ಶನಿವಾರಸಂತೆ, ನ. ೨: ಪಟ್ಟಣದಿಂದ ೮ ಕಿ.ಮೀ. ದೂರವಿರುವ ಗಡಿಭಾಗ ನೆರೆಯ ಹಾಸನ ಜಿಲ್ಲೆಯ, ಸಕಲೇಶಪುರ ತಾಲೂಕಿನ, ಯಸಳೂರು ಹೋಬಳಿಯ, ಹೊಸೂರು ಗ್ರಾಮದ ಕಲ್ಲಪ್ಪನಹಳ್ಳಿ ಗುಡ್ಡದ ಮೇಲೆ ನಾಲ್ಕು ಶತಮಾನಗಳ ಹಿಂದೆ ನಿರ್ಮಿಸಲ್ಪಟ್ಟ ಜೈನ ಬಸದಿಯೊಂದು ಬೆಳಕಿಗೆ ಬಂದು ೧೯ ವರ್ಷಗಳು ಉರುಳಿದ್ದು, ಕಾಯಕಲ್ಪದ ನಿರೀಕ್ಷೆಯಲ್ಲಿದೆ.

ಕಾಡು, ಪೊದೆ, ಬಿದಿರು ಮೆಳೆಗಳಿಂದ ಸಂಪೂರ್ಣ ಆವರಿಸಿ ಮುಚ್ಚಿ ಹೋಗಿದ್ದ ೧೬ ಅಡಿ ಉದ್ದ, ೧೦ ಅಡಿ ಅಗಲ ಹಾಗೂ ೮ ಅಡಿ ಎತ್ತರವಿರುವ ಈ ಜೈನ ದೇಗುಲ ೨೦೦೩ ರಲ್ಲಿ ಹೊಸೂರು ಗ್ರಾಮದ ಪರಿಸರ ಹೋರಾಟಗಾರ, ಹೇಮಾವತಿ ಸಂಘಟನೆ ಅಧ್ಯಕ್ಷ ಹೆಚ್.ಕೆ. ರಮೇಶ್ ವಾಯು ವಿಹಾರಕ್ಕೆ ತೆರಳಿದ್ದಾಗ ಗುಡ್ಡದ ಮೇಲಿದ್ದ ಜೈನ ಬಸದಿ ಕಣ್ಣಿಗೆ ಗೋಚರಿಸಿತ್ತು. ಗೆಳೆಯರ ಜೊತೆಗೂಡಿ ಬಸದಿಯ ಸುತ್ತಲಿನ ಪೊದೆ, ಕಾಡು ಕಡಿದು ಸ್ವಚ್ಛಗೊಳಿಸಿದರು.

ಬಸದಿಯ ಒಳಭಾಗದಲ್ಲಿದ್ದ ಕಲ್ಲು ಚಪ್ಪಡಿಗಳನ್ನು ಕೀಳಲಾಗಿದೆ. ಯಾರೋ ಚಿನ್ನಾಭರಣಗಳ ನಿಧಿ ಇರಬಹುದು ಎಂಬ ಕಲ್ಪನೆಯಿಂದ ಕಿತ್ತಿರಬಹುದು ಎನ್ನುತ್ತಾರೆ ರಮೇಶ್. ರಮೇಶ್ ನೇತೃತ್ವದಲ್ಲಿ ಗ್ರಾಮದ ಉತ್ಸಾಹಿ ಯುವಕರು ಶ್ರಮದಾನ ಮಾಡಿ ಬಸದಿಯ ಸುತ್ತ ೪ ಅಡಿ ಎತ್ತರ, ೩೦ ಅಡಿ ಉದ್ದ ಹಾಗೂ ೪೦ ಅಡಿ ಅಗಲದ ಕಲ್ಲು ಮಣ್ಣಿನ ಕಟ್ಟೆ ನಿರ್ಮಿಸಿದ್ದಾರೆ. ಸಂಜೆ ವಾಯು ವಿಹಾರಕ್ಕೆ ಹೋದವರು ಬಸದಿಯ ಎದುರು ನಿಂತಾಗ ಸೂರ್ಯಾಸ್ತದ ಸುಂದರ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ಹೊಸೂರು ಗ್ರಾಮದ ಬಸ್ ನಿಲ್ದಾಣದಿಂದ ಅರ್ಧ ಕಿ.ಮೀ.ದೂರ ಸಾಗಿ ಬೆಟ್ಟವನ್ನೇರಿದರೆ ಕೆಲ ವರ್ಷಗಳ ಹಿಂದೆ ಜೀರ್ಣೋದ್ಧಾರಗೊಂಡಿರುವ ಚೋಳರ ಕಾಲದ ಬೆಟ್ಟದ ಶ್ರೀ ಬಸವೇಶ್ವರ ದೇವಸ್ಥಾನದ ದರ್ಶನ ಭಾಗ್ಯ ಲಭಿಸುತ್ತದೆ. ಐತಿಹಾಸಿಕ ಹಿನ್ನಲೆ ಇರುವ ದೇವಸ್ಥಾನದಲ್ಲಿ ಪ್ರತಿ ವರ್ಷ ಕವಟೆಕಾಯಿ ಜಾತ್ರೆ ನಡೆಯುತ್ತದೆ. ಜಾತ್ರೆಗೆ ಮೈಸೂರು, ಬೆಂಗಳೂರು, ಹಾಸನ ಇತರ ಊರುಗಳಿಂದಲೂ ಭಕ್ತಜನರು ಬರುತ್ತಾರೆ.

ಈ ಬಸವೇಶ್ವರ ದೇವಸ್ಥಾನದಿಂದ ೨೦೦ ಮೀಟರ್ ಬೆಟ್ಟವೇರಿದರೆ ಮೌನವಾಗಿ ನಿಂತಿರುವ ಜೈನ ಬಸದಿ ಸ್ವಾಗತಿಸುತ್ತದೆ. ಬಸದಿಯ ಮುಖ್ಯ ದ್ವಾರದ ನೆತ್ತಿಯಲ್ಲಿ ತೀರ್ಥಂಕರರೊಬ್ಬರ ಕೆತ್ತನೆ ಹಾಗೂ ಹೊಯ್ಸಳರ ಲಾಂಛನ ಇದೆ. ಗರ್ಭಗುಡಿಯೊಳಗೆ ನಕ್ಷತ್ರಾಕಾರದ ಮೇಲ್ಛಾವಣಿಯಿದ್ದು ಅಮೃತ ಶಿಲೆಯೆಂದು ಹೇಳಲಾಗುವ ಪೀಠ ಹಾಗೂ ಊನಗೊಂಡಿರುವ ಕೆಲ ವಿಗ್ರಹಗಳಿವೆ. ಬಸದಿ ಒಳಭಾಗವನ್ನು ಚಪ್ಪಡಿಯಂತಿರುವ ಸುಟ್ಟ ಇಟ್ಟಿಗೆ ಮತ್ತು ಸುಣ್ಣ ಬಳಸಿ ಕಟ್ಟಲಾಗಿದೆ. ಬಸದಿ ಮುಂಭಾಗ ತೀರ್ಥಂಕರರ ಪ್ರತಿರೂಪ ಹೊಂದಿರುವ ಮೂರು ಶಿಲಾ ಶಾಸನಗಳಿದ್ದು ಕಟ್ಟೆಯಲ್ಲಿ ಇರಿಸಲಾಗಿದೆ. ಅನತಿ ದೂರದಲ್ಲಿ ಇರುವ ದಿಬ್ಬವನ್ನು ಪ್ರಕೃತಿ ವೀಕ್ಷಣಾ ಗೋಪುರ ಮಾಡುವ ಕನಸು ಕಾಣುತ್ತಿರುವ ರಮೇಶ್ ಮತ್ತು ಅವರ ಗೆಳೆಯರ ಬಳಗ ಬಸದಿಯ ಸ್ಥಳವನ್ನು ಪ್ರವಾಸಿ ತಾಣವನ್ನಾಗಿಸುವ ಪಣ ತೊಟ್ಟಿದೆ. ಹಾಸನದ ಜೈನಧರ್ಮದ ಮುಖಂಡರು ಹಾಗೂ ಖ್ಯಾತ ಸಾಹಿತಿ ಹಂಪನಾ ಈ ಜೈನ ದೇವಾಲಯಕ್ಕೆ ಭೇಟಿ ನೀಡಿ ಪ್ರವಾಸಿ ತಾಣವಾಗಿಸುವುದಾಗಿ ತಿಳಿಸಿದ್ದಾರೆ ಎಂದು ರಮೇಶ್ ಮಾಹಿತಿ ನೀಡಿದ್ದಾರೆ. ಸರ್ಕಾರ ಹಾಗೂ ಪುರಾತತ್ವ ಇಲಾಖೆ ಸಿರಿ ಹಸಿರ ಪ್ರಕೃತಿಯ ಮಡಿಲಲ್ಲಿರುವ ಬಸದಿಯ ಬಗ್ಗೆ ಮತ್ತಷ್ಟು ಸಂಶೋಧನೆ ನಡೆಸಿ ಬೆಳಕು ಚೆಲ್ಲಬೇಕು ಎಂಬುದು ರಮೇಶ್ ಹಾಗೂ ಅವರ ಗೆಳೆಯರ ಬಳಗ, ಗ್ರಾಮಸ್ಥರ ಬೇಡಿಕೆಯಾಗಿದೆ. ಪ್ರಾಚೀನ ಜೈನ ಬಸದಿಯ ಜೀರ್ಣೋದ್ಧಾರವಾಗಬೇಕು. ಬಸದಿ ಬಳಿ ಗಿಡಗಳನ್ನು ಬೆಳೆಸುತ್ತಿದ್ದು ಇದೊಂದು ಸುಂದರ ಪ್ರವಾಸಿ ತಾಣವಾಗಬೇಕು. ಮೊದಲಿಗೆ ಬಸದಿ ಹಾಗೂ ಶ್ರೀ ಬಸವೇಶ್ವರ ದೇವಸ್ಥಾನದ ರಸ್ತೆ ದುರಸ್ತಿಯಾಗಿ ಅಭಿವೃದ್ಧಿ ಹೊಂದಿದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾದೀತು ಎಂದು ರಮೇಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

- ಶ.ಗ. ನಯನತಾರಾ