ಸಿದ್ದಾಪುರ, ನ. ೩: ಚೆಟ್ಟಳ್ಳಿಯ ವ್ಯಕ್ತಿಯೊಬ್ಬರ ಸಾವಿನ ಬಗ್ಗೆ ವಾಟ್ಸಾö್ಯಪ್‌ನಲ್ಲಿ ಕೊಲೆ ಶಂಕೆ ಎಂದು ಪ್ರಚಾರ ಮಾಡಿದ ವ್ಯಕ್ತಿಯ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಚೆಟ್ಟಳ್ಳಿಯ ಗಗನ್ ಎಂಬವರ ಮೃತದೇಹ ಇತ್ತೀಚೆಗೆ ಬಿ.ಶೆಟ್ಟಿಗೇರಿಯಲ್ಲಿ ಪತ್ತೆಯಾಗಿತ್ತು. ಈ ವಿಚಾರವಾಗಿ ನೆಲ್ಯಹುದಿಕೇರಿಯ ನಿವಾಸಿ ವಸಂತ್ ಎಂಬಾತ ಸಾವನ್ನು ಕೊಲೆ ಶಂಕೆ ಎಂದು ಸುದ್ದಿ ಹಬ್ಬಿಸಿರುವುದರಿಂದ ಈಗಾಗಲೇ ಸಾವಿನಿಂದಾಗಿ ನೊಂದಿರುವ ಕುಟುಂಬದಲ್ಲಿ ಮತ್ತಷ್ಟು ನೋವು ಉಂಟಾಗಿದೆ. ವಸಂತ್ ಎಂಬಾತ ಯಾವುದೇ ಪತ್ರಿಕೆಗಳಲ್ಲಿ ಕೆಲಸ ನಿರ್ವಹಿಸುತ್ತಿಲ್ಲವಾದರೂ ಸಾಮಾಜಿಕ ಜಾಲತಾಣವಾದ ವಾಟ್ಸಾö್ಯಪ್‌ನಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸುವುದರಲ್ಲಿ ನಿರತನಾಗಿದ್ದಾನೆ. ಇದೀಗ ಗಗನ್ ಸಾವಿನಲ್ಲಿ ಪೊಲೀಸ್ ತನಿಖೆಯ ಮುಂಚೆಯೇ ಕೊಲೆ ಶಂಕೆ ಎಂದು ಸುಳ್ಳು ಸುದ್ದಿಯನ್ನು ಹಬ್ಬಿಸಿ ಪ್ರಚಾರ ಮಾಡಿರುವ ಹಾಗೂ ಕ್ಷೇತ್ರದ ಶಾಸಕರನ್ನು ಮತ್ತು ದಕ್ಷ ಪೊಲೀಸ್ ವರಿಷ್ಠಾಧಿಕಾರಿಗಳ ನಡತೆಯ ಬಗ್ಗೆ ಸಂಶಯ ಮೂಡುವಂತೆ ಸುದ್ದಿ ಹಬ್ಬಿಸಿರುವ ವಸಂತ್ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಚೆಟ್ಟಳ್ಳಿಯ ಪಪ್ಪು ತಿಮ್ಮಯ್ಯ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.