(ಕೆ.ಎಂ ಇಸ್ಮಾಯಿಲ್ ಕಂಡಕರೆ)

ಮಡಿಕೇರಿ, ನ. ೨ : ಕೊಡಗು ಜಿಲ್ಲೆಯಲ್ಲಿ ಹೊಸದಾಗಿ ಮೂರು ಇಂದಿರಾ ಕ್ಯಾಂಟೀನ್ ನಿರ್ಮಿಸಲು ರಾಜ್ಯ ಕಾಂಗ್ರೆಸ್ ಸಮ್ಮತ್ತಿ ಸೂಚಿಸಿದ್ದು, ಇದರಿಂದ ಕೊಡಗು ಜಿಲ್ಲೆಯಲ್ಲಿ ಇಂದಿರಾ ಕ್ಯಾಂಟೀನ್‌ಗಳ ಸಂಖ್ಯೆ ಐದಕ್ಕೇರಿಕೆಯಾಗಲಿದೆ.

ಜಿಲ್ಲೆಯಲ್ಲಿ ಮಡಿಕೇರಿ ಹಾಗೂ ವೀರಾಜಪೇಟೆಯಲ್ಲಿ ೨೦೧೮ ರಿಂದ ಇಂದಿರಾ ಕ್ಯಾಂಟೀನ್ ಕಾರ್ಯ ನಿರ್ವಹಿಸುತ್ತಿದೆ.

೨೦೧೮ ರಿಂದಲೂ ತಾಲೂಕು ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಬೇಕೆಂಬ ಕೂಗು ಜಿಲ್ಲೆಯಲ್ಲಿ ಕೇಳಿಬರುತ್ತಿತ್ತು.

ಆದರೆ ೨೦೧೯ ರ ನಂತರ ರಾಜ್ಯ ರಾಜಕಾರಣದಲ್ಲಿ ಉಂಟಾದ ಬದಲಾವಣೆಯಿಂದ, ಬಡವರ ಹಸಿವು ನೀಗಿಸುವ ಇಂದಿರಾ ಕ್ಯಾಂಟೀನ್ ಇದ್ದರೂ ಇಲ್ಲದ ಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಈ ಹಿಂದಿನ ಯಡಿಯೂರಪ್ಪ ಹಾಗೂ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಇಂದಿರಾ ಕ್ಯಾಂಟೀನ್‌ಗಳಿಗೆ ವಿಶೇಷ ಅನುದಾನ ಹಾಗೂ ಹೊಸ ಇಂದಿರಾ ಕ್ಯಾಂಟೀನ್ ಸ್ಥಾಪನೆಗೆ ಮುಂದಾಗದೆ ಇಂದಿರಾ ಕ್ಯಾಂಟೀನ್ ಗಳನ್ನು ಮುಚ್ಚುವ ಹಂತಕ್ಕೆ ಬಂದಿದ್ದರು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಹೊಸ ಇಂದಿರಾ ಕ್ಯಾಂಟೀನ್ ಹಾಗೂ ಹಳೆಯ ಇಂದಿರಾ ಕ್ಯಾಂಟೀನ್‌ಗಳಿಗೆ ಮರು ಜೀವ ನೀಡಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಕೊಡಗು ಜಿಲ್ಲೆಯ ಮಡಿಕೇರಿ ನಗರದಲ್ಲಿ ಮತ್ತೊಂದು ಇಂದಿರಾ ಕ್ಯಾಂಟೀನ್, ಕುಶಾಲನಗರ ಹಾಗೂ ಸೋಮವಾರಪೇಟೆ ಹೊಸ ಇಂದಿರಾ ಕ್ಯಾಂಟೀನ್ ಸ್ಥಾಪಿಸಲು ಸರ್ಕಾರ ಒಪ್ಪಿಗೆ ನೀಡಿದೆ.

ಅದಲ್ಲದೆ ಪೊನ್ನಂಪೇಟೆ ತಾಲೂಕಿನಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪಿಸಲು ಶೀಘ್ರದಲ್ಲೇ ಪ್ರಸ್ತಾವನೆ ಸಲ್ಲಿಸುವಂತೆ ಸರ್ಕಾರ ಸೂಚಿಸಿದೆ.

ಜಿಲ್ಲಾ ಆಸ್ಪತ್ರೆ ಬಳಿ ನೂತನ ಇಂದಿರಾ ಕ್ಯಾಂಟೀನ್!

ಮಡಿಕೇರಿ ನಗರದ ನೂತನ ಖಾಸಗಿ ಬಸ್ ನಿಲ್ದಾಣದ ಬಳಿ ೨೦೧೮ ರಿಂದ ಇಂದಿರಾ ಕ್ಯಾಂಟೀನ್ ಕಾರ್ಯನಿರ್ವಹಿಸುತ್ತಿದೆ. ಆದರೆ ಮಡಿಕೇರಿ ನಗರದಲ್ಲಿ ಜನಸಂದಣಿ ಇಲ್ಲದ ಪ್ರದೇಶದಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪನೆ ಮಾಡಿರುವುದಕ್ಕೆ ಜನರಿಂದ ಅಸಮಾಧಾನ ಕೂಡ ವ್ಯಕ್ತವಾಗಿತ್ತು.

(ಮೊದಲ ಪುಟದಿಂದ) ಮಡಿಕೇರಿ ನಗರದ ಜಿಲ್ಲಾಸ್ಪತ್ರೆ ಬಳಿಯಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಬೇಕೆಂಬ ಕೂಗು ಕಳೆದ ಹಲವು ವರ್ಷಗಳಿಂದ ಕೇಳಿಬರುತ್ತಿತ್ತು. ಜಿಲ್ಲಾ ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಕಡಿಮೆ ದರದಲ್ಲಿ ಊಟ ದೊರೆಯುತ್ತದೆ ಹಾಗೂ ಮಡಿಕೇರಿ ನಗರದಲ್ಲಿ ಇಂದಿರಾ ಕ್ಯಾಂಟೀನ್‌ಗೆ ಹೆಚ್ಚು ಪ್ರಚಾರ ಕೂಡ ಸಿಗುತ್ತದೆ ಎಂದು ಜನವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗಿತ್ತು.

ಇದೀಗ ರಾಜ್ಯ ಸರ್ಕಾರ ಮಡಿಕೇರಿ ನಗರದಲ್ಲಿ ಮತ್ತೊಂದು ಇಂದಿರಾ ಕ್ಯಾಂಟೀನ್ ಸ್ಥಾಪಿಸಲು ಶೀಘ್ರದಲ್ಲೇ ನಗರಾಭಿವೃದ್ಧಿ ಕೋಶಾಕ್ಕೆ ಜಾಗ ಗುರುತಿಸಲು ಸೂಚನೆ ನೀಡಿದೆ. ಮಡಿಕೇರಿ ನಗರದಲ್ಲಿ ಜಿಲ್ಲಾ ಆಸ್ಪತ್ರೆ ಬಳಿಯಲ್ಲಿಯೇ ಬಡವರ ಹಸಿವು ನೀಗಿಸುವ ಇಂದಿರಾ ಕ್ಯಾಂಟೀನ್ ತೆರೆಯುವ ಸಾಧ್ಯತೆಗಳಿವೆ.

ಹಲವು ವರ್ಷಗಳ ಬೇಡಿಕೆ!

ಮಡಿಕೇರಿ ನಗರ ಹಾಗೂ ವೀರಾಜಪೇಟೆ ಪಟ್ಟಣದಲ್ಲಿ ೨೦೧೮ ರಲ್ಲಿ ಇಂದಿರಾ ಕ್ಯಾಂಟೀನ್ ತೆರೆದಾಗ ಜಿಲ್ಲೆಯಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ವಾಣಿಜ್ಯ ನಗರಿ ಕುಶಾಲನಗರದಲ್ಲಿ ಇಂದಿರಾ ಕ್ಯಾಂಟೀನ್ ತೆಗೆಯಬೇಕೆಂಬ ಕೂಗು ಕೇಳಿ ಬರುತ್ತಿತ್ತು. ಇದೀಗ ಕುಶಾಲನಗರದ ಜನತೆಯ ಕೂಗಿಗೆ ರಾಜ್ಯ ಸರ್ಕಾರ ಮನ್ನಣೆ ನೀಡಿದ್ದು ಕುಶಾಲನಗರದಲ್ಲಿ ಶೀಘ್ರದಲ್ಲೇ ಇಂದಿರಾ ಕ್ಯಾಂಟೀನ್ ಸ್ಥಾಪನೆಯಾಗಲಿದೆ.

ಕೊಡಗು ಜಿಲ್ಲೆಯಲ್ಲಿ ಕಾರ್ಖಾನೆ ಹಾಗೂ ಅತೀ ಹೆಚ್ಚು ವ್ಯಾಪಾರ ವಹಿವಾಟು ನಡೆಯುವ ಪಟ್ಟಣ. ಅತೀ ಹೆಚ್ಚು ಜನಸಂದಣಿ ಕೂಡ ಕುಶಾಲನಗರದಲ್ಲಿ ಉಂಟಾಗಲಿದೆ.

ಬಡವರು ಹಾಗೂ ಕೂಲಿ ಕಾರ್ಮಿಕರು ದಿನನಿತ್ಯ ಕುಶಾಲನಗರದ ಸುತ್ತಮುತ್ತಲು ಕೆಲಸ ಮಾಡುತ್ತಿದ್ದಾರೆ.

ಕೂಲಿ ಕಾರ್ಮಿಕರು ಹಾಗೂ ಬಡವರಿಗೆ ಕಡಿಮೆ ದರದಲ್ಲಿ ಊಟ ದೊರೆಯುವುದು ಕಷ್ಟ ಸಾಧ್ಯ. ಸದ್ಯದಲ್ಲೇ ಕುಶಾಲನಗರದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯುವುದರಿಂದ ಕಡಿಮೆ ದರದಲ್ಲಿ ಬಡವರ ಹಸಿವು ನೀಗಲಿದೆ.

ಈಗಾಗಲೇ ಮಡಿಕೇರಿ ಕ್ಷೇತ್ರದ ಶಾಸಕ ಡಾ ಮಂಥರ್ ಗೌಡ ಅವರು, ಕುಶಾಲನಗರದ ಸರ್ಕಾರಿ ಬಸ್ ನಿಲ್ದಾಣದ ಬಳಿಯಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪಿಸಲು ಜಾಗ ಕೂಡ ಪರಿಶೀಲಿಸಿದ್ದು, ಅತೀ ಹೆಚ್ಚು ಕಾರ್ಮಿಕರು, ವಿದ್ಯಾರ್ಥಿಗಳ ಒಡಾಟವಿರುವ ಸರ್ಕಾರಿ ಬಸ್ ನಿಲ್ದಾಣದ ಬಳಿ ಇಂದಿರಾ ಕ್ಯಾಂಟೀನ್ ತೆರೆದರೆ ಬಡವರಿಗೆ ಉಪಯೋಗವಾಗಲಿದೆ.

ಬೇಡಿಕೆಗೆ ಸ್ಪಂದಿಸಿದ ಸರ್ಕಾರ!

ಸೋಮವಾರಪೇಟೆ ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪಿಸಬೇಕೆಂಬ ಕೂಗು ನಿನ್ನೆ ಮೊನ್ನೆಯದ್ದಲ್ಲ. ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್ ಕಾರ್ಯನಿರ್ವಹಿಸುತ್ತಿರುವ ದಿನಗಳಿಂದಲೇ ಸೋಮವಾರಪೇಟೆ ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪಿಸಬೇಕೆಂಬ ಕೂಗು ವ್ಯಕ್ತವಾಗಿತ್ತು. ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪಿಸಿದ್ದಾಗಲೇ ಸೋಮವಾರಪೇಟೆ ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲು ಅನುಮತಿ ನೀಡಲಾಗಿತ್ತು. ಆದರೆ ಕಟ್ಟಡ ಮಾತ್ರ ಮೇಲೇರಲೇ ಇಲ್ಲ. ಕಟ್ಟಡ ಕಾಮಗಾರಿ ಮುಗಿಸಿ ಇಂದಿರಾ ಕ್ಯಾಂಟೀನ್ ತೆರೆಯುವಂತೆ ಸೋಮವಾರಪೇಟೆ ಭಾಗದ ವಿವಿಧ ಸಂಘ-ಸAಸ್ಥೆಗಳು ಪಟ್ಟಣ ಪಂಚಾಯಿತಿಗೆ ಮನವಿ ಸಲ್ಲಿಸಿದ್ದವು.

ಎರಡು ವರ್ಷಗಳ ಹಿಂದೆಯೇ ಹಿಂದಿನ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಲಾಗಿತ್ತು. ಆದರೆ ಅವರ ಮನವಿಗೆ ಯಾರೂ ಕೂಡ ಸ್ಪಂದಿಸಲಿಲ್ಲ. ಇದೀಗ ಏಳು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸೋಮವಾರಪೇಟೆ ಪಟ್ಟಣ ಇಂದಿರಾ ಕ್ಯಾಂಟೀನ್‌ಗೆ ಮರುಜೀವ ಬಂದಿದ್ದು, ಸದ್ಯದಲ್ಲೇ ಸೋಮವಾರಪೇಟೆ ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣವಾಗಲಿದೆ.