕೇರಿ ದಸರಾದಲ್ಲಿ ನಡೆಸಲಾಗುವ ವಿವಿಧ ಮಂಟಪಗಳ ಶೋಭಯಾತ್ರೆ ಮಾದರಿಯಲ್ಲಿ ಗೌರಿ-ಗಣೇಶನ ವಿಸರ್ಜನಾ ಮೆರವಣಿಗೆಯನ್ನು ನಡೆಸಲಾಯಿತು. ಅಲಂಕರಿಸಿದ ವಾಹನದಲ್ಲಿದ್ದ ಗೌರಿ-ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಗಣೇಶನ ವಿವಿಧ ಅವತಾರದ ಬೃಹತ್ ಮಾದರಿಗಳನ್ನು ಪ್ರತ್ಯೇಕ ವಾಹನಗಳಲ್ಲಿ ಅಳವಡಿಸಿ ವಿದ್ಯುತ್ ಅಲಂಕಾರದಿAದ ಕಂಗೊಳಿಸುತಿತ್ತು. ಶೋಭಾಯಾತ್ರೆ ಸಂದರ್ಭ ಕೀಲು ಕುದುರೆ, ಗೊಂಬೆ ಕುಣಿತ, ಡೊಳ್ಳು ಕುಣಿತ, ಸುಗ್ಗಿ ಕುಣಿತ, ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ನಡೆಸಲಾಯಿತು. ತ್ಯಾಗರಾಜ ಕಾಲೋನಿಯ ವಿಜಯ ವಿನಾಯಕ ದೇವಸ್ಥಾನದಿಂದ ಹೊರಟ ಶೋಭಾಯಾತ್ರೆಯು ಕೆಆರ್‌ಸಿ ವೃತ್ತ, ಮುಖ್ಯ ರಸ್ತೆ, ಮಧ್ಯಪೇಟೆ, ಚಂದ್ರಮೌಳೇಶ್ವರ ಗಣಪತಿ ದೇವಸ್ಥಾನ ಮೂಲಕ ಬೈಪಾಸ್ ರಸ್ತೆ ಮೂಲಕ ಚಂಗಡಹಳ್ಳಿ ರಸ್ತೆ ಮೂಲಕವಾಗಿ ಕಾಜೂರು ಗ್ರಾಮದ ಹೊಳೆಯಲ್ಲಿ ರಾತ್ರಿ ೧೨ ಗಂಟೆ ಸಮಯದಲ್ಲಿ ವಿಸರ್ಜನೆ ಮಾಡಲು ಆಯೋಜಕರು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ರಾತ್ರಿ ೧೦ ಗಂಟೆಗೆ ಮುಖ್ಯರಸ್ತೆಯಲ್ಲಿ ಶೋಭಾಯಾತ್ರೆ ತೆರಳುತ್ತಿದ್ದ ಸಂದರ್ಭ ಪೊಲೀಸರು ಆಗಮಿಸಿ ಡಿಜೆ ಮೆರವಣಿಗೆಯನ್ನು ಸ್ಥಗಿತಗೊಳಿಸಿದರು. ಇದರಿಂದ ಮೆರವಣಿಗೆಯಲ್ಲಿ ಪಾಲ್ಗೊಂಡವರು ನಿರಾಸೆಗೊಂಡರು. ಆಯೋಜಕರು ಕುಶಾಲನಗರ ಡಿವೈಎಸ್‌ಪಿ ಅವರಿಗೆ ಪ್ರದರ್ಶನಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿದ ಹಿನ್ನೆಲೆ ಅವರು ಪ್ರದರ್ಶನಕ್ಕೆ ಅವಕಾಶ ನೀಡಿದರು. ರಾತ್ರಿ ೧೧ ಗಂಟೆಗೆ ಗೌರಿ-ಗಣೇಶ ಮೂರ್ತಿಯನ್ನು ಕಾಜೂರು ಹೊಳೆಯಲ್ಲಿ ವಿಸರ್ಜಿಸಲಾಯಿತು, ಮೆರವಣಿಗೆಯಲ್ಲಿ ಪಟ್ಟಣ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಿಂದ ೧೦ ಸಾವಿರಕಿಂತ ಹೆಚ್ಚಿನ ಭಕ್ತರು ಪಾಲ್ಗೊಂಡಿದ್ದರು.