ಸುAಟಿಕೊಪ್ಪ, ನ. ೨: ಸುಂಟಿಕೊಪ್ಪ ಪಟ್ಟಣದ ಹೃದಯಭಾಗದಲ್ಲಿ ರಾಜ್ಯ ಸರಕಾರಿ ಸೌಮ್ಯದ ನಂದಿನಿ ಕ್ಷೀರ ಕೇಂದ್ರವು ಮುಚ್ಚಲ್ಪಟ್ಟಿದ್ದು, ಗ್ರಾಹಕರಿಗೆ ಸಮಸ್ಯೆ ಉಂಟಾಗಿದೆ. ಒಂದೂವರೆ ದಶಕದ ಹಿಂದೆ ಸಾರ್ವಜನಿಕ ಹಿತಾಸಕ್ತಿ ಹಿನ್ನೆಲೆಯಲ್ಲಿ ಸಾಕಷ್ಟು ಪ್ರಯತ್ನ ಹಾಗೂ ಬೇಡಿಕೆಯ ಫಲವಾಗಿ ನಂದಿನಿ ಕ್ಷೀರಕೇಂದ್ರ ಸುಂಟಿಕೊಪ್ಪ ಹೋಬಳಿ ಕೇಂದ್ರಕ್ಕೆ ಮಂಜೂರಾತಿ ಆಗಿತ್ತು.

ಕೆಲ ತಿಂಗಳ ಕಾಲ ವಹಿವಾಟು ನಡೆಸಿದ ಬಳಿಕ ವ್ಯಾಪಾರ ನಡೆಸುತ್ತಿದ್ದವರು ವ್ಯವಹಾರ ಕೈಗೂಡದ ಹಿನ್ನೆಲೆಯಲ್ಲಿ ಇನ್ನೊಬ್ಬರಿಗೆ ಪರಬಾರೆ ಮಾಡಿದರು. ಅವರಿಗೂ ವ್ಯಾಪಾರ ಕೈಗೂಡದ ಹಿನ್ನೆಲೆಯಲ್ಲಿ ನಂದಿನಿ ಕ್ಷೀರ ಕೇಂದ್ರವು ಯಾರಿಗೂ ಬೇಡದಂತಾಗಿ ಮುಚ್ಚಲ್ಪಟ್ಟಿದೆ.

ಕೆಎಂಎಫ್ ಒಡೆತನದ ನಂದಿನಿ ಉತ್ಪನ್ನಗಳು ಪ್ರತಿಯೊಬ್ಬರಿಗೂ ಅಚ್ಚುಮೆಚ್ಚಾಗಿದ್ದು, ಜನಮಾನಸದಲ್ಲಿ ಹೆಸರುವಾಸಿಯಾಗಿದೆ. ಬದಲಾದ ಕಾಲಘಟ್ಟದಲ್ಲಿ ಹಳ್ಳಿಗಳಲ್ಲಿ ಕೂಡ ಪಶುಸಂಗೋಪನೆ ಹಿನ್ನಡೆ ಕಂಡಿರುವ ಹಿನ್ನೆಲೆಯಲ್ಲಿ ನಂದಿನಿ ಉತ್ಪನಗಳು ತನ್ನ ಬೇಡಿಕೆಯನ್ನು ಹೆಚ್ಚಿಸಿಕೊಂಡಿದೆ. ಸಾಮಾನ್ಯವಾಗಿ ನಂದಿನಿ ಉತ್ಪನಗಳು ನಿಗಧಿತ ಬೆಲೆಗೆ ಮಾರಾಟವಾಗುತ್ತಿದ್ದು, ಖಾಸಗಿ ಮತ್ತು ಇತರೆ ಏಜೆನ್ಸಿಗಳಲ್ಲಿ ಬೇಡಿಕೆಗೆ ಅನುಗುಣವಾಗಿ ತಮ್ಮ ಬೆಲೆಯನ್ನು ಹೆಚ್ಚಿಸಿಕೊಳ್ಳುವ ಹಿನ್ನೆಲೆಯಲ್ಲಿ ಸಾಮಾನ್ಯ ಜನರಿಗೆ ಮತ್ತು ಖಾಯಂ ಗ್ರಾಹಕರಿಗೆ ನಂದಿನಿ ಕ್ಷೀರ ಕೇಂದ್ರ ಮುಚ್ಚಿರುವ ಕಾರಣ ದುಪ್ಪಟ್ಟು ದರ ನೀಡಬೇಕಾದ ಅನಿವಾರ್ಯತೆ ಇದೆಯೆಂದು ಪತ್ರಿಕೆಯೊಂದಿಗೆ ಸ್ಥಳೀಯರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಸಂಬAಧಿಸಿದ ಕೆಎಂಎಫ್ ಕೇಂದ್ರದ ಅಧಿಕಾರಿಗಳು ಗಮನಹರಿಸಿ ಕ್ಷೀರ ನಂದಿನಿ ಕೇಂದ್ರವನ್ನು ಪುನಾರಾರಂಭಿಸಲು ಮುಂದಾಗಬೇಕೆAದು ಕನ್ನಡ ರಕ್ಷಣಾ ವೇದಿಕೆಯ ಹೋಬಳಿ ಅಧ್ಯಕ್ಷ ನಾಗೇಶ್ ಪೂಜಾರಿ ಆಗ್ರಹಿಸಿದ್ದಾರೆ.

ದಿನದಿಂದ ದಿನಕ್ಕೆ ಸುಂಟಿಕೊಪ್ಪ ಪಟ್ಟಣವು ಜನವಸತಿ ಪ್ರದೇಶವಾಗಿ ಬೆಳೆಯುತ್ತಿದೆ ಹಿಂದಿನ ಆಡಳಿತ ಮಂಡಳಿಯ ಅವಧಿಯಲ್ಲಿ ತೆರೆಯಲಾದ ನಂದಿನಿ ಕ್ಷೀರ ಕೇಂದ್ರವನ್ನು ಲಕ್ಷಾಂತರ ರೂ. ವ್ಯಯಿಸಿ ಸುಂಟಿಕೊಪ್ಪ ಪಟ್ಟಣದ ಹೃದಯ ಭಾಗದಲ್ಲಿ ನಿರ್ಮಿಸಲಾಗಿದೆ. ಆದರೆ ಕೆಲವು ತಿಂಗಳ ಹಿಂದೆಯೇ ಕ್ಷೀರ ಕೇಂದ್ರಕ್ಕೆ ಬೀಗ ಜಡಿಯಲಾಗಿದೆ. ಇದರಿಂದ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿರುವ ಬಗ್ಗೆ ದೂರು ಬಂದಿದ್ದು, ಕ್ಷೀರ ಕೇಂದ್ರವನ್ನು ಕೂಡಲೇ ಪುನಾರಾರಂಭಿಸಲು ಕೆಎಂಎಫ್ ಅಧಿಕಾರಿಗಳು ಗಮನಹರಿಸಿ ಕ್ಷೀರ ಕೇಂದ್ರವು ಸಾರ್ವಜನಿಕರಿಗೆ ಸದುಪಯೋಗವಾಗುವಂತೆ ಅವಕಾಶ ನೀಡಬೇಕಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್ ಒತ್ತಾಯಿಸಿದ್ದಾರೆ.

ಸುಂಟಿಕೊಪ್ಪ ಕ್ಷೀರ ಕೇಂದ್ರವನ್ನು ಮುಚ್ಚಿರುವುದು ನಮ್ಮ ಗಮನಕ್ಕೆ ಬಂದಿರುವುದಿಲ್ಲ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಕೂಡಿಗೆ ನಂದಿನಿ ಕ್ಷೀರ ಕೇಂದ್ರದ ವ್ಯವಸ್ಥಾಪಕರು ತಿಳಿಸಿದರು.