ಮಡಿಕೇರಿ, ಅ. ೨೯: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಬೆಂಗಳೂರು, ಕೊಡಗು ಜಿಲ್ಲಾ ಸಹಕಾರ ಯೂನಿಯನ್, ಮಡಿಕೇರಿ ಹಾಗೂ ಸಹಕಾರ ಇಲಾಖೆ, ಕೊಡಗು ಜಿಲ್ಲೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ಪ್ಯಾಕ್ಸ್, ಎ.ಪಿ.ಸಿ.ಎಂ.ಎಸ್. ಮತ್ತು ಲ್ಯಾಂಪ್ಸ್ ಸಹಕಾರ ಸಂಘಗಳ ಕಾರ್ಯ ನಿರ್ವಾಹಕರಿಗೆ ಕೇಂದ್ರ ಸರ್ಕಾರದ ಸಹಕಾರ ಇಲಾಖೆಯ ನೂತನ ೧೩ ಯೋಜನೆಗಳ ಕುರಿತು ಶಿಕ್ಷಣ ಕಾರ್ಯಕ್ರಮವನ್ನು ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎ.ಕೆ. ಮನು ಮುತ್ತಪ್ಪ ಕೇಂದ್ರ ಸರ್ಕಾರವು ದೇಶದ ಎಲ್ಲಾ ಸಹಕಾರ ಸಂಘಗಳಿಗೆ ಅನ್ವಯಿಸುವಂತೆ ಏಕರೂಪದ ಉಪನಿಯಮವನ್ನು ಜಾರಿಗೆ ತರುತ್ತಿದ್ದು ಆ ಮೂಲಕ ಸಂಘವು ಹಲವು ಉದ್ದೇಶಗಳನ್ನು ಹೊಂದಿ ಅವುಗಳನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುತ್ತಿದೆ. ಸಂಘಗಳು ತಮ್ಮ ದೈನಂದಿನ ಕಾರ್ಯ ಚಟುವಟಿಕೆಯೊಂದಿಗೆ ಬಹು ಆದಾಯಾಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳುವಂತೆ ಉತ್ತೇಜಿಸುತ್ತಿದೆ. ಈ ದಿಸೆಯಲ್ಲಿ ಸಹಕಾರ ಸಂಘಗಳ ಕಾರ್ಯನಿರ್ವಾಹಕರಿಗೆ ಈ ಕುರಿತು ಸಮಗ್ರ ಮಾಹಿತಿಯ ಅವಶ್ಯಕತೆ ಇರುವು ದರಿಂದ ನಾವು ಇಂತಹ ಶಿಕ್ಷಣ ಕಾರ್ಯಕ್ರಮವನ್ನು ಉಪನಿಬಂಧಕರ ಆಸಕ್ತಿ ಮೇರೆಗೆ ನಡೆಸಲಾಗುತ್ತಿದೆ ಎಂದರು. ಕಾರ್ಯಕ್ರಮದ ಉದ್ಘಾಟನೆ ಯನ್ನು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಹಾಗೂ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಕನ್ನಂಡ ಸಂಪತ್ ನೆರವೇರಿಸಿದರು.

ಸಹಕಾರ ಸಂಘಗಳ ಉಪನಿಬಂಧಕ ಎಂ.ಎಸ್. ಕೃಷ್ಣ ಪ್ರಸಾದ್ ಕೇಂದ್ರ ಸರ್ಕಾರದ ಸಹಕಾರ ಇಲಾಖೆಯ ೧೩ ಯೋಜನೆಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಂ.ಈ. ಮೋಹನ್ ಸಹಕಾರ ಕಾಯ್ದೆ, ಕಾನೂನು ತಿದ್ದುಪಡಿ, ಸಹಕಾರ ಚುನಾವಣೆ ಹಾಗೂ ಆಡಳಿತ ನಿರ್ವಹಣೆ ಕುರಿತು ಮಾಹಿತಿ ನೀಡಿದರು.

ಕೃಷಿ ಇಲಾಖೆಯ ನಾರಾಯಣ ಗೌಡ ಕಾಮನ್ ಸರ್ವಿಸ್ ಸೆಂಟರ್ ಸ್ಥಾಪಿಸುವ ಕುರಿತು, ಗೊಬ್ಬರದ ಪರವಾನಗಿ ಪಡೆದುಕೊಳ್ಳಲು ಇರುವ ಮಾನದಂಡಗಳ ಬಗ್ಗೆ, ‘ಫ್ರೂಟ್ಸ್’ ತಂತ್ರಾAಶದ ಬಗ್ಗೆ ಮಾಹಿತಿಯಿತ್ತರು.

ವೇದಿಕೆಯಲ್ಲಿ ಯೂನಿಯನ್ ನಿರ್ದೇಶಕರಾದ ಎನ್.ಎ. ರವಿ ಬಸಪ್ಪ, ಪಿ.ಸಿ. ಅಚ್ಚಯ್ಯ, ಕೆ.ಎಸ್. ಗಣಪತಿ, ಕೆ.ಎಂ. ತಮ್ಮಯ್ಯ, ವಿ.ಕೆ. ಅಜಯ್ ಕುಮಾರ್, ಪಿ.ಬಿ. ಯತೀಶ್, ಸಹಕಾರ ಅಭಿವೃದ್ಧಿ ಅಧಿಕಾರಿ ಪಿ.ಬಿ. ಮೋಹನ್, ಬಿ.ಕೆ. ವಿಜಯೇಂದ್ರ ಅಧೀಕ್ಷಕರಾದ ಆಶಾ, ಮಾರಾಟಾಧಿಕಾರಿ ಸಿದ್ದಲಿಂಗ ಮೂರ್ತಿ ಹಾಗೂ ಸಹಕಾರ ಇಲಾಖೆಯ ಅಧಿಕಾರಿ ವರ್ಗದವರು ಹಾಜರಿದ್ದರು. ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ನಿರೂಪಿಸಿ, ಸ್ವಾಗತಿಸಿದರು.