‘ಅದೃಷ್ಟವಿದ್ದರೆ ಸಿಎಂ ಆಗುವ ಆಸೆ ಇದೆ : ಪರಮೇಶ್ವರ್
ಬೆಂಗಳೂರು, ನ. ೩: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಇನ್ನೂ ಆರು ತಿಂಗಳು ಕಳೆದಿಲ್ಲ. ಆಗಲೇ ಮುಖ್ಯಮಂತ್ರಿ ಬದಲಾವಣೆ, ಆಕಾಂಕ್ಷಿಗಳು ಸುತ್ತ ನಡೆಯುತ್ತಿರುವ ಚರ್ಚೆಯಿಂದ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಜಗಜ್ಜಾಹೀರಾಗಿದೆ. ಐದು ವರ್ಷ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ ನಂತರ ನಾಯಕತ್ವ ಬದಲಾವಣೆ ಮಾತುಗಳನ್ನು ತಳ್ಳಿಹಾಕಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ತಾವು ಕೂಡಾ ಸಿಎಂ ಹುದ್ದೆ ಅಲಂಕರಿಸುವ ಬಯಕೆಯನ್ನು ಮುಚ್ಚಿಡಲಿಲ್ಲ. ಸಿದ್ದರಾಮಯ್ಯ ಹೊರತು ಪಡಿಸಿದರೆ, ಪರಮೇಶ್ವರ್ ಅವರೇ ಸಿಎಂ ಆಗಬೇಕು ಅಂತ ಬಯಸುತ್ತೇವೆ ಎಂಬ ಸಹಕಾರ ಸಚಿವ ಕೆಎನ್ ರಾಜಣ್ಣ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಡಾ. ಜಿ. ಪರಮೇಶ್ವರ್, ನನಗೂ ಸಿಎಂ ಆಗುವ ಆಸೆ ಇದೆ. ಅದೃಷ್ಟವಿದ್ದರೆ ಮುಂದಿನ ದಿನಗಳಲ್ಲಿ ಅಂತಹ ಅದೃಷ್ಟ ಕೂಡಿಬರಬಹುದು ಎಂದು ನಂಬಿಕೆ ಹೊಂದಿದ್ದೇನೆ. ಅದೃಷ್ಟಕ್ಕೆ ಪೂರಕವಾಗಿ ಕೆಲಸ ಮಾಡುತ್ತೇವೆ. ಅದರಲ್ಲಿ ಯಾವುದೇ ಸಂಶಯವಿಲ್ಲ ಎಂದರು. ನನಗೂ ಆ ಭಾಗ್ಯ ಸಿಗಲಿ ಎಂಬ ಆಸೆ ಇದೆ. ಆದರೆ, ಯಾವಾಗ ಸಿಎಂ ಸ್ಥಾನ ಸಿಗುತ್ತದೆ ಎಂಬುದು ಗೊತ್ತಿಲ್ಲ. ಪಕ್ಷದಲ್ಲಿ ಸಿಎಂ ಸ್ಥಾನಕ್ಕೆ ಅನೇಕ ಅರ್ಹ ಅಭ್ಯರ್ಥಿಗಳಿದ್ದಾರೆ. ಎಲ್ಲರಿಗೂ ಅವಕಾಶ ಸಿಗಲಿ ಎಂದು ಪರಮೇಶ್ವರ್ ಹೇಳಿದರು. ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತುಮಕೂರಿನ ಮನೆಗೆ ಭೇಟಿ ನೀಡಿದಾಗ ಈ ವಿಷಯದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಅವರು ನಿರಾಕರಿಸಿದರು. ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಾಟಕ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಸಿಎಂ ಬದಲಾವಣೆ ವಿಷಯವನ್ನು ದೆಹಲಿಯಲ್ಲಿ ನಾಲ್ಕು ಜನರು ನಿರ್ಧರಿಸುತ್ತಾರೆ. ಆ ನಾಲ್ಕು ಜನರನ್ನು ಬಿಟ್ಟರೆ ಯಾರೇ ಮಾತಾಡಿದರೂ ಬೆಲೆಯಿಲ್ಲ. ಹೈಕಮಾಂಡ್ ನಾನೇ ಮುಖ್ಯಮಂತ್ರಿ ಎಂದು ಹೇಳಿದರೆ, ಅದಕ್ಕೆ ನಾನು ಹೌದು ಎಂದು ಹೇಳುತ್ತೇನೆ ಎಂದು ಹೇಳಿದ್ದಾರೆ.
ತಮಿಳುನಾಡಿಗೆ ನಿತ್ಯ ೨,೬೦೦ ಕ್ಯೂಸೆಕ್ಸ್ ನೀರು ಬಿಡುಗಡೆಗೆ ಆದೇಶ
ಬೆಂಗಳೂರು, ನ. ೩: ತಮಿಳುನಾಡಿಗೆ ಮತ್ತೆ ನೀರು ಬಿಡುಗಡೆ ಮಾಡುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಕರ್ನಾಟಕಕ್ಕೆ ಆದೇಶಿಸಿದೆ. ದೆಹಲಿಯಲ್ಲಿಂದು ನಡೆದ ಸಭೆಯಲ್ಲಿ ನವೆಂಬರ್ ೧ ರಿಂದ ೧೫ ರವರೆಗೆ ನಿತ್ಯ ೨,೬೦೦ ಕ್ಯೂಸೆಕ್ ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂಬ ಕಾವೇರಿ ನೀರು ನಿಯಂತ್ರಣಾ ಸಮಿತಿ ಆದೇಶವನ್ನು ಒಪ್ಪದ ಕರ್ನಾಟಕ, ತಮಿಳುನಾಡಿಗೆ ನೀರು ಬಿಡುಗಡೆ ಸಾಧ್ಯವಿಲ್ಲ ಎಂದು ವಾದಿಸಿತು. ಕೆಆರ್ಎಸ್ ಒಳಹರಿವು ಶೂನ್ಯವಾಗಿದೆ. ಎಲ್ಲ ಜಲಾಶಯಗಳು ಸೇರಿ ೫೧ ಟಿಎಂಸಿ ನೀರು ಮಾತ್ರ ಲಭ್ಯವಿದೆ. ಕುಡಿಯುವುದಕ್ಕೂ ನೀರಿನ ಕೊರತೆ ಉಂಟಾಗಲಿರುವುದರಿAದ ಮಿಕ್ಕಿರುವ ನೀರನ್ನು ಸಂರಕ್ಷಣೆ ಮಾಡಿಕೊಳ್ಳಲೇಬೇಕಾಗಿದ್ದು, ನೀರು ಬಿಡುಗಡೆ ಸಾಧ್ಯವಿಲ್ಲ ಎಂದು ವಾದಿಸಿದ ಕರ್ನಾಟಕ ಅಧಿಕಾರಿಗಳು, ಮೇಕೆದಾಟು ಯೋಜನೆ ಚರ್ಚೆಗೆ ಪಟ್ಟು ಹಿಡಿದರು. ಆದರೆ, ನವೆಂಬರ್ ೧ ರಿಂದ ನವೆಂಬರ್ ೨೩ ರವರೆಗೂ ನಿತ್ಯ ೨,೬೦೦ ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಬೇಕೆಂದು ಕರ್ನಾಟಕಕ್ಕೆ ಸೂಚಿಸಿದ ಪ್ರಾಧಿಕಾರ, ತಮಿಳುನಾಡು ವಿರೋಧದ ನಡುವೆ ಮೇಕೆದಾಟು ಯೋಜನೆ ಕುರಿತು ಚರ್ಚೆಯನ್ನು ಒಪ್ಪಿಕೊಂಡಿತು.
ಛತ್ತೀಸ್ಘಢ ಬಿಜೆಪಿ ಪ್ರಣಾಳಿಕೆ ಬಿಡುಗಡೆ: ಹಲವು ಭರವಸೆ
ರಾಯಪುರ, ನ. ೩: ಮುಂಬರುವ ಛತ್ತೀಸ್ಗಢ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ವಿವಾಹಿತ ಮಹಿಳೆಯರಿಗೆ ವಾರ್ಷಿಕ ರೂ. ೧೨,೦೦೦ ಸೇರಿದಂತೆ ಹಲವು ಬರಪೂರ ಭರವಸೆಯ ಪ್ರಣಾಳಿಕೆಯನ್ನು ಬಿಜೆಪಿ ಶುಕ್ರವಾರ ಬಿಡುಗಡೆ ಮಾಡಿದೆ. ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಸರ್ಕಾರ ಬಂದರೆ ಮುಂದಿನ ಐದು ವರ್ಷಗಳಲ್ಲಿ ಛತ್ತೀಸ್ಘಢವನ್ನು ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಜ್ಯವನ್ನಾಗಿ ಮಾಡಲಾಗುವುದು ಎಂದರು. ೯೦ ಸದಸ್ಯ ಬಲದ ಛತ್ತೀಸ್ಘಢ ವಿಧಾನಸಭೆಗೆ ನವೆಂಬರ್ ೭ ಮತ್ತು ೧೭ ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ‘ಮೋದಿ ಕಿ ಗ್ಯಾರಂಟಿ ೨೦೨೩' ಎಂಬ ಶೀರ್ಷಿಕೆಯ ಪ್ರಣಾಳಿಕೆಯಲ್ಲಿ ಛತ್ತೀಸ್ಗಢದ ಜನರಿಗೆ ಬಿಜೆಪಿ ನೀಡಿರುವ ಕೆಲವು ಪ್ರಮುಖ ಭರವಸೆಗಳನ್ನು ನೀಡಿದ ಶಾ, "ಛತ್ತೀಸ್ಘಢದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಕೃಷಿ ಉನ್ನತಿ ಯೋಜನೆಯನ್ನು ಪ್ರಾರಂಭಿಸಲಾಗುವುದು. ಇದರ ಭಾಗವಾಗಿ ರೂ. ೩,೧೦೦ರ ದರದಲ್ಲಿ ೨೧ ಕ್ವಿಂಟಾಲ್ ಭತ್ತವನ್ನು ಖರೀದಿಸುತ್ತೇವೆ. ಖರೀದಿಯಿಂದ ಸಂಗ್ರಹಿಸಿದ ಮೊತ್ತವನ್ನು ರೈತರಿಗೆ ವರ್ಗಾಯಿಸಲಾಗುವುದು ಎಂದು ತಿಳಿಸಿದರು. "ಸರ್ಕಾರಿ ಕಚೇರಿಗಳಲ್ಲಿ ಖಾಯಿಯಿರುವ ಒಂದು ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗುವುದು, ಎಲ್ಲಾ ವಿವಾಹಿತ ಮಹಿಳೆಯರಿಗೆ ವರ್ಷಕ್ಕೆ ೧೨,೦೦೦ ರೂ.ಗಳನ್ನು ನೀಡಲಾಗುವುದು. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ೧೮ ಲಕ್ಷ ಮನೆಗಳ ನಿರ್ಮಾಣ ಹಾಗೂ ಪ್ರತಿ ಮನೆಗೂ ಕುಡಿಯುವ ನೀರು ಪೂರೈಕೆಗೆ ನಿರ್ಧರಿಸಿದ್ದೇವೆ. ಭೂರಹಿತ ರೈತರಿಗೆ ವಾರ್ಷಿಕ ರೂ. ೧೦,೦೦೦ ಅನುದಾನ ನೀಡುತ್ತೇವೆ ಮತ್ತು ರಾಜ್ಯಾದ್ಯಂತ ೫೦೦ ಜನೌಷಧಿ ಕೇಂದ್ರಗಳನ್ನು ಸ್ಥಾಪಿಸುತ್ತೇವೆ ಎಂದು ಅವರು ಹೇಳಿದರು.