ಹೆಚ್.ಕೆ. ಜಗದೀಶ್
ಗೋಣಿಕೊಪ್ಪಲು, ನ. ೩: ಕೃಷಿಕರ, ರೈತರ ಅಭಿವೃದ್ಧಿಗೆ ಸರ್ಕಾರ ಕಟಿಬದ್ಧವಾಗಿದ್ದು, ಶೇ. ೭೦ಃ೩೦ರ ಅನುಪಾತದಲ್ಲಿ ಕೃಷಿಯಂತ್ರ ಬಳಕೆಗೆ ಅನುದಾನ ಒದಗಿಸುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯದ ಮುಖ್ಯಮಂತ್ರಿಗಳು ವಿಶೇಷ ರೀತಿಯಲ್ಲಿ ಸ್ಪಂದಿಸಿದ್ದಾರೆ. ರಾಜ್ಯದಲ್ಲಿ ೬೦೦ ಯಂತ್ರಧಾರೆ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಈ ಸಾಲಿಗೆ ಪೊನ್ನಂಪೇಟೆ ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಟೆಕ್ನಾಲಜಿ ಕೊಡವ ಎಜುಕೇಷನ್ ಸೊಸೈಟಿ ಕೂಡ ಸೇರಬೇಕು. ಸರ್ಕಾರ ಶೇ.೭೦ ಅನುದಾನ ನೀಡಲಿದೆ. ಉಳಿಕೆ ಶೇ.೩೦ ಅನುದಾನವನ್ನು ಸಂಸ್ಥೆಯು ಭರಿಸಬೇಕು. ಸುತ್ತಮುತ್ತಲಿನ ರೈತರಿಗೆ ಆಧುನಿಕ ಕೃಷಿ ಯಂತ್ರಗಳನ್ನು ಸುಲಭವಾಗಿ ನೀಡಬಹುದಾಗಿದೆ. ಸಂಸ್ಥೆ ಮುಂದೆ ಬರಬೇಕು ಎಂದು ಕರ್ನಾಟಕ ಸರ್ಕಾರದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಕರೆ ನೀಡಿದರು.
ದ.ಕೊಡಗಿನ ಪೊನ್ನಂಪೇಟೆ ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಟೆಕ್ನಾಲಜಿ ಕೊಡವ ಎಜುಕೇಷನ್ ಸೊಸೈಟಿಗೆ ೨೫ ವರ್ಷ ತುಂಬಿದ ಸವಿನೆನಪಿನಲ್ಲಿ ಡಾ.ಎಂ.ಎA. ಚಂಗಪ್ಪ ವೇದಿಕೆಯಲ್ಲಿ ಏರ್ಪಡಿಸಲಾಗಿರುವ ಮೂರು ದಿನಗಳ ರಾಜ್ಯಮಟ್ಟದ ಕೃಷಿ ಯಂತ್ರ ಮೇಳ ಉದ್ಘಾಟಿಸಿ ಮಾತ ನಾಡಿದ ಸಚಿವರು, ವಿದ್ಯಾಸಂಸ್ಥೆಯು ಉತ್ತಮ ರೀತಿಯ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ; ರಾಜ್ಯದ ವಿವಿಧ ಭಾಗದಿಂದ ೧೮೦ಕ್ಕೂ ಅಧಿಕ ಆಧುನಿಕ ಕೃಷಿಯಂತ್ರಗಳ ಪ್ರದರ್ಶನದಿಂದ ಸ್ಥಳೀಯ ರೈತರಿಗೆ ಉತ್ತಮ ಅವಕಾಶ ನೀಡಿದಂತಾಗಿದೆ. ರೈತರು ಕೂಡ ಆಧುನಿಕ ಯಂತ್ರವನ್ನು ಬಳಕೆ ಮಾಡಿಕೊಳ್ಳುವ ಮೂಲಕ
ತಮ್ಮ ಕೃಷಿ ಚಟುವಟಿಕೆಗಳನ್ನು ಮುಂದುವರೆಸಬೇಕು. ರಾಜ್ಯದ ರೈತರ ಅಭ್ಯುದಯಕ್ಕೆ ಈಗಾಗಲೇ ಬಜೆಟ್ನಲ್ಲಿ ರೂ.೧೦೦ ಕೋಟಿ ಅನುದಾನ ಮೀಸಲಿಡಲಾಗಿದೆ. ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಚರ್ಚಿಸಿ ಮುಂದಿನ ಬಜೆಟ್ನಲ್ಲಿಯೂ ಹೆಚ್ಚಿನ ಅನುದಾನಕ್ಕೆ ಪ್ರಸ್ತಾಪ ಸಲ್ಲಿಸಲಾಗುವುದು. ಕೊಡಗು ರಾಜ್ಯದ ಪ್ರಮುಖ ಆಕರ್ಷಣೀಯ, ವೀರ ಯೋಧರ ಜಿಲ್ಲೆ. ಕೊಡಗು ಒಮ್ಮೆ ನೋಡಬೇಕು ಎಂಬ ಬಯಕೆ ಹೊರಜಿಲ್ಲೆಯವರಲ್ಲಿಯೂ ಸದಾ ಇದೆ ಎಂದು ಹೇಳಿದರು.
ಕಾರ್ಮಿಕರ ಕೊರತೆ ಹಿನ್ನೆಲೆಯಲ್ಲಿ ಆಧುನಿಕ ಕೃಷಿ ಪದ್ಧತಿಯನ್ನು. ಅಳವಡಿಸಿಕೊಳ್ಳುವ ಅನಿವಾರ್ಯತೆ ಇದೀಗ ರೈತರ ಮುಂದಿದೆ. ಭತ್ತದ ಕೊಯ್ಲು ಯಂತ್ರವನ್ನು ಸಂಘ ಸಂಸ್ಥೆಗಳು ಖರೀದಿಸಿ ರೈತರಿಗೆ ಬಾಡಿಗೆ ಆಧಾರದಲ್ಲಿ ನೀಡಲು ಅವಕಾಶವಿದೆ. ಯಂತ್ರ ಖರೀದಿಸಿದಲ್ಲಿ ೭೦ಃ೩೦ ಅನುಪಾತದಲ್ಲಿ ಸರ್ಕಾರ ಸಬ್ಸಿಡಿ ಸೌಲಭ್ಯ ನೀಡಲಿದೆ. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕವೂ ರಾಜ್ಯದಲ್ಲಿ ಸುಮಾರು ೧೬೦ ಕೇಂದ್ರಗಳಲ್ಲಿ ಕೃಷಿ ಯಂತ್ರಧಾರೆ ಅನುಷ್ಠಾನ ಮೂಲಕ ರೈತರಿಗೆ ಪೂರಕ ಸಹಕಾರ ನೀಡಲಾಗುತ್ತಿದೆ.
ಇಲ್ಲಿನ ಆವರಣದಲ್ಲಿ ೧೫೦ಕ್ಕೂ ಅಧಿಕ ಕೃಷಿ ಯಂತ್ರ ಪ್ರದರ್ಶನ ಮಳಿಗೆ ಇದ್ದು ಕೃಷಿಕರು ಸದುಪಯೋಗ ಮಾಡಿಕೊಳ್ಳುವಂತೆ ಕರೆ ನೀಡಿದರು. ರಾಜ್ಯದ ಕೃಷಿ ಕ್ಷೇತ್ರದಲ್ಲಿಯೂ ಹಲವಷ್ಟು ಲೋಪದೋಷಗಳಿದ್ದು ಜಿಲ್ಲಾವಾರು ಅಧ್ಯಯನ ಮಾಡಿ ವರದಿ ನೀಡಲು ಆಯಾಯ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿದೆ. ವರದಿಯ ಆಧಾರದಲ್ಲಿ
(ಮೊದಲ ಪುಟದಿಂದ) ಮುಂದಿನ ಸಾಲಿನಲ್ಲಿ ರಾಜ್ಯ ಹೊಸ ಕೃಷಿ ನೀತಿ ಅಳವಡಿಸಿ ರೈತರಿಗೆ ಪೂರಕ ನೆರವು ನೀಡಲಾಗುವುದು ಎಂದು ಹೇಳಿದರು.
ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಕೊಟ್ಟ ಮಾತಿನಂತೆಯೇ ಅನುಷ್ಠಾನಗೊಳಿಸಲಾಗಿದೆ. ಸಣ್ಣ ಪುಟ್ಟ ಲೋಪ ದೋಷಗಳನ್ನು ಸರಿಪಡಿಸಲು ಹಾಗೂ ಜನತೆಗೆ ನೀಡಿದ ಭರವಸೆ ಈಡೇರಿಸಲು ಮುಖ್ಯಮಂತ್ರಿ ಮತ್ತು ಸಚಿವ ಸಂಪುಟದವರು ಹಗಲೂ ರಾತ್ರಿ ಶ್ರಮಿಸುತ್ತಿದ್ದಾರೆ. ರಾಜ್ಯದ ಕೃಷಿಕರ ಅನುಕೂಲಕ್ಕಾಗಿ ೬೦೦ಕ್ಕೂ ಹೆಚ್ಚು ಯಂತ್ರಧಾರೆ ಕೇಂದ್ರಗಳನ್ನು ತೆರೆದು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚು ಯಾಂತ್ರೀಕರಣಕ್ಕೆ ಪ್ರೋತ್ಸಾಹ ಯೋಜನೆ ಜಾರಿಗೆ ತರಲಾಗುತ್ತಿದೆ.
ರಾಜ್ಯದಲ್ಲಿ ಹೈಟೆಕ್ ಕಟಾವು ಹಬ್ ಸ್ಥಾಪನೆಗೆ ೫೦ ಕೋಟಿ ಮೀಸಲಿರಿಸಲಾಗಿದೆ. ಶೇ.೭೦ಃ೩೦ರ ಅನುಪಾತದಲ್ಲಿ ಸಹಾಯಧನ- ಬಂಡವಾಳ ಹೂಡಿಕೆ ಅನುಪಾತದಲ್ಲಿ ರೈತರೇ ಇದನ್ನು ಸ್ಥಾಪಿಸಿ ನಡೆಸಬಹುದಾಗಿದೆ. ಕಾವೇರಿ, ನಮ್ಮ ನಾಡಿನ ಜೀವನದಿ ಕೊಡಗಿನಲ್ಲಿ ಹುಟ್ಟಿ ರಾಜ್ಯದ ಕೋಟ್ಯಂತರ ಜನರ ಜೀವನಾಧಾರವಾಗಿ ಹರಿಯುತ್ತಿದೆ. ಈ ಬಾರಿ ಬರ ಪರಿಸ್ಥಿತಿ ತಲೆದೋರಿದ್ದು ನೀರಿನ ಹಂಚಿಕೆ ಸಮಸ್ಯೆಯೂ ಉದ್ಭವವಾಗಿದೆ. ಕೇಂದ್ರಕ್ಕೆ ಬೆಳೆ ಪರಿಹಾರಕ್ಕೆ ಮನವಿ ಸಲ್ಲಿಸಿದ್ದೇವೆ. ರಾಜ್ಯದಲ್ಲಿ ನೂತನ ಸರ್ಕಾರದ ಬಂದು ನಾಲ್ಕು ತಿಂಗಳಲ್ಲಿ ನಾವು ನೀಡಿದ ಭರವಸೆ ಈಡೇರಿಸಿದ್ದೇವೆ ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದರು.
ಕೃಷಿ ಬೆನ್ನೆಲುಬು :ಕೃಷಿ ಯಂತ್ರ ಮೇಳದ ಮಳಿಗೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ, ಯಂತ್ರಗಳ ಬಳಕೆಯಿಂದ ಕೃಷಿ ಚಟುವಟಿಕೆಗಳು ಬಹಳಷ್ಟು ಮುಂದುವರೆದಿದೆ. ಆಧುನಿಕ ಕೃಷಿ ಮುಂದುವರೆಸಿದಲ್ಲಿ ಮಾತ್ರ ಕೃಷಿಕರು ಹಾಗೂ ರೈತರು ಉಳಿಯಲು ಸಾಧ್ಯ. ಪ್ರಪಂಚದ ಭವಿಷ್ಯ ಕೃಷಿಯ ಮೇಲೆ ನಿಂತಿದೆ. ಕೃಷಿಕರಿಲ್ಲದಿದ್ದಲ್ಲಿ ಪ್ರಪಂಚಕ್ಕೆ ಭವಿಷ್ಯವಿಲ್ಲ. ಆಧುನಿಕ ವರದಿಯ ಆಧಾರದ ಮೇಲೆ ಈ ಮಾತನ್ನು ಉಲ್ಲೇಖಿಸಿದ್ದೇನೆ. ಕೃಷಿಯಲ್ಲಿ ಮುಂದುವರೆಯಬೇಕು. ಆರ್ಥಿಕವಾಗಿ ಸದೃಢವಾಗಲು ಆಧುನಿಕ ಕೃಷಿಯನ್ನು ರೂಡಿಸಿಕೊಳ್ಳಬೇಕು. ಹೊಸ ತಂತ್ರಜ್ಞಾನದೊAದಿಗೆ ಹೊಸ ಯಂತ್ರಗಳೊAದಿಗೆ ಕೃಷಿ ಚಟುವಟಿಕೆಗಳಿಗೆ ಹೊಂದಿಕೊಳ್ಳಬೇಕು. ಇದರಿಂದ ಕೃಷಿಕ ಆರ್ಥಿಕವಾಗಿ ಮುಂದೆ ಬರಲು ಸಾಧ್ಯವಾಗಲಿದೆ. ದೇಶದಲ್ಲಿ ಕೃಷಿಯನ್ನು ಉಳಿಸಲು ಸಾಧ್ಯವಾಗಲಿದೆ ಎಂದರು. ಶೇ.೭೫ ಕೃಷಿಕರು ದೇಶದಲ್ಲಿ ಕೃಷಿಯನ್ನು ಅವಲಂಭಿಸಿದ್ದಾರೆ. ಈ ದೇಶದ ಬೆನ್ನೆಲುಬು ಕೃಷಿಯಾಗಿದೆ. ಈ ನಿಟ್ಟಿನಲ್ಲಿ ಅನ್ನದಾತನ ರಕ್ಷಣೆಗೆ ಸರ್ಕಾರ ಕಂಕಣಬದ್ದವಾಗಿದೆ. ಸಿದ್ದರಾಮಯ್ಯನವರ ಸರ್ಕಾರ ಸಂಪೂರ್ಣವಾಗಿ ಕೃಷಿಕರ, ರೈತರ ಪರವಾಗಿದೆ. ರೈತ ಕುಟುಂಬದಿAದ ಬಂದಿರುವ ಶಾಸಕರು ಇಂದು ಕೃಷಿ ಸಚಿವರಾಗಿದ್ದಾರೆ. ರೈತರ ಬಗ್ಗೆ ವಿಶೇಷ ಕಾಳಜಿ ಇವರಿಗಿದೆ. ಕೃಷಿಕರ, ರೈತರ ಸಮಸ್ಯೆಗಳನ್ನು ಹತ್ತಿರದಿಂದ ಬಲ್ಲವರಾಗಿದ್ದಾರೆ. ಇವರಿಂದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ಆಶಾ ಭಾವನೆ ವ್ಯಕ್ತಪಡಿಸಿದರು.
ಪೊನ್ನಂಪೇಟೆ ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಟೆಕ್ನಾಲಜಿ ಕೊಡವ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಡಾ. ಎಂ.ಸಿ. ಕಾರ್ಯಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು, ಸಂಸ್ಥೆಗೆ ೨೫ ವರ್ಷ ತುಂಬಿದ ಸವಿನೆನಪಿನಲ್ಲಿ ಈ ನಾಡಿನ ಜನರಿಗೆ ವಿಶೇಷ ಕಾರ್ಯಕ್ರಮ ನೀಡುವ ಸಲುವಾಗಿ ಅದರಲ್ಲೂ ವಿಶೇಷವಾಗಿ ರೈತರಿಗೆ ಅನುಕೂಲವಾಗಲು ಸಂಸ್ಥೆ ಆವರಣದಲ್ಲಿ ರಾಜ್ಯಮಟ್ಟದ ಕೃಷಿ ಯಂತ್ರ ಮೇಳವನ್ನು ಆಯೋಜಿಸಲಾಗಿದೆ. ಸಂಸ್ಥೆಯ ಬೆಳವಣಿಗೆಗೆ ಈ ನಾಡಿನ ಜನತೆ ಸಹಕಾರ ನೀಡಿದ್ದಾರೆ. ಹಾಗಾಗಿ ಬೆಳ್ಳಿ ಮಹೋತ್ಸವ ಸವಿನೆನಪಿನಲ್ಲಿ ಕೃಷಿಯಂತ್ರಮೇಳ ಆಯೋಜಿಸಲಾಗಿದೆ. ಇದರಿಂದ ರೈತರಿಗೆ, ಕೃಷಿಕರಿಗೆ ಅನುಕೂಲವಾಗಲಿದೆ ಎಂದರು.
ಸಾಧಕರಿಗೆ ಸನ್ಮಾನ
ಕಾರ್ಯಕ್ರಮ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ, ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ.ವಿಜಯ್ ಅಂಗಡಿ, ಕೃಷಿಕರಾದ ಬಾರಿಯಂಡ ಸಜನ್ ಪೊನ್ನಪ್ಪ, ವಾಟೇರಿರ ಪೊನ್ನಪ್ಪ, ಕೆ.ಎಸ್. ಮಂಜುನಾಥ್, ಚೆಟ್ಟಿನೆರವನ ಪಿ. ಚಂದ್ರಶೇಖರ್, ಬಿ.ಎಂ.ಸಾಗರ್ ಇವರನ್ನು ಅತಿಥಿ ಗಣ್ಯರು ಸನ್ಮಾನಿಸಿ ಗೌರವಿಸಿದರು.
ವೇದಿಕೆಯಲ್ಲಿ ಡಿಸಿಸಿ ಬ್ಯಾಂಕ್ನ ಅಧ್ಯಕ್ಷ ಕೊಡಂದೇರ ಪಿ.ಗಣಪತಿ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ನಿರ್ದೇಶಕಿ ಲೀಲಾವತಿ, ಸಂಸ್ಥೆಯ ಉಪಾಧ್ಯಕ್ಷ ಕೆ.ಎ. ಚಿನ್ನಪ್ಪ, ಕೋಶಾಧಿಕಾರಿ ಕೆ.ಎನ್.ಉತ್ತಪ್ಪ, ಕಾರ್ಯದರ್ಶಿ ಸಿ.ಪಿ. ರಾಕೇಶ್ ಪೂವಯ್ಯ ಪ್ರಾಂಶುಪಾಲ ಡಾ. ಎಂ. ಬಸವರಾಜ್, ಬೆಳ್ಳಿ ಹಬ್ಬದ ಸಂಚಾಲಕಿ ಡಾ.ರೋಹಿಣಿ ತಿಮ್ಮಯ್ಯ, ಕೃಷಿ ಯಂತ್ರ ಮೇಳದ ಸಂಚಾಲಕ ಡಾ. ಬಿ.ಬಿ. ರಾಮಕೃಷ್ಣ, ಕೊಡಗು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಉಪನ್ಯಾಸಕಿ ಸುಶ್ಮಿತ ಪಿ.ವಿ. ನಿರೂಪಿಸಿ, ವಿದ್ಯಾರ್ಥಿನಿ ಲಕ್ಷಿö್ಮ ಪ್ರಾರ್ಥಿಸಿ, ಕೃಷಿ ಯಂತ್ರ ಮೇಳದ ಸಂಚಾಲಕ ಡಾ. ಬಿ.ಬಿ.ರಾಮಕೃಷ್ಣ ಸ್ವಾಗತಿಸಿ,
ಡಾ. ಸಿ. ಪ್ರಮುಖ್ ಗಣಪತಿ ವಂದಿಸಿದರು. ಸುತ್ತಮುತ್ತಲಿನ ಗ್ರಾಮದ ಕೃಷಿಕರು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಂಸ್ಥೆಗೆ ಆಗಮಿಸಿದ ಕೃಷಿ ಸಚಿವ ಚಲುವರಾಯಸ್ವಾಮಿಯವರನ್ನು ವಿದ್ಯಾರ್ಥಿಗಳು ಗೌರವಪೂರ್ವಕವಾಗಿ ಸ್ವಾಗತಿಸಿದರು. ಸಂಸ್ಥೆಯ ಆಡಳಿತ ಮಂಡಳಿಯೊAದಿಗೆ ಸಚಿವರು ಕೆಲ ಕಾಲ ವಿಚಾರ ವಿನಿಮಯ ನಡೆಸಿದರು.