ಕುಶಾಲನಗರ, ನ. ೨: ಆಯುಧ ಪೂಜೆ ಕಳೆದು ಒಂದು ವಾರ ಕಳೆದರೂ ಕುಶಾಲನಗರದಲ್ಲಿ ಎಲ್ಲೆಡೆ ಕುಂಬಳಕಾಯಿ ರಾಶಿ ಕಂಡು ಬರುತ್ತಿದೆ.

ಪಟ್ಟಣದ ಎಲ್ಲಿ ನೋಡಿದರೂ ರಸ್ತೆ ಬದಿಗಳಲ್ಲಿ ನೂರಾರು ಸಂಖ್ಯೆಯ ಕುಂಬಳಕಾಯಿ ರಾಶಿ ಬಿದ್ದಿರುವ ದೃಶ್ಯ ಇನ್ನೂ ಗೋಚರಿಸುತ್ತಿದೆ.

ಈ ಬಾರಿ ಆಯುಧ ಪೂಜೆಯ ಸಂದರ್ಭ ಹೊರ ಜಿಲ್ಲೆಯ ವ್ಯಾಪಾರಿಗಳು ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕುಂಬಳಕಾಯಿ ತರಿಸಿದ್ದು, ಒಂದೆಡೆ ಬೇಡಿಕೆಯ ಕೊರತೆ ಎದ್ದು ಕಂಡು ಬಂದಿತ್ತು.

ಈ ಹಿನ್ನೆಲೆಯಲ್ಲಿ ಭಾರಿ ಗಾತ್ರದ ಕುಂಬಳಕಾಯಿಯ ದರ ಕೂಡ ಕೇವಲ ೩೦ ರಿಂದ ೫೦ ರೂಪಾಯಿಗೆ ಸೀಮಿತವಾಗಿತ್ತು.

ಈ ಸಾಲಿನಲ್ಲಿ ಭಾರಿ ನಷ್ಟಕ್ಕೆ ಒಳಗಾಗಿರುವ ಬಗ್ಗೆ ವ್ಯಾಪಾರಿಗಳು ‘ಶಕ್ತಿ'ಯೊಂದಿಗೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಹಿಂದಿನ ವರ್ಷ ಕುಂಬಳಕಾಯಿ ಒಂದಕ್ಕೆ ೨೦೦ ರಿಂದ ೩೦೦ ತನಕ ದೊರೆತಿತ್ತು ಎಂದು ತಿಳಿಸಿದ್ದಾರೆ. ಚಾಮರಾಜನಗರ, ತಮಿಳುನಾಡು ಭಾಗದಿಂದ ಲಾರಿ ಗಟ್ಟಲೆ ಕುಂಬಳಕಾಯಿ ತರಲಾಗಿದ್ದು, ವ್ಯಾಪಾರಿಗಳು ಉಳಿದ ಕುಂಬಳಕಾಯಿಗಳನ್ನು ಸ್ಥಳದಲ್ಲೇ ಬಿಟ್ಟು ಹೋಗಿರುವ ದೃಶ್ಯ ಅಲ್ಲಲ್ಲಿ ಗೋಚರಿಸಿದೆ. -ಚಂದ್ರಮೋಹನ್